ಮುಂಬಯಿ : ಮುಂಬಯಿ ಶೇರು ಪೇಟೆ ನಿರಂತರ ಆರನೇ ದಿನದ ಗೆಲುವಿನ ಓಟವನ್ನು ಇಂದು ಗುರುವಾರ ಕೂಡ ಮುಂದುವರಿಸಿದೆ. ಇಂದಿನ ವಹಿವಾಟಿನಲ್ಲಿ ಐಟಿ ರಂಗದ ಶೇರುಗಳು ಬಹುವಾಗಿ ಮಿಂಚಿ ಸೆನ್ಸೆಕ್ಸ್ ಸೋಲದಂತೆ ನೋಡಿಕೊಂಡವು.
ದಿನಪೂರ್ತಿ ಏಳು ಬೀಳುಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರು ಪೇಟೆ ಸೆನ್ಸೆಕ್ಸ್ ಕೊನೇ ತಾಸಿನಲ್ಲಿ ಕಂಡು ಬಂದ ಭರಾಟೆಯ ಖರೀದಿಯ ಬಲದಲ್ಲಿ ದಿನದ ನಷ್ಟವನ್ನೆಲ್ಲ ಸರಿದೂಗಿಸಿಕೊಂಡು ದಿನಾಂತ್ಯವನ್ನು 26.53 ಅಂಕಗಳ ಲಾಭದೊಂದಿಗೆ 33,588.08 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ ಕೂಡ 6.45 ಅಂಕಗಳ ಅಲ್ಪ ಗಳಿಕೆಯನ್ನು ಕಾಯ್ದುಕೊಂಡು ದಿನದ ವಹಿವಾಟನ್ನು 10,307.30 ಮಟ್ಟದಲ್ಲಿ ಕೊನೆಗೊಳಿಸಿ ಗೆಲುವಿನ ಓಟವನ್ನು ಅಬಾಧಿತವಾಗಿ ಇಂದಿನ ಆರನೇ ದಿನಕ್ಕೂ ಒಯ್ದಿತು.
ಕಳೆದ ಐದು ದಿನಗಳ ನಿರಂತರ ಗೆಲುವಿನ ಓಟದಲ್ಲಿ ಸೆನ್ಸೆಕ್ಸ್ ಒಟ್ಟು 801 ಅಂಕಗಳನ್ನು ಸಂಪಾದಿಸಿರುವುದು ಗಮನಾರ್ಹವಾಗಿದೆ.
ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿ ಬಂದ ಹೊರತಾಗಿಯೂ ಡಾಲರ್ ಎದುರು ರೂಪಾಯಿ ಸುಧಾರಿಸಿರುವುದನ್ನು ಲೆಕ್ಕಿಸಿ ಮುಂಬಯಿ ಶೇರು ಪೇಟೆಯಲ್ಲಿ ದೇಶೀಯ ಸಾಂಸ್ಥಿಕ ಹೂಡಿಕೆದಾರರು ಮುಂಚೂಣಿ ಶೇರುಗಳ ಖರೀದಿಯಲ್ಲಿ ತೊಡಗಿಕೊಂಡದ್ದೇ ಸೆನ್ಸೆಕ್ಸ್, ನಿಫ್ಟಿಯ ಗೆಲುವಿನ ಓಟ ತಡೆರಹಿತವಾಗಿ ಸಾಗಲು ಕಾರಣವಾಯಿತು.