ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯಲ್ಲಿ ವರ್ಷಕ್ಕೆ 10-15 ಐಎಎಸ್ ಅಧಿಕಾರಿಗಳನ್ನು ತಯಾರಿಸುವ ಕನಸು ನನ್ನದಾಗಿದೆ. ಇದಕ್ಕೆ ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿಯವರು ಸಾಥ್ ನೀಡಲು ಸಿದ್ಧರಿದ್ದಾರೆ. ವಿಶೇಷವಾಗಿ ಬಡ ಪ್ರತಿಭಾವಂತ ಮಕ್ಕಳನ್ನು ಹುಡುಕಿ ಉನ್ನತ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಪಿಯುಸಿ ಕಾಲೇಜುಗಳ ಪ್ರಾಂಶುಪಾಲರು, ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಇಲ್ಲಿನ ತಮ್ಮ ದಾಸೋಹ ನಿಲಯದಲ್ಲಿ ರವಿವಾರ ಸಂಜೆ ಏರ್ಪಡಿಸಿದ್ದ ಮುದ್ದೇಬಿಹಾಳ, ಬಸವನಬಾಗೇವಾಡಿ, ಸಿಂದಗಿ ತಾಲೂಕುಗಳ ಪಿಯುಸಿ ಇಂಗ್ಲಿಷ್ ಪತ್ರಿಕೆ ಬರೆಯುವ 10,000 ವಿದ್ಯಾರ್ಥಿಗಳು, 500 ಪರೀಕ್ಷಾ ಸಿಬ್ಬಂದಿಗೆ ಉಚಿತ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ಆಯಾ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಮೂಲಕ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಬುದ್ಧಿಮತ್ತೆ ಅನಾವರಣದ ಕೌಶಲ್ಯಗಳನ್ನು ತಿಳಿಸಿಕೊಡಬೇಕು. ಮುಂದಿನ ದಿನಗಳಲ್ಲಿ ಕೋವಿಡ್ ಮಹಾಮಾರಿ ತೀವ್ರಗೊಳ್ಳುವ ಆತಂಕ ಇದೆ. ಅಂತಹ ಪರಿಸ್ಥಿತಿ ಬಂದಲ್ಲಿ ವಿದ್ಯಾರ್ಥಿಗಳಿಗೆ ಹೇಗೆ ಅನುಕೂಲ ಕಲ್ಪಿಸಿಕೊಡಬೇಕು ಎನ್ನುವ ಕುರಿತು ಚಿಂತನೆ ನಡೆಸಿದ್ದೇನೆ. ಜೂನ್ 18ರಂದು ಇಂಗ್ಲಿಷ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಭಯಮುಕ್ತರಾಗಿ ಪರೀಕ್ಷೆ ಎದುರಿಸುವಂತೆ ನೋಡಿಕೊಳ್ಳಬೇಕು ಎಂದರು.
ತುಮಕೂರು ಸಿದ್ಧಗಂಗಾಮಠದ ವಿದ್ಯಾರ್ಥಿಯಾಗಿರುವ ನನಗೆ ಬಡವರ ನೋವು ಗೊತ್ತಿದೆ. ಬಡವರೇ ನನ್ನ ಪಾಲಿಗೆ ದೇವರು. ಮಾಂಗಲ್ಯದಾಸೋಹ, ಅನ್ನದಾಸೋಹದ ಜೊತೆಗೆ ಜ್ಞಾನದಾಸೋಹವನ್ನೂ ನಡೆಸುತ್ತಿದ್ದೇನೆ. ಇದು ಅನೇಕರಿಗೆ ಪ್ರೇರಣೆ ನೀಡಿ ಅವರನ್ನೂ ದಾಸೋಹ ಮಾಡುವಂತೆ ಮಾಡಿದೆ. ಇದರಿಂದ ಎಷ್ಟೋ ಬಡಜನರು ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದರು.
ವಿಜಯಪುರ ಪಪೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್ .ಎ. ಜಹಾಗಿರದಾರ, ವಿಜಯಪುರ ಜಿಲ್ಲಾ ಪಪೂ ಕಾಲೇಜುಗಳ ಪ್ರಾಂಶುಪಾಲರ ಮಹಾಮಂಡಳಿ ಅಧ್ಯಕ್ಷ ಪ್ರಾ| ಎಸ್.ಎಸ್. ಹೊಸಮನಿ, ವಿಜಯಪುರ ಪಿಯು ಡಿಡಿ ಕಚೇರಿ ಅಧೀಕ್ಷಕ ಪ್ರಕಾಶ ಗೊಂಗಡಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮುದ್ದೇಬಿಹಾಳ ತಾಲೂಕು ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಡಿ.ಬಿ. ವಡವಡಗಿ ಮಾತನಾಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ,
ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ. ಚಲವಾದಿ, ಶಾಸಕರ ಪುತ್ರ ಉದ್ಯಮಿ ಭರತ್ ಪಾಟೀಲ ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳಿಗೆ ಉಚಿತ ಸ್ಯಾನಿಟೈಸರ್ ಬಾಟಲ್ ನೀಡುವ ಯೋಜನೆಯ ಹಿಂದಿನ ಪ್ರೇರಕ ವ್ಯಕ್ತಿ ಭರತ್ ಪಾಟೀಲ ಅವರನ್ನು ಪಿಯು ಇಲಾಖೆ ವತಿಯಿಂದ ಸನ್ಮಾನಿಸಲಾಯಿತು. ಪಿಯು ಡಿಡಿ ಜಹಾಗಿರದಾರ ಅವರನ್ನು ಶಾಸಕರು ಸನ್ಮಾನಿಸಿದರು. ಆರ್.ಎ. ಜಹಾಗಿರದಾರ ಸ್ವಾಗತಿಸಿದರು. ಉಪನ್ಯಾಸಕ ಎಸ್.ಜಿ. ಲೊಟಗೇರಿ ನಿರೂಪಿಸಿದರು.