Advertisement

ಬಾಲ್ಯದಲ್ಲೇ ಮದುವೆ; ವಯಸ್ಸಲ್ಲೇ ವಿಧವೆ!

02:03 PM Jul 12, 2019 | Suhan S |

ಬಾಗಲಕೋಟೆ: ಹಲವು ವರ್ಷಗಳಿಂದ ಮಹಿಳೆಯರು ಪೋಷಣೆಗೆ ಒಳಗಾಗುತ್ತಿದ್ದಾರೆ. ಬಾಲ್ಯ ವಿವಾಹದಂತಹ ಪಿಡುಗಿಗೆ ಬಲಿಯಾಗುತ್ತಿರುವುದು ದುರದೃಷ್ಟಕರ. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರು ಜಾಗೃತರಾಗಿ ಬಾಲ್ಯ ವಿವಾಹ ಹಾಗೂ ಹೆಣ್ಣು ಭ್ರೂಣಹತ್ಯೆ ವಿರೋಧಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸದಸ್ಯೆ ತೇಜಸ್ವಿನಿ ಹಿರೇಮಠ ಹೇಳಿದರು.

Advertisement

ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಗುರುವಾರ ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ನಡೆದ ಬಾಲ್ಯವಿವಾಹ ಮತ್ತು ಹೆಣ್ಣು ಭ್ರೂಣಹತ್ಯೆ ಕುರಿತು ಜಾಗೃತಿ ಜಾಥಾ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದಿನ ದಿನಗಳಲ್ಲಿ ಇಳಿವಯಸ್ಸಿನ ಹಿರಿಯರು ತಾವು ಇರುವುದರೊಳಗಾಗಿ ಮೊಮ್ಮಕ್ಕಳ ಮದುವೆ ಮಾಡಬೇಕೆಂಬ ಹಟದಿಂದ ಮುಂದಾಗುವ ಸಮಸ್ಯೆಗಳಿಗೆ ಕಿವಿಗೊಡಬಾರದು. ಚಿಕ್ಕ ವಯಸ್ಸಿನಲ್ಲಿಯೇ ಬಾಲ್ಯವಿವಾಹದಂತಹ ಪಿಡುಗಿಗೆ ಬಲಿ ಮಾಡಿದ್ದರಿಂದ ಯುವತಿಯರು ಚಿಕ್ಕ ವಯಸ್ಸಿನಲ್ಲಿಯೇ ವಿಧವೆಯೆಂಬ ಹಣೆಪಟ್ಟಿ ಕಟ್ಟಿಗೊಂಡು ಗೋಳು ಅನುಭವಿಸುತ್ತಿದ್ದಾರೆ ಎಂದರು.

ಇಂತಹ ವಿಧವೆಯರಿಗೆ ಸಮಾಜದಲ್ಲಿ ಮತ್ತು ಶುಭ ಕಾರ್ಯಗಳಲ್ಲಿ ಗೌರವ ದೊರೆಯದೇ ಇರುವುದರಿಂದ ಮನದಲ್ಲಿ ಕೊರಗುವಂತಾಗಿದೆ. ಇದಕ್ಕೆ ಪಾಲಕರು ಮಾಡಿದ ತಪ್ಪ್ಪು ಹಾಗೂ ಮಕ್ಕಳಿಗೆ ಶಿಕ್ಷಣ ಕೊಡದೇ ಇದ್ದುದು ಕಾರಣವಾಗಿದೆ. ಇಂದು ಮಹಿಳೆ ಅಬಲೆಯಲ್ಲ, ಸಬಲೆಯೆಂಬ ದಿಟ್ಟ ನಿರ್ಧಾರದಿಂದ ಅಲ್ಲಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ವಿದ್ಯಾರ್ಥಿಗಳು ಸುಶಿಕ್ಷಿತರಾಗಿ ಬಾಲ್ಯವಿವಾಹದಂತಹ ಪಿಡುಗಿಗೆ ಬಲಿಯಾಗುವ ಸಹೋದರಿ ಸಮಾನರಾದ ಅನೇಕ ಮುಗ್ದ ಹೆಣ್ಣು ಮಕ್ಕಳನ್ನು ಈ ಪಿಡುಗಿನಿಂದ ರಕ್ಷಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ, ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ಸರಕಾರ ಮಹಿಳೆಯರಿಗಾಗಿ ಅನೇಕ ಯೋಜನೆ ಹಾಕಿಕೊಂಡಿದ್ದು, ಆ ಯೋಜನೆಗಳನ್ನು ಪ್ರತಿ ಗ್ರಾಮಗಳಿಗೆ ತೆರಳಿ, ಮನೆಮನೆಗೆ ತಲುಪಿಸುವ ಕಾರ್ಯ ನಮ್ಮದಾಗಿದೆ. ಇಲಾಖೆಯಿಂದ ಬೀದಿ ನಾಟಕ ಹಾಗೂ ಜನಪದ ಸಂಗೀತ ಕಲಾ ತಂಡಗಳಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

Advertisement

ಇದೇ ಸಂದರ್ಭದಲ್ಲಿ ಜಾಗೃತಿ ಪೋಸ್ಟರ್‌ ಬಿಡುಗಡೆ ಮಾಡಲಾಯಿತು. ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಆರ್‌.ಎಸ್‌. ದಡ್ಡಿ, ಉಪ ಪ್ರಾಚಾರ್ಯ ಎಂ.ಬಿ. ದೊಡ್ಡಪ್ಪನವರ, ಸರ್ಚ್‌ ಸಂಸ್ಥೆಯ ಪ್ರತಿನಿಧಿಗಳಾದ ಕುಮಾರ ಬಿ.ಎನ್‌., ಶೈಲಜಾಕುಮಾರ, ದೈಹಿಕ ಶಿಕ್ಷಣ ಶಿಕ್ಷಕ ಬಿರಾದಾರ ಉಪಸ್ಥಿತರಿದ್ದರು.ಸಹಶಿಕ್ಷಕಿ ಕುಲಕರ್ಣಿ ಸ್ವಾಗತಿಸಿದರು. ಸಹ ಶಿಕ್ಷಕ ಪಿ.ಎಸ್‌.ಗಿರಿಯಪ್ಪನವರ ನಿರೂಪಿಸಿದರು.

ಜಾಗೃತಿ ಜಾಥಾ ಬಾಲ್ಯವಿವಾಹ ಹಾಗೂ ಹೆಣ್ಣು ಭ್ರೂಣಹತ್ಯೆ ತಡೆಯುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು. ಜಾಗೃತಿ ಜಾಥಾ ಬಾಲಕಿಯರ ಪ.ಪೂ. ಕಾಲೇಜಿನಿಂದ ಪ್ರಾರಂಭವಾಗಿ ಮರಳಿ ಕಾಲೇಜಿಗೆ ಮುಕ್ತಾಯಗೊಂಡಿತು. ಜಾಥಾದುದ್ದಕ್ಕೂ ವಿದ್ಯಾರ್ಥಿಗಳು ಜಾಗೃತಿ ಫಲಕ ಹಿಡಿದುಕೊಂಡು ಘೋಷಣೆ ಕೂಗುತ್ತಾ ಜಾಗೃತಿ ಮೂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next