Advertisement

ಮರೂರು: ರಸ್ತೆ, ಬಸ್‌ ಸೌಕರ್ಯ ವಂಚಿತ ಊರು

09:16 PM Aug 26, 2019 | Sriram |

ಗೋಳಿಯಂಗಡಿ: ಒಂದೆಡೆ ಹದಗೆಟ್ಟ ರಸ್ತೆ, ಮತ್ತೂಂದೆಡೆ ಪೇಟೆ, ಶಾಲಾ – ಕಾಲೇಜುಗಳಿಗೆ ತೆರಳಬೇಕಾದರೆ ಸರಿಯಾದ ಸಾರ್ವಜನಿಕ ಸಾರಿಗೆ ಸೌಕರ್ಯವಿಲ್ಲ. ಇದು ಹೆಂಗವಳ್ಳಿ ಗ್ರಾ.ಪಂ. ವ್ಯಾಪ್ತಿಯ ಬೆಳ್ವೆಯಿಂದ ಸುಮಾರು ಐದೂವರೆ ಕಿ.ಮೀ. ದೂರದ ಮರೂರು, ತೊನ್ನಾಸೆ ಎಂಬೆರಡು ಊರುಗಳ ಅಗತ್ಯ ಸೌಲಭ್ಯಗಳಿಂದ ವಂಚಿತವಾದ ಬಗೆಗಿನ ದುಸ್ಥಿತಿ.

Advertisement

ಇಲ್ಲಿ ರಸ್ತೆ ಸಂಪರ್ಕವಿದೆ. ಆದರೆ ಅದು ನಿರ್ವಹಣೆ ಕೊರತೆಯಿಂದ ಸಂಪೂರ್ಣ ಹದಗೆಟ್ಟಿದೆ. ಬಸ್‌ ಸೌಕರ್ಯ ಕಲ್ಪಿಸುವ ಎಲ್ಲ ಅರ್ಹತೆಗಳಿದ್ದರೂ, ಇನ್ನೂ ಸಾರ್ವಜನಿಕ ಸಾರಿಗೆ ಸೌಕರ್ಯವೇ ಇಲ್ಲ. ಇದರಿಂದ ನೂರಾರು ಮಕ್ಕಳು ಶಾಲಾ – ಕಾಲೇಜಿಗೆ 5-6 ಕಿ.ಮೀ. ದೂರ ನಡೆದುಕೊಂಡೇ ಹೋಗಬೇಕಾದ ಸ್ಥಿತಿಯಿದೆ.


ಹದಗೆಟ್ಟ ರಸ್ತೆ
ಮರೂರು ಹಾಗೂ ತೊನ್ನಾಸೆಗೆ ಸಂಪರ್ಕ ಕಲ್ಪಿಸುವ ಬೆಳ್ವೆ – ಮರೂರು ಜಿ.ಪಂ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯಿಡೀ ಹೊಂಡ – ಗುಂಡಿಗಳು ಬಿದ್ದಿವೆ. ಅನೇಕ ಕಡೆಗಳಲ್ಲಿ ಮಳೆ ನೀರೆಲ್ಲ ರಸ್ತೆಯಲ್ಲಿಯೇ ನಿಂತು ಸಂಚಾರ ದುಸ್ತರವಾಗಿದೆ. ಈ ರಸ್ತೆಗೆ 15 ವರ್ಷದ ಹಿಂದೆಯೇ ಡಾಮರೀಕರಣವಾಗಿತ್ತು. ಇದು ಜಿ.ಪಂ. ರಸ್ತೆಯಾಗಿದ್ದರೂ ಕೂಡ ಇದನ್ನು ಸರಿಯಾದ ರೀತಿಯಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿಲ್ಲ. ಈ ರಸ್ತೆಗೆ ಮರು ಡಾಮರೀಕರಣವಾಗಿದ್ದು, ಸುಮಾರು 7 ವರ್ಷಗಳ ಹಿಂದೆ. ಆ ಬಳಿಕ ಕನಿಷ್ಠ ತೇಪೆ ಕೂಡ ಹಾಕಿಲ್ಲ. ಹೊಂಡ ಗುಂಡಿ ಮುಚ್ಚಲೂ ಕೂಡ ಪ್ರಯತ್ನಿಸಿಲ್ಲ ಎನ್ನುತ್ತಾರೆ ಸ್ಥಳೀಯರು.

ನೂರಾರು ವಾಹನ ಸಂಚಾರ
ಬೆಳ್ವೆಯಿಂದ ಮರೂರು, ತೊನ್ನಾಸೆ ಕಡೆಗೆ ಈ ರಸ್ತೆಯ ಮೂಲಕ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಶಾಲಾ – ಕಾಲೇಜು ಮಕ್ಕಳು, ಕೆಲಸಕ್ಕೆ ಹೋಗುವವರೆಲ್ಲ ಇದೇ ದಾರಿಯಲ್ಲಿ ತೆರೆಳುತ್ತಾರೆ. ಆದರೂ ಸಂಬಂಧಪಟ್ಟ ಯಾರೂ ರಸ್ತೆ ಅಭಿವೃದ್ಧಿಗೆ ಗಮನ ಹರಿಸಿಲ್ಲ. ಮಳೆ ನೀರು ನಿಂತು ವಾಹನಗಳು ಬಂದಾಗ ಪಾದಚಾರಿಗಳಿಗೆ ಕೆಸರ ಸಿಂಚನವಾಗುತ್ತಿದೆ.

ದೇವಸ್ಥಾನಕ್ಕೂ ಇದೇ ರಸ್ತೆ
ಇತಿಹಾಸ ಪ್ರಸಿದ್ಧ ಮರೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೂ ಇದೇ ರಸ್ತೆಯ ಮೂಲಕ ಸಂಚರಿಸಬೇಕಾಗಿದೆ. ಆ ದೇವಸ್ಥಾನಕ್ಕೆ ಅನೇಕ ಮಂದಿ ಭಕ್ತರು ಭೇಟಿ ಕೊಡುತ್ತಾರೆ.

ಬಸ್ಸಿಲ್ಲದೆ ಮಕ್ಕಳಿಗೆ ಸಂಕಷ್ಟ
ಮರೂರು, ತೊನ್ನಾಸೆ ಭಾಗದಲ್ಲಿ ಇರುವುದು ಒಂದು ಕಿರಿಯ ಪ್ರಾಥಮಿಕ ಶಾಲೆ. ಅದು ಬಿಟ್ಟರೆ ಹಿರಿಯ ಪ್ರಾಥಮಿಕ, ಪ್ರೌಢ ಶಿಕ್ಷಣಕ್ಕೆ ಮಕ್ಕಳು ಬೆಳ್ವೆಗೆ ಬರಬೇಕು. ಇನ್ನು ಉನ್ನತ ಶಿಕ್ಷಣಕ್ಕೆ ಗೋಳಿಯಂಗಡಿ, ಹೆಬ್ರಿ, ಬಾಕೂìರು, ಶಂಕರನಾರಾಯಣ ಕಾಲೇಜುಗಳಿಗೆ ತೆರಳಬೇಕು. ಆದರೆ ಮರೂರು, ತೊನ್ನಾಸೆಯಿಂದ ಮಕ್ಕಳು ಬೆಳ್ವೆಗೆ ಬರಬೇಕಾದರೂ ಕನಿಷ್ಠ ಐದುವರೆ ಕಿ.ಮೀ. ದೂರವಿದೆ. ಬಸ್‌ ಸಿಗಬೇಕಾದರೆ ಅಲ್ಲಿಯವರೆಗೆ ನಡೆದುಕೊಂಡೇ ಬರಬೇಕು.

Advertisement

100ಕ್ಕೂ ಮಿಕ್ಕಿ ಮಕ್ಕಳು
ಮರೂರು, ತೊನ್ನಾಸೆ ಭಾಗದಿಂದ ಸುಮಾರು 150 ಕ್ಕೂ ಮಿಕ್ಕಿ ಮಕ್ಕಳು ಶಾಲಾ – ಕಾಲೇಜುಗಳಿಗೆ ತೆರಳುತ್ತಾರೆ. ಹೆಚ್ಚಾಗಿ ನಡೆದುಕೊಂಡೇ ಹೋಗುತ್ತಾರೆ. ಎಲ್ಲಾದರೂ ಈ ಮಾರ್ಗಗಳಲ್ಲಿ ಹೋಗುವ ರಿಕ್ಷಾ, ಕಾರು, ಯಾರದ್ದಾದರೂ ಬೈಕ್‌ ಸಿಕ್ಕಿದರೆ ಅದರಲ್ಲಿ ತೆರಳುತ್ತಾರೆ.

ಜಿ.ಪಂ. ಸಭೆಯಲ್ಲಿ ಪ್ರಸ್ತಾವ
ಇಲ್ಲಿ ಕಿ. ಪ್ರಾ. ಶಾಲೆ ಮಾತ್ರ ಇರುವುದು. ತೀರಾ ಗ್ರಾಮೀಣ ಪ್ರದೇಶವಾದ ಮರೂರು, ತೊನ್ನಾಸೆಯಿಂದ ಮಕ್ಕಳು ಕಲಿಯಲು ಬೆಳ್ವೆ ಅಥವಾ ಇನ್ನಿತರ ಕಡೆಗೆ ಬರಬೇಕು. ಇಲ್ಲಿನ ಅಗತ್ಯವಾಗಿರುವ ಬಸ್‌ ಸೌಕರ್ಯ ಆರಂಭಿಸುವ ಸಂಬಂಧ ಹಿಂದೆ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದ್ದು, ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಗಮನಕ್ಕೂ ತಂದಿದ್ದೆ. ಮತ್ತೂಮ್ಮೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಇನ್ನು ಸದ್ಯಕ್ಕೆ ಬೆಳ್ವೆ – ಮರೂರು ರಸ್ತೆಗೆ ತೇಪೆ ಹಾಕುವ ಕಾರ್ಯ ಮಾಡಲಾಗುವುದು. ಬಳಿಕ ಮರು ಡಾಮರೀಕರಣಕ್ಕೆ ಜಿ.ಪಂ. ಅನುದಾನ ಮೀಸಲಿಡಲಾಗುವುದು.
– ಸುಪ್ರೀತಾ ಉದಯ ಕುಲಾಲ್‌, ಸ್ಥಳೀಯ ಜಿ.ಪಂ. ಸದಸ್ಯರು

ರಸ್ತೆಯಲ್ಲಿ ಸಂಚರಿಸುವುದೇ ಕಷ್ಟ
ಈ ರಸ್ತೆಯಲ್ಲಿ ನಾವು ವಾಹನ ಚಲಾಯಿಸು ವುದೇ ಕಷ್ಟಕರವಾಗಿದೆ. ಅನೇಕ ವರ್ಷ ಗಳಿಂದ ಈ ರಸ್ತೆ ಹೀಗೆಯೇ ಇದೆ. ಅನೇಕ ಸಲ ಈ ಬಗ್ಗೆ ಸ್ಥಳೀಯ ಪಂಚಾಯತ್‌, ಜಿ.ಪಂ. ಸದಸ್ಯರ ಗಮನಕ್ಕೂ ತಂದಿದ್ದೇವೆ. ಶಾಲಾ – ಕಾಲೇಜುಗಳಿಗೆ ಹೋಗುವ ಮಕ್ಕಳಿದ್ದಾರೆ. ರಸ್ತೆಯನ್ನು ಸರಿಪಡಿಸಿ, ಕನಿಷ್ಠ ಬೆಳಗ್ಗೆ ಹಾಗೂ ಸಂಜೆ ಎರಡು ಸಲ ಬಸ್‌ ಸಂಚಾರ ಆರಂಭಿಸಿದರೆ ಈ ಭಾಗದ ಮಕ್ಕಳಿಗೆ ಪ್ರಯೋಜನವಾಗಲಿದೆ.
– ಉದಯ ಮರೂರು, ರಿಕ್ಷಾ ಚಾಲಕರು

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next