ನಾಗ್ಪುರ: ಹಿಂದೂ ವಿವಾಹ ವಿಧಿಗಳಲ್ಲಿ ಕನ್ಯಾದಾನವಿಲ್ಲದೆ ವಿವಾಹ ಪೂರ್ಣವಾಗಲ್ಲ. ಆದರೆ, ಇಂಥ ಪ್ರಮುಖ ವಿಧಿಯೇ ಇಲ್ಲದೆ ವಿವಾಹವೊಂದು ನಡೆದು ಹೋಗಿದೆ.
ಇದೇನೂ ತಪ್ಪಿ ನಡೆದು ಹೋದದ್ದಲ್ಲ, ಮಹಿಳಾ ಪುರೋಹಿತರ ನೇತೃತ್ವದಲ್ಲಿ ಉದ್ದೇಶಪೂರ್ವಕ ಕನ್ಯಾದಾನರಹಿತ ಮದುವೆ ನೆರವೇರಿದೆ!
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ವಿನಯ್ ಸಹಸ್ರಬುದ್ಧೆ ಅವರ ಪುತ್ರ, ಅಶಯ್ ಮತ್ತು ಬಿಜೆಪಿ ವಿದೇಶಾಂಗ ವ್ಯವಹಾರ ಘಟಕದ ಮುಖ್ಯಸ್ಥ ವಿಜಯ್ ಚೌತಾಯ್‌ವಲೆ ಅವರ ಸೋದರ ಪುತ್ರಿ ಶಿವದಾ ಮಧ್ಯೆ ವಿವಾಹ ನಡೆದಿದೆ. ವರನ ತಾಯಿ ನಯನಾ ಸಹಸ್ರಬುದ್ಧೆ ಹೇಳುವಂತೆ, “ವಧು ದಾನ ಮಾಡುವಂಥ ವಸ್ತುವಲ್ಲ. ಇಂತಹ ಪೂರ್ವಗ್ರಹ ಪೀಡಿತ ಆಚರಣೆಗಳು ನಮ್ಮಲ್ಲಿವೆ. ನಾವು ಕನ್ಯೆಯನ್ನು ಪೂಜಿಸುತ್ತೇವೆ. ಆದರೆ ಆಕೆಗೆ ಹಕ್ಕು ನೀಡಲು ಹಿಂದೇಟು ಹಾಕುತ್ತೇವೆ. ಆದ್ದರಿಂದ “ದಾನ’ ನೀಡುವ ವಿಧಿಯನ್ನು ಕೈಬಿಡಲಾಗಿದೆ. ಆದರೆ ವಧುವನ್ನು ವರನ ಕೈಗೆ ಒಪ್ಪಿಸುವ ವಿಧಿಗಳನ್ನು ನೆರವೇರಿಸಲಾಗಿದೆ.
ಈ ವಿವಾಹವನ್ನು ಮಹಿಳಾ ಪುರೋಹಿತರಾದ ಪದ್ಮಾ ಕಸಲೈಕರ್ ನೆರವೇರಿಸಿದ್ದಾರೆ. “ಕನ್ಯಾದಾನ ವಿವಾಹದಲ್ಲಿ ಪ್ರಮುಖವಾಗಿದೆ. ಆದರೆ ಈ ವಿಧಿ ನಡೆಸಲು ವರ-ವಧುವಿನ ಮನೆಯವರು ಸಮ್ಮತಿಸಲಿಲ್ಲ. ಆದ್ದರಿಂದ ಅದನ್ನು ನಡೆಸಲಿಲ್ಲ ಎಂದಿದ್ದಾರೆ. ಈ ಅಪರೂಪದ ಮದುವೆಗೆ ಕೇಂದ್ರ ಸಚಿವರು, ಆರೆಸ್ಸೆಸ್ ನೇತಾರರು, ವಿವಿಧ ಪಕ್ಷಗಳ ಮುಖಂಡರು ಸಾಕ್ಷಿಯಾಗಿದ್ದರು.