Advertisement

ಕರ್ತವ್ಯಕ್ಕೆ ಹಾಜರಾದ ದಿನವೇ ಬಲಿ

12:30 AM Feb 16, 2019 | |

ಮಂಡ್ಯ/ಭಾರತೀನಗರ: ಜಮ್ಮು-ಕಾಶ್ಮೀರದ ಅವಂತಿ ಪೋರಾದಲ್ಲಿ ಜೈಶ್‌ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಮದ್ದೂರು ತಾಲೂಕು ಭಾರತೀನಗರ ಹೋಬಳಿಯ ಗುಡಿಗೆರೆಯ ಎಚ್‌.ಗುರು, ರಜೆ ಮುಗಿಸಿ ಕೊಂಡು ಭಾನುವಾರವಷ್ಟೇ ಹೊರಟಿದ್ದರು. ಗುರುವಾರವಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಸೇನಾ ಕಾರ್ಯಕ್ಕೆ ಸಿದಟಛಿಗೊಂಡ ಕೆಲವೇ ಗಂಟೆಗಳಲ್ಲಿ ಉಗ್ರರ ಪೈಶಾಚಿಕ ಕೃತ್ಯಕ್ಕೆ ಬಲಿಯಾದರು.

Advertisement

ಮನೆಯ ಆಧಾರಸ್ತಂಭವನ್ನೇ ಕಳೆದುಕೊಂಡ ಕುಟುಂಬದವರ ಆಕ್ರಂದನ ಕರುಳು ಹಿಂಡುವಂತಿದೆ. ಹತ್ತು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಪತ್ನಿ ಕಲಾವತಿ, ಗಂಡನನ್ನು ಕಳೆದು ಕೊಂಡು ಗೋಳಾಡುತ್ತಿರುವ ದೃಶ್ಯ ಹೃದಯ ಕಲಕುವಂತಿತ್ತು. ಗುಡಿಗೆರೆ ಕಾಲೋನಿಯ ಎಚ್‌.ಹೊನ್ನಯ್ಯ-ಚಿಕ್ಕೋಳಮ್ಮ ದಂಪತಿಯ ಮೂವರು ಗಂಡು ಮಕ್ಕಳಲ್ಲಿ ಹಿರಿಯ ಮಗ ಗುರುವಿಗೆ ಚಿಕ್ಕಂದಿನಿಂದಲೂ ಸೇನೆ ಸೇರಬೇಕೆಂಬ ಹಂಬಲವಿತ್ತು. ಮನೆಯವರು ಬೇಡ ಎಂದರೂ ದೇಶ ಸೇವೆಯೇ ನನ್ನ ಉಸಿರು ಎಂದುಕೊಂಡು 2011ರಲ್ಲಿ ಕೇಂದ್ರೀಯ ಮೀಸಲು ಪಡೆ (ಸಿಆರ್‌ ಪಿಎಫ್)ಗೆ ಸೇರಿದ್ದರು. ಗುರು, ಮನೆಗೆ ಆಧಾರಸ್ತಂಭವಾಗಿದ್ದರು. ತಂದೆ ಹೊನ್ನಯ್ಯ ಮಂಡ್ಯ ರಸ್ತೆಯಲ್ಲಿ ಇಸ್ತ್ರೀ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಉಳಿದಿಬ್ಬರು ಮಕ್ಕಳಲ್ಲಿ ಮಧು ಮಳವಳ್ಳಿಯ ಕೆಇಬಿಯಲ್ಲಿ ಕೆಲಸದಲ್ಲಿದ್ದರೆ, ಮತ್ತೂಬ್ಬ ಮಗ ಆನಂದ ಕೆ.ಎಂ.ದೊಡ್ಡಿಯ ಗೃಹ ರಕ್ಷಕ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೇನೆಗೆ ಸೇರ್ಪಡೆಯಾದ ಗುರು, ಜಾರ್ಖಂಡ್‌ನ‌ಲ್ಲಿ 94ನೇ ಬೆಟಾಲಿಯನ್‌ನಲ್ಲಿ ಕರ್ತವ್ಯ ಆರಂಭಿಸಿ, ಶ್ರೀನಗರದಲ್ಲಿ 82ನೇ ಬೆಟಾಲಿಯನ್‌ನಲ್ಲೂ ಸೇವೆ ಸಲ್ಲಿಸಿದ್ದರು. ಹಳೆಯ ಮನೆ ಇರುವ ಸನಿಹದಲ್ಲೇ ಹೊಸ ಮನೆಯನ್ನು ನಿರ್ಮಿಸಿ, ವರ್ಷದ ಹಿಂದಷ್ಟೇ ಗೃಹಪ್ರವೇಶ ಮಾಡಿದ್ದರು. ಹತ್ತು ತಿಂಗಳ ಹಿಂದೆ ಸೋದರಮಾವನ ಮಗಳು ಕಲಾವತಿ ಯನ್ನು ಮದುವೆಯಾಗಿದ್ದರು.

ಸಂಕ್ರಾಂತಿ ಹಬ್ಬಕ್ಕೆ ಬಂದಿದ್ದರು: ಸಂಕ್ರಾಂತಿ ಹಬ್ಬಕ್ಕಾಗಿ ಜ.14ರಂದು ಗುಡಿಗೆರೆ ಕಾಲೋನಿಗೆ ಬಂದಿದ್ದ ಗುರು ಕುಟುಂಬದವರು,ಸ್ನೇಹಿತರೊಂದಿಗೆ ಸಂತಸದಿಂದ ಕಾಲ ಕಳೆದಿದ್ದರು. ರಜೆ  ಮುಗಿಸಿಕೊಂಡು ಫೆ.10ರಂದು ಮತ್ತೆ ಸೇನೆಗೆ ಮರಳುವುದಕ್ಕೆ ಸಜ್ಜಾದರು. ಭಾನುವಾರ ಬೆಳಗ್ಗೆ 10.30ಕ್ಕೆ ಮಂಡ್ಯದಿಂದ ಹೊರಟು ಬೆಂಗಳೂರಿಗೆ ತೆರಳಿ ಅಲ್ಲಿಂದ ರೈಲಿನ ಮೂಲಕ ದೆಹಲಿ ತಲುಪಿ ನಂತರ ಜಮ್ಮುವಿಗೆ ಪ್ರಯಾಣಿಸಿದ್ದರು.

ಗುರುವಾರ ಬೆಳಗ್ಗೆಯಷ್ಟೇ ತಾಯಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದ ಗುರು, ಇಂದಿನಿಂದ ಕರ್ತವ್ಯಕ್ಕೆ ಹಾಜರಾಗಿದ್ದೇನೆ ಎಂದು ಹೇಳಿದ್ದರು. ಸಂಜೆ ವೇಳೆಗೆ ಜಮ್ಮುವಿನಿಂದ ಶ್ರೀನಗರಕ್ಕೆ ಕರ್ತವ್ಯಕ್ಕೆ ಆಗಮಿಸುತ್ತಿದ್ದ ಸೇನಾ ಬಸ್‌ಗಳ ಬಳಿ, ಉಗ್ರರು ಕಾರು ಸ್ಫೋಟಿಸಿದ್ದರಿಂದ ಹಲವು ಯೋಧರು ಮೃತಪಟ್ಟಿರುವ ಸುದ್ದಿ ದೃಶ್ಯ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಮನೆಯವರು ಆತಂಕಕ್ಕೆ ಒಳಗಾದರು.

ಗುರುವಿನ ಕುಟುಂಬದವರು ಮೊಬೈಲ್‌ಗೆ ಕರೆ ಮಾಡಿದಾಗ ಅದು ಸ್ವಿಚ್‌ಆಫ್ ಆಗಿತ್ತು. ಇದರಿಂದ ಗಾಬರಿಗೊಳಗಾದ ಕುಟುಂಬ ಸದಸ್ಯರು, ಗುರುವಿನ ಸ್ನೇಹಿತ ಸುನೀಲ್‌ ಕುಮಾರ್‌ಗೆ ದೂರವಾಣಿ ಕರೆ ಮಾಡಿದರು. ಅವರು ಗುರು ವೀರಮರಣವನ್ನಪ್ಪಿರುವ ಸುದ್ದಿಯನ್ನು ಖಚಿತಪಡಿಸಿದಾಗ ಬರಸಿಡಿಲು ಬಡಿದಂತಾಯಿತು.

Advertisement

ವಾರ್ಷಿಕೋತ್ಸವಕ್ಕೆ ಬರ್ತೀನಿ ಅಂದಿದ್ರು

ಮದುವೆಯಾದಾಗಿನಿಂದ ಒಮ್ಮೆಯೂ ಬೈದವರಲ್ಲ. ವೀಡಿಯೋ ಕಾಲ್‌ ಮಾಡಿ ನನ್ನನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಏಪ್ರಿಲ್‌ನಲ್ಲಿ ನಮ್ಮ ಮದುವೆ ವಾರ್ಷಿಕೋತ್ಸವ ಇತ್ತು. ಅದಕ್ಕೆ ಬರ್ತೀನಿ ಅಂತ ಹೇಳಿದ್ರು. ನನಗೆ ನನ್ನ ಗಂಡ, ಗುರು ಬೇಕು. ದೇಶ ಕಾಯೋರನ್ನು ಸಾಯಿಸಿಬಿಟ್ರಾ.ಅವರನ್ನು ಸುಮ್ಮನೆ ಬಿಡಬೇಡಿ. ಸೈನಿಕರನ್ನು ಯಾವ ರೀತಿ ಬಾಂಬ್‌  ಸ್ಫೋಟಿಸಿ ಸಾಯಿಸಿದರೋ ಅವರಿಗೂಬಾಂಬ್‌ ಹಾಕಿಯೇ ಸಾಯಿಸಬೇಕು. ಉಗ್ರರ ಹುಟ್ಟಡಗಿಸಿ ಎಂದು ಪತಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ಕಲಾವತಿ, ಆವೇಶ ಮತ್ತು ಆಕ್ರೋಶದಿಂದ ಆಡಿದ ಮಾತುಗಳಿವು.

ಗುರು ಈಸ್‌ ಡೆಡ್‌’
ಜೈಶ್‌ ಉಗ್ರರ ದಾಳಿಗೆ ಸಿಲುಕಿ ಹುತಾತ್ಮರಾದ ಗುರುವಿನ ಸಾವಿನ ಸಂದೇಶವನ್ನು ಕುಟುಂಬದವರಿಗೆ ಮೊದಲಿಗೆ ತಿಳಿಸಿದವರು ಸಹಪಾಠಿ ಸುನೀಲ್‌ಕುಮಾರ್‌. ಗುರು ಕರ್ತವ್ಯ ನಿರ್ವಹಿಸುತ್ತಿದ್ದ ಬೆಟಾಲಿಯನ್‌ ನಲ್ಲೇ ಸುನೀಲ್‌ಕುಮಾರ್‌ ಕೂಡ ಇದ್ದರು.

ಗುರುವಾರ ರಾತ್ರಿ 10ರ ವೇಳೆಗೆ ಜಮ್ಮುವಿನಿಂದ ಗುರುವಿನ ಸ್ನೇಹಿತ ಪ್ರಸನ್ನ ಅವರ ಮೊಬೈಲ್‌ಗೆ ಫೋನ್‌ ಮಾಡಿದ ಸುನೀಲ್‌ಕುಮಾರ್‌, ಗುರು ಈಸ್‌ ಡೆಡ್‌ ಎಂದರು. ಇದು ಪ್ರಸನ್ನನಿಗೆ ಅರ್ಥವಾಗಲಿಲ್ಲ. ಅಷ್ಟರಲ್ಲಿ ಕರೆ ಕಟ್‌ ಆಯಿತು. ವಿಷಯವನ್ನು ಖಚಿತಪಡಿಸಿಕೊಳ್ಳಲು ಪ್ರಸನ್ನ ಸಮೀಪದಲ್ಲೇ ರಾಜಸ್ತಾನದವರಿದ್ದ ಅಂಗಡಿಗೆ ಹೋಗಿ ಮತ್ತೆ ಸುನೀಲ್‌ಕುಮಾರ್‌ಗೆ ಪೋನಾಯಿಸಿದರು. ಆಗ ವಿಷಯ ದೃಢಪಟ್ಟಿತು.

ಸಿಎಂ ಕುಮಾರಸ್ವಾಮಿ ಸಾಂತ್ವನ
ಭಾರತೀನಗರ: ಗುರು ಅವರ ಕುಟುಂಬವರ್ಗಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಾಂತ್ವನ ಹೇಳಿ¨ªಾರೆ. ದೂರವಾಣಿ ಮೂಲಕ ಗುರು ಅವರ ಕುಟುಂಬದವರನ್ನು ಸಂಪರ್ಕಿಸಿ, ಸಾಂತ್ವನ ಹೇಳಿದರು. ಈ ಮಧ್ಯೆ, ಬಿಜೆಪಿ ರಾಜ್ಯಾಧ್ಯಕ್ಷ, ಬಿ.ಎಸ್‌.ಯಡಿಯೂರಪ್ಪ ಅವರು ಆಗಮಿಸಿ, ಹುತಾತ್ಮ ಯೋಧ ಗುರು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಮೋದಿ ನಾಳೆ ಸರ್ವಪಕ್ಷ ಸಭೆ ಕರೆದಿದ್ದಾರೆ. ಉಗ್ರರ ಮಟ್ಟ ಹಾಕುವುದರಲ್ಲಿ ಯಾವುದೇ ಸಂಶಯವಿಲ್ಲ. ಅವರು ಏನು ನಿರ್ಣಯ ಕೈಗೊಳ್ಳುತ್ತಾರೆ ಎಂಬುವುದನ್ನು ಕಾದು ನೋಡಬೇಕಿದೆ ಎಂದರು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಕೂಡ ಗುರು ಕುಟುಂಬಕ್ಕೆ ಸಾಂತ್ವನ ಹೇಳಿದರು. ಆದಿ ಚುಂಚನಗಿರಿ ಮಠ ಹಾಗೂ ಸರ್ಕಾರ ಗುರು ಕುಟುಂಬಕ್ಕೆ ಸಹಕಾರ ನೀಡಲಿದೆ. ಇಡೀ ರಾಜ್ಯವೇ ಗುರು ಕುಟುಂಬದ ಪರ ಇದೆ ಎಂದರು.

ಸ್ಮಾರಕಕ್ಕೆ ಸರ್ಕಾರಿ ಜಾಗ ನೀಡಲು ಹಿಂದೇಟು

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧನೊಬ್ಬನ ಸ್ಮಾರಕ ನಿರ್ಮಾಣ ಮಾಡುವುದಕ್ಕೆ ಕೆ.ಎಂ.ದೊಡ್ಡಿ ಸುತ್ತ ಎಲ್ಲಿಯೂ ಸರ್ಕಾರಿ ಜಾಗವೇ ಇಲ್ಲ ಎಂದು ಹೇಳುವ ಮೂಲಕ ತಾಲೂಕು ಅಧಿಕಾರಿಗಳು ಸರ್ಕಾರಿ ಜಾಗ ನೀಡುವುದಕ್ಕೆ ಹಿಂದೇಟು ಹಾಕಿದರು. ಗುರು ಕುಟುಂಬಕ್ಕೆ ಸಾಂತ್ವನ ಹೇಳಲು ಆಗಮಿಸಿದ್ದ ತಹಶೀಲ್ದಾರ್‌ ಗೀತಾ, ಅಂತ್ಯಕ್ರಿಯೆ ನಡೆಸಲು ಸರ್ಕಾರಿ ಜಾಗ ಸದ್ಯಕ್ಕೆ ಕಂಡು ಬರುತ್ತಿಲ್ಲ. ಈ ಬಗ್ಗೆ ಪರಿಶೀಲಿಸಿ ಶೀಘ್ರವೇ ತಿಳಿಸುತ್ತೇನೆ ಎಂದು ಗ್ರಾಮಸ್ಥರಿಗೆ ತಿಳಿಸಿದರು. ನಂತರ ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಿ.ಶಿವಪ್ರಕಾಶ್‌, ಮದ್ದೂರು ತಹಶೀಲ್ದಾರ್‌, ಕಂದಾಯಾಧಿಕಾರಿ, ಗ್ರಾಮ ಲೆಕ್ಕಿಗರು ಸಭೆ ಸೇರಿ ಕೆ.ಎಂ.ದೊಡ್ಡಿ ಆಸುಪಾಸಿನಲ್ಲಿ ಸರ್ಕಾರಿ ಜಾಗವಿಲ್ಲದಿರುವುದು ಸಮಸ್ಯೆಯಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಮನವಿ ಮಾಡುವಂತೆ ಸಲಹೆ ನೀಡಿದರು ಎಂದು ತಿಳಿದು ಬಂದಿದೆ. ಈ ಮಧ್ಯೆ, ಗುಡಿಗೆರೆ ಸರ್ವೆ ನಂಬರ್‌ 54ರ ಸರ್ಕಾರಿ ಜಾಗದಲ್ಲಿಯೇ ಗುರುವಿನ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಂಜುಶ್ರೀ ತಿಳಿಸಿದರು.

ಪ್ರೀತಿಯಿಂದ ಅವನ ಕೆನ್ನೆಗೆ ಮುತ್ತಿಡುತ್ತಿದ್ದೆ. ಕರ್ತವ್ಯಕ್ಕೆ ತೆರಳುವಾಗಲೂಅವನಿಗೆ ಮುತ್ತಿಕ್ಕಿ ಕಳುಹಿಸುತ್ತಿದ್ದೆ. ಅವನು ನಮ್ಮ ಮನೆಯ ಭಾಗ್ಯ. ಆ ಭಾಗ್ಯವನ್ನು ನಾವಿಂದು ಕಳೆದುಕೊಂಡಿದ್ದೇವೆ.
● ಹೊನ್ನಯ್ಯ, ಹುತಾತ್ಮ ಗುರುವಿನ ತಂದೆ

ಗುರು ಕರ್ತವ್ಯಕ್ಕೆ ತೆರಳುವ ದಿನ ನಮ್ಮ ಮನೆಯಲ್ಲಿ ಕೊನೆಯ ಬಾರಿ ಊಟ ಮಾಡಿ ಹೋಗಿದ್ದರು. ಅಳಿಯನಾಗಿದ್ದರೂ ನಮಗೆ ಪ್ರೀತಿಯ ಮಗನಂತಿದ್ದರು. ನನ್ನ ಮಗಳ ಪಾಲಿನ ಆಶಾಜ್ಯೋತಿ ಈಗ ನಂದಿಹೋಗಿದೆ. ನನ್ನ ಮಗಳಿಗೆ ಯಾವತ್ತೂ ನೋವು ಕೊಟ್ಟವರಲ್ಲ. ನನ್ನ ಮುದ್ದು ಮಗಳನ್ನು ಅವರೂ ಮುದ್ದಿನಿಂದಲೇ ನೋಡಿಕೊಳ್ಳುತ್ತಿದ್ದರು.
● ಶಿವಣ್ಣ, ಗುರು ಮಾವ

ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next