Advertisement

ಸ್ವಸಹಾಯ ಸಂಘ ಗಳಲ್ಲಿ ಮಾಸ್ಕ್ ತಯಾರಿ

04:24 PM Apr 01, 2020 | Suhan S |

ಗದಗ: ದೇಶದಲ್ಲಿ ಕೋವಿಡ್ 19 ಭೀತಿ ಶುರುವಾದಾಗಿನಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳಿಗೆ ಬೇಡಿಕೆ ಹೆಚ್ಚಿದೆ. ಮಾಸ್ಕ್ ಪೂರೈಕೆಯಿಲ್ಲದೇ ಗ್ರಾಪಂ ಮಟ್ಟದ ಸ್ವಚ್ಛತಾ ಸಿಬ್ಬಂದಿ ಆತಂಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement

ಇವರಿಗೆ ಮಾಸ್ಕ್ಗಳನ್ನು ತಯಾರಿಸುವ ಮೂಲಕ ಇಲ್ಲಿನ ವಿವಿಧ ಸ್ವಸಹಾಯ ಸಂಘಗಳು ಸಂಜೀವಿನಿಯಾಗಿವೆ. ಮಹಾಮಾರಿ ಕೊರೊನಾ ವೈರಸ್‌ ದೇಶವನ್ನೇ ತಲ್ಲಣಗೊಳಿಸಿದೆ. ವೈರಾಣು ಹರಡುವಿಕೆಯನ್ನು ತಪ್ಪಿಸಲು ಎಲ್ಲೆಡೆ ಜನರು ಮಾಸ್ಕ್ಗಳ ಮೊರೆ ಹೋಗುತ್ತಿದ್ದಾರೆ. ಹಲವು ಔಷಧ  ಮಳಿಗೆಗಳಲ್ಲಿ ನೋ ಸ್ಟಾಕ್‌ ಬೋರ್ಡ್‌ ಕಾಣಿಸಿದರೆ, ಇನ್ನೂ ಕೆಲವೆಡೆ ದುಬಾರಿ ಬೆಲೆ. ಹೀಗಾಗಿ ಗ್ರಾಪಂ ಮಟ್ಟದ ಸ್ವತ್ಛತಾ ಸಿಬ್ಬಂದಿಗೆ ಕೆಲ ದಿನಗಳಿಂದ ಮಾಸ್ಕ್ಗಳನ್ನು ನೀಡುವುದು ಸವಾಲಿನ ಕೆಲಸವಾಗಿತ್ತು.

ಈ ಸಮಸ್ಯೆ ಪರಿಹರಿಸಲು ತಾಪಂ ಇಒ ಡಾ| ಎಚ್‌.ಎಸ್‌. ಜನಗಿ ಅವರು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂಸ್ಥೆಯ(ಸಂಜೀವಿನಿ) ಸ್ಕಿಲ್‌ ಇಂಡಿಯಾ ಅಡಿ ನೋಂದಾಯಿಸಿದ ಮಹಿಳಾ ಸ್ವಸಹಾಯ ಸಂಘಗಳಿಗೆ ತ್ರೀಪಲ್‌ ಲೇಯರ್‌ ಮಾಸ್ಕ್ ತಯಾರಿಸುವಂತೆ ಪ್ರೋತ್ಸಾಹಿಸುತ್ತಿದೆ. ಈ ಮೂಲಕ ಗ್ರಾಪಂ ಸಿಬ್ಬಂದಿಗೆ ಸುರಕ್ಷತಾ ಪರಿಕರ ಒದಗಿಸುವಜೊತೆಗೆ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಕೆಲಸ ನೀಡುವ ಮಾರ್ಗ ತೋರಿದ್ದಾರೆ.

4 ದಿನದಲ್ಲಿ ಸಾವಿರ ಮಾಸ್ಕ್ ಸಿದ್ಧ: ಲಾಕ್‌ಡೌನ್‌ ಜಾರಿಯಿಂದ ಕೆಲಸವಿಲ್ಲದೇ ಆರ್ಥಿಕ ಸಂಕಷ್ಟದ ಭಯದಲ್ಲಿದ್ದ ಗ್ರಾಮೀಣ ಮಹಿಳೆಯರಿಗೆ ಈ ಅವಕಾಶ ಚೈತನ್ಯ ಮೂಡಿಸಿದೆ. ತಾಲೂಕಿನ ಕುರ್ತಕೋಟಿಯ ಗಜಗೌರಿ ಸಂಜೀವಿನಿ ಸ್ವಸಹಾಯ ಸಂಘದ ನಾಲ್ವರು, ಲಕ್ಕುಂಡಿಯ ವಾಯುಪುತ್ರ ಸಂಜೀವಿನಿ ಸ್ವಸಹಾಯ ಸಂಘದ ಇಬ್ಬರು, ಕಾರ್ತಿಕ ಸಂಜೀವಿನಿ ಸ್ವಸಹಾಯ ಸಂಘದ ಒಬ್ಬರು ಹಾಗೂ ಬಿಂಕದಕಟ್ಟಿಯ ಮಾಬುಸುಬಾನಿ ಸ್ವಸಹಾಯ ಸಂಘದ ಓರ್ವ ಮಹಿಳೆ ಸೇರಿ ನಾಲ್ಕು ದಿನಗಳಲ್ಲಿ ಒಂದು ಸಾವಿರ ಮಾಸ್ಕ್ ತಯಾರಿಸಿದ್ದಾರೆ.

ಪ್ರತಿ ಮಾಸ್ಕ್ ಹೊಲಿಯಲು ತಲಾ 5 ರೂ. ನಿಗದಿಗೊಳಿಸಲಾಗಿದೆ. ಪ್ರತಿನಿತ್ಯ 80ರಿಂದ 100 ಮಾಸ್ಕ್ ತಯಾರಿಸುತ್ತಿದ್ದು, 300ರಿಂದ 500 ರೂ. ಗಳಿಸುತ್ತಿದ್ದಾರೆ. ಪ್ರತಿ ಮಾಸ್ಕ್ಗೆ 10 ರೂ. ವೆಚ್ಚವಾಗುತ್ತಿದ್ದು, ಅದೇ ದರದಲ್ಲಿ ಗ್ರಾಪಂ ಮೂಲಕ ಸಿಬ್ಬಂದಿಗೆ ಒದಗಿಸಲಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಮಾಸ್ಕ್ಗಳಿಗೆ 30-40 ರೂ. ಬೆಲೆಯಿದೆ. ಆದರೆ, ಎಸ್‌ಎಸ್‌ಜಿ ಸಂಘಗಳು ತಯಾರಿಸಿದ ಮಾಸ್ಕ್ಗಳು ತೊಳೆದು ಮರು ಬಳಕೆ ಮಾಡಬಹುದಾಗಿದೆ. ಜೊತೆಗೆ 10 ರೂ. ಬೆಲೆಯಲ್ಲಿ ದೊರೆಯುತ್ತಿರುವುದರಿಂದ ಗ್ರಾಪಂಗಳಿಗೂ ಅನುಕೂಲವಾಗಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿರುವ ಅಧಿ ಕಾರಿಗಳ ಕ್ರಮಕ್ಕೆ ಗ್ರಾಮೀಣ ಭಾಗದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

ಎಸ್‌ಎಸ್‌ಜಿ ಮಹಿಳೆಯರು ತಯಾರಿಸಿದ ಮಾಸ್ಕ್ಗಳನ್ನು ನಮ್ಮ ಸಂಸ್ಥೆ ಮೂಲಕ ಈಗಾಗಲೇ ತಾಲೂಕಿನ ಅಂತೂರು-ಬೆಂತೂರು ಗ್ರಾಪಂಗೆ 100, ಕುರ್ತಕೋಟಿ, ಅಸುಂಡಿ, ಬಿಂಕದಕಟ್ಟಿ, ಹುಯಿಲಗೋಳ, ಶಿರುಂಜ, ಕೋಟುಮಚಗಿ, ಹುಲಕೋಟಿ ಗ್ರಾಪಂ ತಲಾ 50 ಪೂರೈಸಲಾಗಿದೆ. ಇದರ ಬೆನ್ನಲ್ಲೇ ಲಕ್ಕುಂಡಿ ಗ್ರಾಪಂನಿಂದ 100 ಮಾಸ್ಕ್ಗಳಿಗೆ ಬೇಡಿಕೆ ಬಂದಿದೆ ಎನ್ನಲಾಗಿದೆ. ಅಧಿಕಾರಿಗಳ ಈ ಕ್ರಮದಿಂದ ಸರಕಾರ ಮತ್ತು ಮಹಿಳೆಯರಿಗೂ ಅನುಕೂಲವಾಗಿದೆ. ಸಿದ್ದು ಸತ್ಯಣ್ಣವರ, ಎಸ್‌ಎಸ್‌ಜಿ ವಲಯ ವಲಯ ಮೇಲ್ವಿಚಾರಕ

 

ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next