ಮುಂಬಯಿ : ನಿರಂತರ 7ನೇ ದಿನವಾಗಿ ಇಂದು ಗುರುವಾರ ಕೂಡ ನಷ್ಟದ ಹಾದಿಯಲ್ಲಿ ತೆವಳಿಕೊಂಡು ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 230.22 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 37,558.91 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 57.65 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 11,301.80 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇಂದಿನ ಅತೀ ದೊಡ್ಡ ನಷ್ಟದ ಶೇರು ಆರ್‌ಐಎಲ್ ಶೇ.3.41ರ ಕುಸಿತವನ್ನು ಅನುಭವಿಸಿತು. ಇದನ್ನು ಅನುಸರಿಸಿ ಕೋಲ್ ಇಂಡಿಯಾ, ಏಶ್ಯನ್ ಪೇಂಟ್ಸ್, ಎನ್‌ಟಿಪಿಸಿ, ಕೋಟಕ್ ಬ್ಯಾಂಕ್, ಭಾರ್ತಿ ಏರ್‌ಟೆಲ್, ವೇದಾಂತ, ಪವರ್ ಗ್ರಿಡ್ ಮತ್ತು ಅವಳಿ ಎಚ್ ಡಿ ಎಫ್ ಸಿ ಶೇರುಗಳು ಶೇ.2.53ರ ನಷ್ಟವನ್ನು ಅನುಭವಿಸಿದವು.
ಅಮೆರಿಕ – ಚೀನ ನಡುವಿನ ವಾಣಿಜ್ಯ ಬಿಕ್ಕಟ್ಟು ಹಲವು ಸುತ್ತಿನ ಮಾತುಕತೆಗಳ ಬಳಿಕವೂ ವಿಫಲವಾಗಿದ್ದು ಇದೀಗ ವಿಶ್ವಾದ್ಯಂತದ ಶೇರು ಮಾರುಕಟ್ಟೆಗಳು ಉಭಯ ದೇಶಗಳ ನಡುವಿನ ಮುಂದಿನ ‘ವಾಷಿಂಗ್ಟನ್ ಮಾತುಕತೆ’ಯನ್ನು ಕುತೂಹಲದಿಂದ ಎದುರು ನೋಡುತ್ತಿವೆ ಎಂದು ವರದಿಗಳು ತಿಳಿಸಿವೆ.
ಡಾಲರ್ ಎದುರು ರೂಪಾಯಿ ಇಂದು 22 ಪೈಸೆಗಳ ಕುಸಿತವನ್ನು ಕಂಡು 69.93 ರೂ. ಮಟ್ಟಕ್ಕೆ ಇಳಿಯಿತು. ಇದೇ ವೇಳೆ ಬ್ರೆಂಟ್ ಕಚ್ಚಾ ತೈಲ ಶೇ.0.10 ಇಳಿಕೆಯನ್ನು ಕಂಡು ಬ್ಯಾರಲ್ ಗೆ 70.30 ಡಾಲರ್ ಮಟ್ಟದಲ್ಲಿ ಬಿಕರಿಯಾಗುತ್ತಿತ್ತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,623 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,065 ಶೇರುಗಳು ಮುನ್ನಡೆ ಸಾಧಿಸಿದವು; 1,404 ಶೇರುಗಳು ಹಿನ್ನಡೆಗೆ ಗುರಿಯಾದವು; 154 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.