ವೆಲ್ಲಿಂಗ್ಟನ್: ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಅವರನ್ನು ಅವರ ಕೇಂದ್ರ ಒಪ್ಪಂದದಿಂದ ಬಿಡುಗಡೆ ಮಾಡಲಾಗಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಬುಧವಾರ ಖಚಿತಪಡಿಸಿದೆ. 36 ವರ್ಷದ ಮಾರ್ಟಿನ್ ಗಪ್ಟಿಲ್ ವಿನಂತಿಯ ಮೇರೆಗೆ ಈ ನಿರ್ಧಾರ ಮಾಡಲಾಗಿದೆ ಎಂದು ಮಂಡಳಿ ತಿಳಿಸಿದೆ.
“ನ್ಯೂಜಿಲೆಂಡ್ ಕ್ರಿಕೆಟ್ ಸಮಿತಿಯೊಂದಿಗಿನ ಚರ್ಚೆಗಳ ನಂತರ, ಗಪ್ಟಿಲ್ ಅವರ ವಿನಂತಿಯನ್ನು ಅಂಗೀಕರಿಸಲಾಯಿತು. ತಕ್ಷಣದಿಂದಲೇ ಇದು ಜಾರಿಗೆ ಬರಲಿದೆ” ಎಂದು ಪ್ರಕಟಣೆ ತಿಳಿಸಿದೆ. ಮಾರ್ಟಿನ್ ಗಪ್ಟಿಲ್ ಅವರು ಆಯ್ಕೆಗೆ ಅರ್ಹರಾಗಿದ್ದರೂ, ಕೇಂದ್ರ ಅಥವಾ ದೇಶೀಯ ಒಪ್ಪಂದಗಳನ್ನು ಹೊಂದಿರುವ ಆಟಗಾರರಿಗೆ ಆದ್ಯತೆ ನೀಡುವುದನ್ನು ಮುಂದುವರಿಸಲಾಗುತ್ತದೆ ಎಂದು ಮಂಡಳಿ ತಿಳಿಸಿದೆ.
ಇದನ್ನೂ ಓದಿ:ಗಂಗಾವತಿ: ಜನಜಾನುವಾರುಗಳಿಗೆ ಉಪಟಳ; ಗಡ್ಡಿ ಗ್ರಾಮದಲ್ಲಿ ಬೋನಿಗೆ ಬಿದ್ದ ಕರಡಿ
ಟಿ20 ಸ್ವರೂಪದಲ್ಲಿ ನ್ಯೂಜಿಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ಮತ್ತು ಏಕದಿನ ಪಂದ್ಯಗಳಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಗಪ್ಟಿಲ್ ಅವರು ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಲ್ಲಿ ರಾಷ್ಟ್ರೀಯ ತಂಡದ ಭಾಗವಾಗಿದ್ದರು. ಆದರೆ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಪಡೆದಿರಲಿಲ್ಲ. ಬಳಿಕ ಭಾರತ ವಿರುದ್ಧ ನಡೆಯುತ್ತಿರುವ ಸ್ವದೇಶಿ ಸರಣಿಯಲ್ಲೂ ಗಪ್ಟಿಲ್ ತಂಡದಲ್ಲಿ ಅವಕಾಶ ಪಡೆಯಲು ವಿಫಲರಾದರು.
Related Articles
ಇದು ನ್ಯೂಜಿಲೆಂಡ್ ಆಟಗಾರನೊಬ್ಬ ಈ ವರ್ಷ ಬಿಡುಗಡೆಗೆ ವಿನಂತಿಸಿದ ಮೂರನೇ ನಿದರ್ಶನವಾಗಿದೆ. ಟ್ರೆಂಟ್ ಬೌಲ್ಟ್ ಮತ್ತು ಕಾಲಿನ್ ಡಿ ಗ್ರ್ಯಾಂಡ್ ಹೋಮ್ ಕೂಡಾ ಇದೇ ರೀತಿ ಮಾಡಿದ್ದರು.
ತಾನು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ ನಿವೃತ್ತಿಯಾಗುತ್ತಿಲ್ಲ ಮತ್ತು ಲಭ್ಯವಿದ್ದಾಗ ಆಯ್ಕೆಗೆ ಪರಿಗಣಿಸಲು ಬಯಸುತ್ತಾರೆ ಎಂದು ಗಪ್ಟಿಲ್ ಸ್ಪಷ್ಟಪಡಿಸಿದ್ದಾರೆ.