ತುಮಕೂರು: ಪರಸ್ಪರ ಪ್ರೀತಿಸುತ್ತಿದ್ದ ಯುವತಿಯರಿಬ್ಬರು ಮದುವೆಯಾಗಲು ನಿರ್ಧರಿಸಿದ್ದು, ಅದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಲಿಂಗ ಮದುವೆ ಮಾಡಿಸುವಂತೆ ಪೊಲೀಸರ ಮೊರೆ ಹೋದ ಅಪರೂಪದ ಘಟನೆ ನಗರದಲ್ಲಿ ನಡೆದಿದೆ.
ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವತಿಯರಿಬ್ಬರು ತಾವು ಪರಸ್ಪರ ಪ್ರೀತಿಸುತ್ತಿದ್ದು ಮದುವೆಯಾಗುವುದಾಗಿ ನಿರ್ಧರಿಸಿದ್ದೇವೆ, ಇದಕ್ಕೆ ಅವಕಾಶ ಮಾಡಿಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ನಗರ ವಾಸಿಗಳಾಗಿರುವ ಈ ಯುವತಿಯರ ಸಲಿಂಗ ಮದುವೆ ಎಲ್ಲರ ಗಮನ ಸೆಳೆದಿದೆ. ಮದುವೆ ಮಾಡಿಕೊಳ್ಳಲು ಮನೆ ಬಿಟ್ಟು ಹೊರಬಂದವರು ಈಗ ಪೊಲೀಸರ ನೆರವು ಕೋರಿದ್ದಾರೆ.
ಈ ಇಬ್ಬರು ಯುವತಿಯರು ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕೆಲ ದಿನಗಳ ಮಟ್ಟಿಗೆ ಕಾಣೆಯಾಗಿದ್ದ ಯುವತಿಯರು ಬಳಿಕ ತುಮಕೂರಿಗೆ ಆಗಮಿಸಿ ಮದುವೆಯಾಗುವುದಾಗಿ ತೀರ್ಮಾನಿಸಿ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದು, ಇದಕ್ಕೆ ಪೊಲೀಸರು ನಿರಾಕರಿಸಿದ್ದಾರೆ. ಆದರೆ ಮದುವೆ ಮಾಡಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವತಿಯರು ಬೆದರಿಕೆ ಹಾಕಿದ್ದಾರೆಂದು ತಿಳಿದು ಬಂದಿದ್ದು, ಒಬ್ಬ ಯುವತಿಯ ಪೋಷಕರು ಮದುವೆಗೆ ಸಮ್ಮತಿಸಿದ್ದರು ಎನ್ನಲಾಗಿದೆ. ಮತ್ತೂಬ್ಬ ಯುವತಿಯ ಪೋಷಕರು ವಿರೋಧಿಸಿ ಯುವತಿಯನ್ನು ಕರೆದೊಯ್ದಿದ್ದಾರೆ.