Advertisement

ಡೊಮೈನ್ ಗಾಗಿ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಕೇರಳದ ಯುವಕನಲ್ಲಿ ಅಂಗಲಾಚಿದ್ದ !

03:00 PM Jul 21, 2020 | Mithun PG |

ಆನ್ ಲೈನ್, ವೆಬ್ ಸೈಟ್ ಅಥವಾ ಸಾಮಾಜಿಕ ಜಾಲತಾಣಗಳೆಂಬುದು ಊಹೆಗೆ ನಿಲುಕದ್ದು. ಇಲ್ಲಿ ಪ್ರತಿನಿತ್ಯ ಕೂಡ ಏಳುಬೀಳುಗಳಾಗುತ್ತವೆ. ಕೆಲವೊಮ್ಮೆ ಇವು ಜಾಗತಿಕವಾಗಿ ಸುದ್ದಿಯಾದರೇ, ಹಲವು ಬಾರಿ ಯಾರ ಗಮನಕ್ಕೂ ಬಂದಿರುವುದಿಲ್ಲ.  ಇತ್ತೀಚಿಗಷ್ಟೆ ಗೂಗಲ್ ತನ್ನ blogspot.in ಡೊಮೈನ್ ಮೇಲೆ ಅಧಿಕಾರವನ್ನು ಕಳೆದುಕೊಂಡಿತ್ತು. ಮಾತ್ರವಲ್ಲದೆ ಇದರಿಂದ 44 ಲಕ್ಷ ಬ್ಲಾಗ್ ಗಳಿಗೆ ಅಪತ್ತು ಎದುರಾಗಿತ್ತು.

Advertisement

ಗೂಗಲ್‌ 2003ರಲ್ಲಿ blogspot.in ಡೊಮೈನ್ ಅನ್ನು ಖರೀದಿಸಿತ್ತು.  (ಸುಲಭವಾಗಿ ಹೇಳುವುದಾದರೇ udayavani.com, facebook.com, amazon.com, twitter.com ಇವೆಲ್ಲಾ ಒಂದು ಡೊಮೈನ್ ಗಳು, ಇವುಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಬೇಕು)  ಬ್ಲಾಗ್‌ ಕ್ರಾಂತಿಯ ಈ ಉಚ್ಛಾಯದ ಕಾಲದಲ್ಲಿ ಭಾರತದ ಹೆಸರನ್ನು ಸೂಚಿಸುವ blogspot.in ನೆಟ್‌ಪ್ರಿಯರಿಗೆ ಸುಲಭವಾಗಿ ಬ್ಲಾಗ್‌ ತೆರೆಯಲು ನೆರವಾಗಿತ್ತು. ಆದರೇ ಕಾಲಬದಲಾದಂತೆ ಗೂಗಲ್ ಈ ಡೊಮೈನ್ ನನ್ನು ನವೀಕರಣ ಮಾಡಿರಲಿಲ್ಲ. (ಅಥವಾ ನವೀಕರಿಸಲು ಮರೆತಿರಲೂಬಹುದು?)

ಪರಿಣಾಮವೆಂಬವಂತೆ ಈ ಡೊಮೈನ್ ಅನ್ನು ಬೇರೋಬ್ಬರು ಅಥವಾ ಸಂಸ್ಥೆಯೊಂದು ಖರೀದಿಸಿದೆ. ಆ ಮೂಲಕ ಗೂಗಲ್ blogspot.in ಮೇಲೆ ತನ್ನ ಹಿಡಿತವನ್ನು ಕಳೆದುಕೊಂಡಿದೆ. ಮಾತ್ರವಲ್ಲದೆ ಬ್ಲಾಗಿಂಗನ್ನು ಪ್ರವೃತ್ತಿ, ದುಡಿಮೆ ಮಾರ್ಗವಾಗಿ ಮಾಡಿಕೊಂಡಿದ್ದವರಿಗೆ ಈ ಬೆಳವಣಿಗೆ ಶಾಕ್‌ ನೀಡಿತ್ತು. ಆದರೆ, ಬ್ಲಾಗ್‌ಸ್ಪಾಟ್‌.ಇನ್‌ ನ ಯುಆರ್‌ಎಲ್‌ಗ‌ಳನ್ನು ಬ್ಲಾಗ್‌ಸ್ಪಾಟ್‌.ಕಾಂ.ಗೆ ಪರಿವರ್ತಿಸಲು ಬ್ಲಾಗಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಬಳಕೆದಾರರು ಅನ್ಯ ಮಾರ್ಗದಲ್ಲಿ ಬ್ಲಾಗನ್ನು ಪ್ರವೇಶಿಸಬಹುದಾಗಿದೆ.

ಒಂದು ವೆಬ್‌ಸೈಟ್ ಅನ್ನು ತೆರೆಯುವುದಕ್ಕೂ ಮೊದಲು ಅದರ ‘ವಿಳಾಸ’ ಅಥವಾ ‘ ಡೊಮೈನ್ ನೇಮ್‌’ ಆಯ್ಕೆ ಮಾಡುವುದು ಅಥವಾ ಖರೀದಿಸುವುದು ಬಹಳಮುಖ್ಯ. ಹೊಸ ಉದ್ಯಮದ ಬಗ್ಗೆ ಮತ್ತು ನೀಡುವ ಸೇವೆಗಳ ಬಗ್ಗೆ ಇಂಟರ್‌ನೆಟ್‌ ಬಳಕೆದಾರರಿಗೆ ಹುಡುಕಾಡಲು ಈ ವಿಳಾಸ ನೆರವಾಗುತ್ತದೆ.

Advertisement

ಇಂಟರ್‌ನೆಟ್‌ ಜಗತ್ತಿನಲ್ಲಿ ಹಲವು ಡೊಮೈನ್ ಲಭ್ಯವಿವೆ. ಡಾಟ್ ಕಾಮ್‌ (.com), ಡಾಟ್ ನೆಟ್‌ (.net), ಡಾಟ್ ಸಿಸಿ (.cc), ಡಾಟ್ ನೇಮ್‌ (.name), ಡಾಟ್‌ ಟಿವಿ (.tv) ಇತ್ಯಾದಿ ಡೊಮೈನ್ ಇರುತ್ತವೆ. ಇವುಗಳ ದರಪಟ್ಟಿಯೂ ವಿಭಿನ್ನವಾಗಿಯೇ ಇರುತ್ತದೆ. ಉದಾಹರಣೆಗೆ ಅಂತರ್ಜಾಲ.ಕಾಂ ಎಂಬ ಹೆಸರಿನಲ್ಲಿ ನೀವೊಂದು ವೆಬ್ ಸೈಟ್ ಆರಂಭಿಸಬೇಕೆಂದಿರುವಿರಿ. ಆದರೇ ಆ ಹೆಸರಿನ ಡೊಮೈನ್ ಅನ್ನು ಅದಾಗಲೇ ಬೇರೊಬ್ಬರು ಖರೀದಿಸಿಟ್ಟಿರುತ್ತಾರೆ (ಇದೊಂದು ಹಣಗಳಿಸುವ ಮಾರ್ಗ) ನಿಮಗೆ ಅಂತರ್ಜಾಲ.ನೆಟ್, ಅಥವಾ ಅಂತರ್ಜಾಲ.ಆರ್ಗ್ ಹೆಸರು ಒಪ್ಪಿಗೆಯಾಗುವುದಿಲ್ಲ. ಹಾಗಿದ್ದಾಗ ಅಂತರ್ಜಾಲ.ಕಾಂ ಡೊಮೈನ್ ರಿಜಿಸ್ಟಾರ್ ಮಾಡಿಸಿದ ವ್ಯಕ್ತಿಯ ಬಳಿ ಒಂದು ಡೀಲ್ ಕುದುರಿಸಿ ಅವರ ಹೇಳಿದ್ದಷ್ಟು ಹಣವನ್ನು ಪಾವತಿಸಿ ಡೊಮೈನ್ ಪಡೆಯಬೇಕಾಗುತ್ತದೆ.

ಒಂದು ಘಟನೆ ಇಲ್ಲಿ ನೆನಪಿಸಿಕೊಳ್ಳಬಹುದು:

ಇಂದು ಫೇಸ್ ಬುಕ್ ಎಂಬುದು ಸಾಮಾಜಿಕ ಜಾಲತಾಣದ ದೈತ್ಯ. ಬಿಲಿಯನ್ ಗಟ್ಟಲೇ ವ್ಯವಹಾರ ನಡೆಸುವ ಈ ಸಂಸ್ಥೆಯ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್. ಆದರೇ ಇದೇ ಮಾರ್ಗ್ ಜುಕರ್ ಬರ್ಗ್ ಕೇರಳದ ಒಬ್ಬ ಯುವಕನಲ್ಲಿ ಡೊಮೈನ್ ಗಾಗಿ ಅಂಗಾಲಾಚಿದ್ದ ಎಂಬ ಸ್ವಾರಸ್ಯ ನಿಮಗೆ ತಿಳಿದಿದೆಯೇ ?

ಹೌದು ಫೇಸ್ ಬುಕ್.ಕಾಂ ಮೊದಲ ಬಾರಿಗೆ ಬಳಕೆಗೆ ಬರುವಾಗ ಅದರ ಸುತ್ತಮುತ್ತಲಿನ ಡೊಮೈನ್ ಗಳನ್ನು ಕೂಡ ಖರೀದಿಸುವ ಅನಿವಾರ್ಯತೆ ಇರುತ್ತದೆ. ಅಂದರೇ FB.com, new facebook.com ಇವೆಲ್ಲಾ ಫೇಸ್ ಬುಕ್ ಮಾದರಿಯಲ್ಲೆ ಇರುವ ಡೊಮೈನ್ ಗಳು. (ಪ್ರತಿಸ್ಪರ್ಧಿ ಕಂಪೆನಿಗಳು ನಮ್ಮ ಉದ್ಯಮದ ಹೆಸರಿನಲ್ಲಿ ಬೇರೆ ಡೊಮೈನ್ ಗಳಲ್ಲಿ ವೆಬ್‌ ವಿಳಾಸ ನೋಂದಣಿ ಮಾಡುವುದನ್ನು ತಪ್ಪಿಸಬಹುದು)

ಅಮಲ್ ಅಗಸ್ಟಿನ್ ಎಂಬ ಕೇರಳದ ಯುವಕ maxchanzukerberg.org ಎಂಬ ಹೆಸರಿನಲ್ಲಿ ಡೊಮೈನ್ ಒಂದನ್ನು ಖರೀದಿಸಿದ್ದ. ವಿಪರ್ಯಾಸ ವೆಂದರೇ ಇದು ಮಾರ್ಕ್ ಜುಕರ್ ಬರ್ಗ್ ಮಗಳ ಹೆಸರಾಗಿತ್ತು. ಈ ಘಟನೆ ನಡೆಯುವ ವೇಳೆಗೆ ಅಮಲ್ ಅಂತಿಮ ವರ್ಷದ ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಯಾಗಿದ್ದ. ಈತನ ಬಳಿ maxchanzukerberg.org ಎಂಬ ಡೊಮೈನ್ ಇದ್ದುದರಿಂದ ಕೂಡಲೇ ಫೇಸ್ ಬುಕ್ ಸಂಸ್ಥೆ ಆತನನ್ನು ಸಂಪರ್ಕಿಸಿತ್ತು. ಮಾತ್ರವಲ್ಲದೆ ಅದನ್ನು ಖರೀದಿಸಲು ಉತ್ಸುಕತೆ ತೋರಿಸಿತ್ತು. ಡೊಮೈನ್ ಖರೀದಿಸಲು ಮುಂದಾಗಿದ್ದು ಫೇಸ್ ಬುಕ್ ಸಂಸ್ಥೆ ಎಂದು ತಿಳಿಯದೆ  ಅಮಲ್ ಕೇವಲ 700 ಡಾಲರ್ ಗೆ ಮಾರಿದ್ದ.

ಅಮಲ್ ಇದಕ್ಕೂ ಮೊದಲು ಹಲವಾರು ಡೊಮೈನ್ ಗಳನ್ನು ಖರೀದಿಸಿ ಸಣ್ಣ ಮೊತ್ತಕ್ಕೆ ಮಾರುತ್ತಿದ್ದ. ಫೇಸ್ ಬುಕ್ 700 ಡಾಲರ್ ನೀಡಿದ್ದೇ ಈತನಿಗೆ ಅತೀದೊಡ್ಡ ಮೊತ್ತವಾಗಿತ್ತು. ಈ ಘಟನೆಯನ್ನು ಅವನ ಮಾತಿನಲ್ಲೆ ಕೇಳಿ.

“ನಾನು ಐದಾರು ಡೊಮೈನ್ ಗಳನ್ನು ಖರೀದಿಸಿದ್ದೆ. ಪ್ರಮುಖವಾಗಿ ಮಾರ್ಕ್ ಜುಕರ್ ಬರ್ಗ್ ಮಗಳ ನಾಮಕರಣವಾದ ಸಂದರ್ಭದಲ್ಲಿ ಆ ಮಗುವಿನ ಹೆಸರಿನಲ್ಲಿ ಡೊಮೈನ್ ಖರೀದಿಸಿದರೆ ಹೇಗೆ ಎಂದು ಆಲೋಚಿಸಿ ರಿಜಿಸ್ಟಾರ್ ಕೂಡ ಮಾಡಿಸಿದ್ದೆ. ಅದಾಗಿ ಕೆಲವು ದಿನಗಳಲ್ಲಿ GoDaddy (internet domain register and web hosting company) ಯಿಂದ ಒಂದು ಇ-ಮೇಲ್ ಬಂತು. ಅದರಲ್ಲಿ maxchanzukerberg.org ಡೊಮೈನ್ ನನ್ನು ಮಾರಾಟ ಮಾಡಬಹುದೇ ? ಎಷ್ಟು ಹಣ ನಿರೀಕ್ಷೆ ಮಾಡುತ್ತೀರಿ ? ಎಂದು ಕೇಳಿದ್ದರು. ನಾನು 700 ಡಾಲರ್ ಎಂದು ಪ್ರತ್ಯತ್ತರ ನೀಡಿದ್ದೆ.

ಆದರೇ ಡೊಮೈನ್ ಮಾರಾಟವಾದ ನಂತರ ಫೇಸ್ ಬುಕ್ ಕಡೆಯಿಂದ ಒಂದು ಲೆಟರ್ ಹೆಡ್ ಬಂದಿತ್ತು. ಆಗಲೇ ತಿಳಿದದ್ದು ನಾನು ಫೇಸ್ ಬುಕ್ ಸಂಸ್ಥೆಗೆ ಡೊಮೈನ್ ನನ್ನು ಮಾರಾಟ ಮಾಡಿದ್ದೇನೆಂದು! ಅದರೂ ಒಂದು ಉತ್ತಮ ಮೊತ್ತಕ್ಕೆ ಮಾರಾಟ ಮಾಡಿರುವ ತೃಪ್ತಿಯಿದೆ ಎಂದಿದ್ದಾನೆ.”

ಇಲ್ಲಿ ಘಟನೆ ಸಾಮಾನ್ಯವಾಗಿ ಕಂಡರೂ ಅಮಲ್ ಮತ್ತು ಜುಕರ್ ಬರ್ಗ್ ನಡುವೆ ನಡೆದ ಒಪ್ಪಂದ ಅಸಮಾನ್ಯವಾದುದು ಎಂದು ಸೈಬರ್ ಪರಿಣಿತರು ತಿಳಿಸಿದ್ದಾರೆ.  ಈ ಡೀಲ್ ಕೇವಲ ಆನ್ ಲೈನ್ ಮೂಲಕವೇ ನಡೆದಿದೆ. ಅಮಲ್ ಇಲ್ಲಿ ಕೋಟಿಗಟ್ಟಲೇ ಹಣ ಕೇಳುವ ಅವಕಾಶವಿತ್ತು. ಯಾಕೆಂದರೇ ಜುಕರ್ ಬರ್ಗ್ ಅವರಿಗೆ ಈ ಡೊಮೈನ್ ಖರೀದಿಸಲೇಬೇಕಾದ ಅನಿವಾರ್ಯತೆ ಇತ್ತು. ಹಾಗಾಗಿ ಅಮಲ್ ಎಷ್ಟು ಮೊತ್ತ ಕೇಳಿದ್ದರೂ ಜುಕರ್ ಬರ್ಗ್ ಪಾವತಿಸಲೇಬೇಕಾಗಿತ್ತು! ಅದಾಗ್ಯೂ ಅಮಲ್ ತಿಳಿಯದೇ ಕೇವಲ 700 ಡಾಲರ್ ಗೆ ಮಾರಾಟ ಮಾಡಿದ್ದ. ಇದು ಇಂಟರ್ ನೆಟ್ ನಲ್ಲಿ ಸಾಕಷ್ಟು ಚರ್ಚೆಗೊಳಗಾಗಿತ್ತು.

ಪ್ರಸಿದ್ದ ವ್ಯಕ್ತಿಗಳ ಹೆಸರಲ್ಲಿ, ಅಥವಾ ಸಂಸ್ಥೆಯ ಹೆಸರಲ್ಲಿ ಹಲವಾರು ತಾಂತ್ರಿಕ ಪರಿಣಿತರು ಡೊಮೈನ್ ರಿಜಿಸ್ಟ್ರಾರ್ ಮಾಡುತ್ತಾರೆ. ಇದು ಅಪರಾಧವೇನಲ್ಲ. ಈ ಹಿಂದೆ ಅಮಿತಾಬ್ ಬಚ್ಚನ್.ಕಾಂ ಸಲ್ಮಾನ್ ಖಾನ್.ಕಾಂ ಹೆಸರಿನಲ್ಲಿ ಕೂಡ ಟೆಕ್ಕಿಗಳು ರಿಜಿಸ್ಟರ್ ಮಾಡಿದ್ದರು. ಅನಂತರದಲ್ಲಿ ಸಂಬಂಧಪಟ್ಟವರಿಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು.

ಆನ್ ಲೈನ್ ಮೂಲಕ ಡೊಮೈನ್ ಅನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಪ್ರಕ್ರಿಯೆಗೆ cyber squatting ಎಂದು ಕರೆಯುತ್ತಾರೆ.

  • ಮಿಥುನ್ ಮೊಗೇರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next