Advertisement
ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿ ಣಾಮ ತಡೆಗಟ್ಟಲು ಸಾವಯವ ಕೃಷಿಕರೊಬ್ಬರು ಕಿರಾಣಿ, ಜನರಲ್ ಸ್ಟೋರ್ಸ್ ಹಾಗೂ ಪಾನ್ ಅಂಗಡಿಗಳು ಬಿಸಾಡುವ ಪಾನ್ ಮಸಾಲಾ, ಗುಟ್ಕಾ ಪ್ಲಾಸ್ಟಿಕ್ ಪೊಟ್ಟಣಗಳು ಹಾಗೂ ನಿರುಪಯುಕ್ತ ಪ್ಲಾಸ್ಟಿಕ್ ಬಾಟಲ್‌ಗಳನ್ನು ಸಂಗ್ರಹಿಸಿಕೊಂಡು ಮರು ಬಳಕೆ ಮಾಡಿ ಸೊಪ್ಪು, ಸಸಿಗಳನ್ನು ನೆಟ್ಟು ಕೈತೋಟ ನಿರ್ಮಿಸಿಕೊಂಡಿದ್ದಾರೆ.
ಗ್ರಾಮದ ಗ್ರಾಮ ಪಂಚಾಯಿತಿ ಕಟ್ಟಡ, ಅಂಗನವಾಡಿ, ದರ್ಗಾ, ಬೀರಲಿಂಗೇಶ್ವರ ದೇವಸ್ಥಾನ, ಪಶು ವೈದ್ಯಕೀಯ ಆಸ್ಪತ್ರೆ ಸೇರಿದಂತೆ ಹಲವೆಡೆ ಖಾಲಿಯಿದ್ದ ಜಾಗದಲ್ಲಿ ತೇಗ, ಸಾಗವಾಣಿ, ಪೇರಲ, ಹೆಬ್ಬೇವು, ಬೇವು, ನೆರಳೆ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಸಹಕಾರಿ ಸಂಘದ ಬಳಿಯಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ಪೋಲಾಗುತ್ತಿದ್ದ ನೀರಿನ ಹರಿವಿನ ಪಕ್ಕದಲ್ಲೂ ಗಿಡ ನೆಟ್ಟು ಪರಿಸರ ಪ್ರೇಮ ಸಾರುತ್ತಿದ್ದಾರೆ. ಅಲ್ಲದೇ, ಪರಿಸರ ಪ್ರೇಮಿಗಳ ಸಂಘವನ್ನು ಕಟ್ಟಿಕೊಂಡಿರುವ ವೀರೇಶ ಅವರು ಪ್ರತಿಯೊಬ್ಬರಿಗೂ ಗಿಡ ಕೊಟ್ಟು ಪೋಷಿಸುವ ಜವಾಬ್ದಾರಿ ನೀಡಿದ್ದಾರೆ. ಜೊತೆಗೆ ಜನ್ಮದಿನ ಹಾಗೂ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಸಸಿಗಳನ್ನು ಉಡುಗೊರೆಯಾಗಿ ಕೊಟ್ಟು ಪೋಷಿಸುವಂತೆ ಸಲಹೆ ನೀಡುತ್ತ ಬಂದಿದ್ದಾರೆ.
Related Articles
Advertisement
ಶಾಲಾ-ಕಾಲೇಜು ಹಂತದಿಂದಲೇ ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ನನಗೆ, ಗ್ರಾಮದಲ್ಲಿ ಒಂದು ದಿನ ಬೀಸಿದ ಬಿರುಗಾಳಿ ಮತ್ತಷ್ಟು ಪರಿಸರದ ಬಗ್ಗೆ ಕಾಳಜಿ ಹೊಂದಲು ಕಾರಣವಾಯಿತು. ಬಿರುಗಾಳಿಯಿಂದ ಪ್ಲಾಸ್ಟಿಕ್ ತ್ಯಾಜ್ಯಗಳೆಲ್ಲವೂ ಮನೆಯೊಳಗೆ ಹಾಗೂ ರಸ್ತೆ ಸಂಚಾರಕ್ಕೆ ಅಡೆತಡೆ ಉಟು ಮಾಡಿದ್ದವು. ಇದರಿಂದದ ಎಚ್ಚೆತ್ತುಕೊಂಡು, ಪ್ಲಾಸ್ಟಿಕ್ ಸಂಗ್ರಹಿಸಿ ಮಣ್ಣು ತುಂಬಿ, ಗಿಡ ನೆಟ್ಟು ಮರು ಬಳಕೆ ಮಾಡಲು ಪ್ರಯತ್ನಿಸಿದೆ. –ವೀರೇಶ ನೇಗಲಿ, ಸಾವಯವ ಕೃಷಿಕ, ಪರಿಸರ ಪ್ರೇಮಿ
ಅಂಗನವಾಡಿ, ಗ್ರಾಪಂ ಕಟ್ಟಡದ ಪಕ್ಕದಲ್ಲಿ ಸಾರ್ವಜನಿಕರಿಂದ ಮೂತ್ರ ವಿಸರ್ಜನೆ ನಿರಾತಂಕವಾಗಿ ನಡೆಯುತ್ತಿತ್ತು. ಇದನ್ನರಿತ ವೀರೇಶ ಅವರು ತೇಗ, ಸಾಗವಾಣಿ, ಹೆಬ್ಬೇವು ಗಿಡಗಳನ್ನು ಬೆಳೆಸಿ ವನವನ್ನಾಗಿಸಿದರು. ಇದರಿಂದ ಮೂತ್ರ ವಿಸರ್ಜನೆ ಬಂದ್ ಆಗಿದೆ. ಪರಿಸರದ ಜಾಗೃತಿ ಹೆಚ್ಚಾಗಿದೆ. ಪ್ರಕಾಶ ಕುಲಕರ್ಣಿ, ಯಲ್ಲಪ್ಪ ಲಕ್ಕುಂಡಿ, ಕೋಟುಮಚಗಿ ಗ್ರಾಮಸ್ಥರು
-ಅರುಣಕುಮಾರ ಹಿರೇಮಠ