Advertisement

ಖಾತೆ ಇಲ್ಲದಿದ್ದರೆ ಮಾಸಾಶನ ಸ್ಥಗಿತ; ಡಿಸೆಂಬರ್‌ ಒಳಗೆ ಬ್ಯಾಂಕ್‌ ಖಾತೆಗೆ ಅವಕಾಶ

10:06 AM Oct 01, 2022 | Team Udayavani |

ದಾವಣಗೆರೆ: ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಪಡೆಯುತ್ತಿರುವವರಿಗೆ ಈ ತಿಂಗಳಿನಿಂದ ಬ್ಯಾಂಕ್‌ ಖಾತೆ ಜೋಡಣೆ ಮಾಡಿಕೊಂಡವರಿಗಷ್ಟೇ ಮಾಸಾಶನ ಸಿಗಲಿದೆ.

Advertisement

ಈ ಹಿಂದಿನಂತೆ ಮನಿಯಾರ್ಡರ್‌ ಮೂಲಕ ಮಾಸಾಶನ ನೀಡುವ ಕ್ರಮ ಕೊನೆಗೊಂಡಿದೆ. ಆಧಾರ್‌ ಸಂಖ್ಯೆ ಜೋಡಣೆ ಹೊಂದಿದ ಬ್ಯಾಂಕ್‌ ಖಾತೆ ಅಥವಾ ಅಂಚೆ ಖಾತೆ ಇಲ್ಲದ ಫಲಾನುಭವಿಗಳಿಗೆ ಮಾಸಾಶನ ತಡೆಹಿಡಿಯಲು ಸಾಮಾಜಿಕ ಭದ್ರತೆ ಹಾಗೂ ಪಿಂಚಣಿಗಳ ನಿರ್ದೇಶನಾಲಯ ನಿರ್ಧರಿಸಿದೆ.

ಪರಿಣಾಮವಾಗಿ ಬ್ಯಾಂಕ್‌ ಖಾತೆ ಇಲ್ಲದವರಿಗೆ ಅಕ್ಟೋಬರ್‌ ತಿಂಗಳಿನಿಂದಲೇ ಮಾಸಾಶನ ನಿಲ್ಲಲಿದೆ (ಅಕ್ಟೋಬರ್‌ ತಿಂಗಳಲ್ಲಿ ಸಿಗಬೇಕಿದ್ದ ಸೆಪ್ಟಂಬರ್‌ ತಿಂಗಳಿನ ಮಾಸಾಶನ ಸಿಗದು). ಇದರಿಂದಾಗಿ ಮನಿಯಾರ್ಡರ್‌ ಮೂಲಕ ಮಾಸಾಶನ ಪಡೆಯುತ್ತಿದ್ದ ರಾಜ್ಯದ ಅಂದಾಜು ಒಂದು ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ತೊಂದರೆಯಾಗಲಿದೆ.

ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳು ಬ್ಯಾಂಕ್‌ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ತೆರೆದು, ಅದನ್ನು ಸಾಮಾಜಿಕ ಭದ್ರತಾ ಮಾಸಾಶನ ಯೋಜನೆಗೆ ಜೋಡಿಸಬೇಕು ಎಂದು 2018ರಿಂದಲೇ ನಿರಂತರ ಸೂಚನೆ ನೀಡುತ್ತಲೇ ಬರಲಾಗಿತ್ತು. ಇತ್ತೀಚೆಗೆ ಬ್ಯಾಂಕ್‌ ಖಾತೆ ಮಾಡಿಸಿಕೊಳ್ಳಲು ಆ.31ರ ಗಡುವು ನೀಡಲಾಗಿತ್ತು. ಅದನ್ನು ಸೆ.15ರ ವರೆಗೂ ವಿಸ್ತರಿಸಲಾಗಿತ್ತು. ಇನ್ನೂ ಖಾತೆ ಮಾಡಿಸಿಕೊಳ್ಳದವರ ಮಾಸಾಶನವನ್ನು ತಡೆಹಿಡಿಯಲು ಪಿಂಚಣಿ ನಿರ್ದೇಶನಾಲಯ ತೀರ್ಮಾನಿಸಿದೆ.

ಕಾಲ ಮಿಂಚಿಲ್ಲ
ಮಾಸಾಶನ ಕೈಗೆ ಸಿಗದೆ ಇದ್ದರೂ ಮಾಸಾಶನ ಖಾತೆ ದಿಢೀರ್‌ ರದ್ದಾಗುವುದಿಲ್ಲ. ಈ ತಿಂಗಳಿಂದ ಮಾಸಾಶನ ಖಾತೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗುವುದು. ಡಿಸೆಂಬರ್‌ ಒಳಗೆ ಬ್ಯಾಂಕ್‌ ಅಥವಾ ಅಂಚೆ ಖಾತೆ ಮಾಡಿಸಿ, ತಹಶೀಲ್ದಾರ್‌ ಕಚೇರಿ ಮೂಲಕ ಮಾಸಾಶನ ಖಾತೆಗೆ ಜೋಡಣೆ ಮಾಡಿದರೆ ಬಾಕಿ ಇರುವ ಮಾಸಾಶನವನ್ನೂ ಸೇರಿಸಿ ಖಾತೆಗೆ ಜಮೆ ಮಾಡಲಾಗುವುದು. ಒಂದು ವೇಳೆ ಡಿಸೆಂಬರ್‌ ವೇಳೆಗೂ ಬ್ಯಾಂಕ್‌ ಖಾತೆ ಮಾಡಿಸಿಕೊಳ್ಳದೆ ಇದ್ದರೆ ಜನವರಿ 2023ರಿಂದ ಮಾಸಾಶನ ಖಾತೆಯೇ ರದ್ದಾಗಲಿದೆ. ಮುಂದೆ ಮಾಸಾಶನ ಪಡೆಯಲು ಫಲಾನುಭವಿಗಳು ಬ್ಯಾಂಕ್‌ ಖಾತೆಯೊಂದಿಗೆ ಹೊಸದಾಗಿಯೇ ಅರ್ಜಿ ಸಲ್ಲಿಸಬೇಕಾಗುತ್ತದೆ ಎನ್ನುತ್ತಾರೆ ಸಾಮಾಜಿಕ ಭದ್ರತಾ ಯೋಜನೆಯ ಅಧಿಕಾರಿಗಳು.

Advertisement

ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳಿಗೆ ಬ್ಯಾಂಕ್‌ ಖಾತೆ ಮಾಡಿಸಿಕೊಳ್ಳಲು ನೀಡಲಾಗಿದ್ದ ಕೊನೆಯ ಗಡುವು ಸೆ.15ಕ್ಕೆ ಮುಗಿದಿದೆ. ಹೀಗಾಗಿ ಫಲಾನುಭವಿಗಳಿಗೆ ಅಕ್ಟೋಬರ್‌ ತಿಂಗಳಲ್ಲಿ ಮಾಸಾಶನ ಸಿಗುವುದಿಲ್ಲ. ಮನಿಯಾರ್ಡರ್‌ ಮೂಲಕ ಮಾಸಾಶನ ಪಡೆಯುವವರು ಡಿಸೆಂಬರ್‌ ಒಳಗೆ ಬ್ಯಾಂಕ್‌ ಖಾತೆ ಮಾಡಿಸಿಕೊಂಡರೆ ಮಾಸಾಶನ ಮುಂದುವರಿಯುತ್ತದೆ. ಇಲ್ಲದಿದ್ದರೆ ಮಾಸಾಶನ ಖಾತೆಯೇ ರದ್ದಾಗುತ್ತದೆ.
– ಪುಷ್ಪಾ ಕೆ., ಸಹಾಯಕ ನಿರ್ದೇಶಕರು, ಸಾಮಾಜಿಕ ಭದ್ರತಾ ಯೋಜನೆ, ದಾವಣಗೆರೆ


– ಎಚ್‌.ಕೆ. ನಟರಾಜ

 

Advertisement

Udayavani is now on Telegram. Click here to join our channel and stay updated with the latest news.

Next