ಹೊಸದಿಲ್ಲಿ: ಆರು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್ ಅವರು ಇಲ್ಲಿ ನಡೆದ ಮಹಿಳಾ ಬಾಕ್ಸಿಂಗ್ ಒಲಿಂಪಿಕ್ ಅರ್ಹತಾ ಟ್ರಯಲ್ಸ್ ನಲ್ಲಿ ನಿಖತ್ ಜರೀನ್ ರನ್ನು ಸೋಲಿಸಿದ್ದಾರೆ. ಇದರೊಂದಿಗೆ ಒಲಿಂಪಿಕ್ಸ್ ಪ್ರವೇಶವನ್ನು ಖಚಿತಪಡಿಸಿದ್ದಾರೆ.
ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೇರಿ ಕೋಮ್ ಅವರು ನಿಖತ್ ಜರೀನ್ ಅವರನ್ನು 9-1 ರ ಭಾರಿ ಅಂತರದಿಂದ ಗೆದ್ದು ಬೀಗಿದ್ದಾರೆ.
ಒಲಿಂಪಿಕ್ಸ್ ಅರ್ಹತಾ ಕೂಟಕ್ಕೆ ಮೇರಿ ಕೋಮ್ ಅವರನ್ನು ಭಾರತದ ಸ್ಪರ್ಧಿಯಾಗಿ ನೇರವಾಗಿ ಆಯ್ಕೆ ಮಾಡಲಾಗಿತ್ತು. ಇದೇ 51 ಕೆಜಿ ವಿಭಾಗದ ಮತ್ತೊಂದು ಸ್ಪರ್ಧಿ ನಿಖತ್ ಜರೀನ್ ಇದನ್ನು ಪ್ರಶ್ನಿಸಿದ್ದರು. ಆಯ್ಕೆ ಟ್ರಯಲ್ಸ್ ನಡೆಸದೆ ಯಾವ ಆಧಾರದಲ್ಲಿ ಮೇರಿ ಕೋಮ್ ಗೆ ಅರ್ಹತೆ ನೀಡುತ್ತೀರಿ ಎಂದು ನಿಖತ್ ಪ್ರಶ್ನಿಸಿದ್ದರು. ಹೀಗಾಗಿ ಭಾರತೀಯ ಬಾಕ್ಸಿಂಗ್ ಸಂಸ್ಥೆ ಆಯ್ಕೆ ಟ್ರಯಲ್ಸ್ ನಡೆಸಲು ಮುಂದಾಗಿತ್ತು.
ಈ ಇಬ್ಬರು ಆಟಗಾರರ ನಡುವಿನ ಮುಸುಕಿನ ಗುದ್ದಾಟದ ಕಾರಣದಿಂದ ಇಂದಿನ ಫೈನಲ್ ಪಂದ್ಯ ಭಾರಿ ಕುತೂಹಲ ಕೆರಳಿಸಿತ್ತು. ಆದರೆ ಆರು ಬಾರಿಯ ವಿಶ್ವ ಚಾಂಪಿಯನ್ ಗೆ ಸವಾಲು ನೀಡಲು ನಿಖತ್ ಜರೀನ್ ವಿಫಲರಾದರು.