ಪ್ರೌಢ ಶಾಲೆಯಲ್ಲಿ ಓದುತ್ತಿದ್ದ ದಿನಗಳವು. ದೂರದ ಊರಿನ ದಟ್ಟ ಮಲೆನಾಡು ಪ್ರದೇಶದಲ್ಲಿದ್ದ ನೆಂಟರ ಮದುವೆಯಲ್ಲಿ ಪಾಲ್ಗೊಳ್ಳಲು ಅಮ್ಮನ ಜೊತೆ ನಾನೂ ಹೋಗಿದ್ದೆ. ಸಂಭ್ರಮದ ಮದುವೆ ಮನೆಯಲ್ಲಿ ನೆಂಟರು ತುಂಬಿ ತುಳುಕುತ್ತಿದ್ದರು. ರಾತ್ರಿ ತಂಗಲು ಜಾಗವಿಲ್ಲದಷ್ಟು ಜನ. ಹೀಗಾಗಿ ಮದುವೆ ಮನೆಗೆ ಹತ್ತಿರದಲ್ಲೇ ಇದ್ದ ಕೆ. ಪಿ. ಗೌಡರ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು. ಗೌಡರು ನಮಗೆ ತುಂಬಾ ಪರಿಚಿತರು. ವೃದ್ಧಾಪ್ಯದ ಆಂಚಿನಲ್ಲಿದ್ದ ಅವರು, ಸಿಹಿಯಾದ ಹೃದಯವುಳ್ಳವರಾಗಿದ್ದರು. ಹೆಸರಿಗೆ ಅಡಕೆ ತೋಟ ಅವರಿಗಿತ್ತು. ದೊಡ್ಮನೆಯವರು ಎಂದು ಅಮ್ಮ ಹೇಳುತ್ತಿದ್ದ ನೆನಪು.
ಮದುವೆಯ ಹಿಂದಿನ ದಿನ ಅಮ್ಮ ನೆಂಟರ ಮನೆಯಲ್ಲೇ ಉಳಿದರು. ನನ್ನನ್ನು ಪಕ್ಕದ ಗೌಡರ ಮನೆಗೆ ಕಳಿಸಿದರು. ತಮ್ಮ ಮನೆಯಲ್ಲಿ ಉಳಿದವರನ್ನು ತಮ್ಮ ಬಂಧುಗಳಂತೆಯೇ ಉಪಚರಿಸಿದ ಗೌಡರು, ಉಭಯಕುಶಲೋಪರಿ ವಿಚಾರಿಸಿ, ಆತಿಥ್ಯ ನೀಡಿದರು. ನನ್ನನ್ನೂ ಮಾತನಾಡಿಸಿ ಇನ್ನೇನು ನಿದ್ರೆಗೆ ಜಾರಬೇಕು ಎನ್ನುವಷ್ಟರಲ್ಲಿ ಗೌಡರು “ಮುಂಡೆ ಬೇಕಾ?’ ಎಂದು ಕೇಳಿದರು. ನನಗೆ ಗಾಬರಿಯಾಯಿತು, ಅಯ್ಯೋ, ಇದೇನಪ್ಪಾ ಗೌಡರು ಹೀಗ್ಯಾಕೆ ಕೇಳುತ್ತಿದ್ದಾರೆ ಎಂದು. ನಾನೋ ಪಕ್ಕಾ ಒರಟು ಭಾಷೆಯ ಬಯಲು ಸೀಮೆಯವನು. ಗೌಡರೋ ಪಕ್ಕಾ ಮಲೆನಾಡಿನ ಮೃದುಭಾಷಿಕರು. ನಮ್ಮ ಕಡೆ “ಮುಂಡೆ’ ಅಂದರೆ ಇರುವ ಅರ್ಥಕ್ಕೂ, ಮಲೆನಾಡಿನ ಪ್ರದೇಶದಲ್ಲಿ ಅದೇ ಪದಕ್ಕೆ ಇರುವ ಅರ್ಥಕ್ಕೂ ಅಜಗಜಾಂತರವಿದೆ ಎನ್ನುವುದು ನನಗೇನು ಗೊತ್ತು!!?
ನಾನು ಗೌಡರ ಮಾತಿಗೆ ಪ್ರತಿಕ್ರಿಯಿಸದೆ ಸುಮ್ಮನಾದೆ. ಆದರೆ ಗೌಡರೂ ಬಿಟ್ಟಾರೆಯೇ? ಸ್ವಲ್ಪ ಸಮಯದ ನಂತರ ಮತ್ತೆ “ತಮ್ಮಾ, ನಿನಗೆ ಮುಂಡೆ ಬೇಕಾ?’ ಎಂದು ಮತ್ತೆ ಕೇಳಿದರು. ಅಯ್ಯೋ, ಇದೊಳ್ಳೆ ಕಥೆಯಾಯ್ತಲ್ಲ ಎನ್ನುವಷ್ಟರಲ್ಲೇ ಆಪತ್ಕಾಲದಲ್ಲಿ ಬಂಧು ಬಾಂಧವನಂತೆ ನಮ್ಮ ಮಾವ, ಗೌಡರ ಮನೆಗೆ ಬಂದ. ನಾನು ಮಾವನನ್ನು ಗುಟ್ಟಾಗಿ ಕರೆದು ಕೇಳಿದೆ: “ಏನೋ ಮಾವಾ… ಗೌಡ್ರು ಮುಂಡೆ ಬೇಕಾ? ಮುಂಡೆ ಬೇಕಾ? ಅಂತಾ ಕೇಳಾಕುಂತಾರಲ್ಲೋ… ಹಂಗ ಅಂದ್ರ ಏನಪಾ?!’ ಅಂತ. “ಲೇ ಹಂಗಂದ್ರ ಮಲೆನಾಡು ಕಡೆ ಅರ್ಧ ಪಂಚೆಗೆ ಮುಂಡೆ ಅಂತಾರಲೇ’ ಅಂದ ನಮ್ಮ ಮಾವ. ನಾನು ಪ್ಯಾಂಟು ಹಾಕಿದ್ದನ್ನು ನೋಡಿ ಪಂಚೆ ಹಾಕ್ಕೊಂಡು ಮಲಗಬಹುದೇನೋ ಅಂತ ಗೌಡ್ರು ಹಾಗೆ ಕೇಳಿದ್ದಾರೆ.
“ಅಯ್ಯೋ ಹಾಗಾ?! ಆಯ್ತು ಬಿಡು. ನಾ ಹೇಳ್ತೀನಿ ಗೌಡ್ರಿಗೆ’ ಅಂದು “ಗೌಡ್ರೇ, ನನಗೆ ನಿಮ್ಮ ಯಾವ ಮುಂಡೇನೂ ಬೇಡ. ನಾನು ಪ್ಯಾಂಟು ಹಾಕ್ಕೊಂಡೇ ಮಲಗ್ತಿàನಿ’, ಅಂತ ಉತ್ತರಿಸಿದೆ. ನನ್ನನ್ನು ಇಕ್ಕಟಿಗೆ ಸಿಲುಕಿಸಿದ್ದ ಪರಿಸ್ಥಿತಿ ಅದು. ನಮ್ಮ ಮಾವ ಬರದೇ ಇದ್ದಿದ್ದರೆ ಏನಾಗುತ್ತಿತ್ತೋ!!? ಈಗಲೂ ಆ ದಿನವನ್ನೂ ನೆನೆದರೆ ನಗು ಉಕ್ಕಿ ಬರುತ್ತದೆ. ಆದರೆ ಮೊನ್ನೆ ಮೊನ್ನೆ ಗೌಡರು ತೀರಿ ಹೋದರು ಎಂಬ ಸುದ್ದಿ ಕೇಳಿ ಮನಸ್ಸು ಭಾರವಾಯಿತು. ಅವರನ್ನು ನೆನೆಯುವ ಪ್ರಯತ್ನದಲ್ಲಿ ಈ ಘಟನೆ ಕಣ್ಣ ಮುಂದೆ ಹಾದು ಹೋಯಿತು…
– ಕುಮಾರಸ್ವಾಮಿ ವಿರಕ್ತಮಠ, ಹಾವೇರಿ