Advertisement
ಮಂಗಳೂರಿನಲ್ಲಿ ಸಾಗರ ಪ್ರವಾಸೋದ್ಯಮಕ್ಕಿರುವ ಅವಕಾಶಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಸಸಿಹಿತ್ಲಿನಲ್ಲಿ ಸರ್ಫಿಂಗ್ ಉತ್ಸವ ಹಾಗೂ ಕೂಳೂರು ಫಲ್ಗುಣಿ ನದಿಯಲ್ಲಿ ನದಿ ಉತ್ಸವ ಆರಂಭಿಸಲಾಗಿತ್ತು. ಅವೆರಡೂ ಭಾರೀ ಜನಾಕರ್ಷಣೆಯನ್ನೂ ಪಡೆದುಕೊಂಡು ಸಾಗರ ಪ್ರವಾಸೋದ್ಯಮದಲ್ಲಿ ಹೊಸ ಶಕೆಯ ಭರವಸೆ ಮೂಡಿಸಿದ್ದವು.
ರಾಜ್ಯದಲ್ಲೇ ಪ್ರಥಮವಾಗಿ ಪ್ರಾಯೋಗಿಕವಾಗಿ ಮಂಗಳೂರಿನಲ್ಲಿ ಕಳೆದ ವರ್ಷದ ಜನವರಿ 12 ಮತ್ತು 13ರಂದು ಆಯೋಜನೆಗೊಂಡಿದ್ದ ನದಿ ಉತ್ಸವಕ್ಕೆ ನಿರೀಕ್ಷೆಗೂ ಮೀರಿದ ಜನಸ್ಪಂದನೆ ವ್ಯಕ್ತವಾಗಿತ್ತು. 25,000ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಇಲಾಖೆಯ ಮೌನ
ನದಿ ಉತ್ಸವಕ್ಕೆ ಈ ಬಾರಿ ಇನ್ನಷ್ಟು ಮೆರುಗು ನೀಡಿ ಆಯೋಜಿಸಲು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ 1 ಕೋ.ರೂ. ಅನುದಾನ ಕೋರಿ ಆಗಸ್ಟ್‌ನಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಅದಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಪೂರಕ ಸ್ಪಂದನೆ ಇಲ್ಲವಾಗಿದ್ದು, ಈ ವರ್ಷ ನದಿ ಉತ್ಸವ ಆಯೋಜನೆಗೊಳ್ಳದು ಎಂಬುದು ಬಹುತೇಕ ಖಚಿತವಾಗುತ್ತಿದೆ.
Related Articles
Advertisement
ಸರ್ಫಿಂಗ್ ಉತ್ಸವ 2 ವರ್ಷಗಳಿಂದ ಇಲ್ಲಮಂಗಳೂರಿನ ಸಾಗರತೀರದಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಆಯಾಮವನ್ನು ತಂದುಕೊಟ್ಟಿದ್ದ ಸಸಿಹಿತ್ಲು ಸರ್ಫಿಂಗ್ ಉತ್ಸವ ಕಳೆದ ಎರಡು ವರ್ಷಗಳಿಂದ ನಡೆದಿಲ್ಲ. ಕಳೆದ ವರ್ಷ ರದ್ದುಗೊಂಡಿದ್ದ ಸರ್ಫಿಂಗ್ ಕ್ರೀಡೆ ಹಾಗೂ ಸರ್ಫಿಂಗ್ ಉತ್ಸವವನ್ನು 2020ರ ಜನವರಿಯಲ್ಲಿ ನಡೆಸುವ ಉದ್ದೇಶದಿಂದ ಆಗಸ್ಟ್‌ನಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸರಕಾರಕ್ಕೆ 1 ಕೋ.ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಿತ್ತು. 5 ತಿಂಗಳು ಕಳೆದರೂ ಸರಕಾರದಿಂದ ಪೂರಕ ಸ್ಪಂದನೆ ದೊರಕಿಲ್ಲ. ಸಸಿಹಿತ್ಲು ಕಡಲ ತೀರದಲ್ಲಿ 2016ರಲ್ಲಿ ಪ್ರಥಮ ಬಾರಿಗೆ ಜಿಲ್ಲಾಡಳಿತ, ಕೆನರಾ ವಾಟರ್ ನ್ಪೋರ್ಟ್ಸ್ ಪ್ರಮೋಶನ್ ಕೌನ್ಸಿಲ್ ಹಾಗೂ ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದ ಆಶ್ರಯದಲ್ಲಿ 24 ಲಕ್ಷ ರೂ. ವೆಚ್ಚದಲ್ಲಿ ಹಾಗೂ 2017ರಲ್ಲಿ 64 ಲಕ್ಷ ರೂ. ವೆಚ್ಚದಲ್ಲಿ ಎರಡು ದಿನಗಳ ಕಾಲ ರಾಷ್ಟ್ರೀಯ ಸರ್ಫಿಂಗ್ ಉತ್ಸವ ಆಯೋಜಿಸಲಾಗಿತ್ತು. ಇದರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಾಳುಗಳು ಭಾಗವಹಿಸಿದ್ದರು. 50,000ಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದರು. ಕಳೆದ ವರ್ಷ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅನುದಾನ ಬಾರದೆ ಸರ್ಫಿಂಗ್ ಉತ್ಸವ ನಡೆದಿರಲಿಲ್ಲ. ಪ್ರವಾಸೋದ್ಯಮ ಇಲಾಖೆಯ ನಿರಾಸಕ್ತಿ ಸರ್ಫಿಂಗ್ ಪ್ರಿಯರಲ್ಲಿ ಹಾಗೂ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿರೀಕ್ಷೆಯಲ್ಲಿರುವವರಲ್ಲಿ ನಿರಾಸೆ ಮೂಡಿಸಿದೆ. ನದಿ ಉತ್ಸವ ಹಾಗೂ ಸರ್ಫಿಂಗ್ ಉತ್ಸವಕ್ಕೆ ತಲಾ 1 ಕೋ.ರೂ. ಅನುದಾನ ಕೋರಿ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯ ನಿರೀಕ್ಷೆಯಲ್ಲಿದ್ದು ಬಿಡುಗಡೆಗೊಂಡರೆ ಈ ಎರಡೂ ಉತ್ಸವಗಳನ್ನು ಆಯೋಜಿಸಲಾಗುವುದು.
-ಉದಯ ಕುಮಾರ್, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು (ಪ್ರಭಾರ) – ಕೇಶವ ಕುಂದರ್