ಬೆಂಗಳೂರು: ಶಿವಾಜಿನಗರದ ಸಂತ ಬೆಸಲಿಕಾ ಚರ್ಚ್‌ನಲ್ಲಿ ಶನಿವಾರ, ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಂತ ಮೇರಿ ಮಾತೆ ಉತ್ಸವ ನಡೆಯಿತು. ಮೇರಿ ಮಾತೆ ಉತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಆಯೋಜಿಸಲಾಗಿತ್ತು. ನಗರದ ವಿವಿಧ ಭಾಗದ ಭಕ್ತರು ಕುಟುಂಬ ಸಮೇತರಾಗಿ ಬಂದು ಮೇರಿ ಮಾತೆಯ ದರ್ಶನ ಪಡೆದರು.
ಚರ್ಚ್‌ನ ಒಳಭಾಗದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಮುಂಜಾನೆ 4 ಗಂಟೆಯಿಂದ ಆರಂಭವಾಗಿ ಸಂಜೆವರೆಗೂ ಸಾಮೂಹಿಕ ಪ್ರಾರ್ಥನೆ ನಡೆಯಿತು. ಸಂಜೆ 6 ಗಂಟೆಗೆ ಆರ್ಚ್‌ಬಿಷಪ್ ಪೀಟರ್ ಮಚಾಡೋ ಶಾಂತಿ ಸಂದೇಶ ನೀಡಿದರು. ನಂತರ ಮೇರಿ ಮಾತೆಯ ಮೂರ್ತಿ ಇದ್ದ ರಥೋತ್ಸವಕ್ಕೆ ಚಾಲನೆ ನೀಡಿದರು. ರಥಕ್ಕೆ ಸಂಪಿಗೆ ಹಾಗೂ ಮಲ್ಲಿಗೆ ಹೂ ಅರ್ಪಿಸುವ ಮೂಲಕ ಭಕ್ತರು ಪ್ರಾರ್ಥನೆ ಸಲ್ಲಿಸಿದರು. ಮೇರಿ ಮಾತೆಯ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದ ರಥವನ್ನು ಸಂಪೂರ್ಣವಾಗಿ ಬಣ್ಣಬಣ್ಣದ ದೀಪಗಳಿಂದ ಅಲಂಕರಿಸಲಾಗಿತ್ತು.
ಮೇರಿ ಮಾತೆ ಪ್ರಾರ್ಥನೆ ಹಾಗೂ ಧರ್ಮ ಗುರುಗಳ ಸಂದೇಶ ಚರ್ಚ್‌ನ ಹೊರಗೆ ನೆರೆದಿದ್ದ ಭಕ್ತರಿಗೂ ನೋಡುವಂತಾಗಬೇಕು ಎಂಬ ಉದ್ದೇಶದಿಂದ ಅಲ್ಲಲ್ಲಿ ಬೃಹತ್ ಎಲ್‌ಇಡಿ ಸ್ಕ್ರೀನ ಅಳವಡಿಸಲಾಗಿತು. ಚರ್ಚ್‌ನ ಸುತ್ತಲಿನ ರಸ್ತೆಯನ್ನು ಝಗಮಗಿಸುವ ಬಣ್ಣ ಬಣ್ಣದ ಬಲ್ಬ್ಗಳಿಂದ ಅಲಂಕರಿಸಲಾಗಿತ್ತು.
ಸಂಜೆ ಮೇರಿ ಮಾತೆಯ ಉತ್ಸವ ಅಂಗವಾಗಿ ಶಿವಾಜಿನಗರ, ಭಾರತಿನಗರ, ಅಲಸೂರು, ಸರ್ವಜ್ಞನಗರ ಸೇರಿದಂತೆ ಕಂಟೋನ್ಮೆಂಟ್ ಪ್ರದೇಶಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬಡವರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಶಿವಾಜಿನಗರದ ಸುತ್ತಲೂ ಹಬ್ಬದ ವಾತಾವರಣ ಕಳೆ ಕಟ್ಟಿತ್ತು. ಉತ್ಸವ ಅಂಗವಾಗಿ ಚರ್ಚ್ ಸುತ್ತಲಿನ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿತ್ತು. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಏರ್ಪಡಿಸಲಾಗಿತ್ತು.
ಸಂತ ಮೇರಿ ಜಯಂತಿಗೆ ಮೊದಲ ಒಂಬತ್ತು ದಿನಗಳನ್ನು ನವೇನ ಎಂದು ಆಚರಿಸಲಾಗುತ್ತದೆ. ಆ ಹಿನ್ನೆಲೆಯಲ್ಲಿ ಸಂತ ಮೇರಿ ದೇವಿಗೆ ಹರಕೆ ಹೊತ್ತ ಭಕ್ತರು ಒಂಬತ್ತು ದಿನಗಳು ಚರ್ಚೆಗೆ ಭೇಟಿ ನೀಡಿ ಹರಕೆ ತೀರಿಸಿಪೂಜೆ ಸಲ್ಲಿಸಿದ್ದರು. ಹತ್ತನೇ ದಿನಾವದ ಶನಿವಾರ ಉತ್ಸವ ನಡೆದಿದ್ದು, ನಗರದ ವಿವಿಧ ಭಾಗದ ಭಕ್ತರು ಬೃಹತ್ ಪ್ರಮಾಣದಲ್ಲಿ ಸೇರಿದ್ದರು.