Advertisement

ಜಲಚರಗಳಿಗೆ ಮಾರಕವಾಗುತ್ತಿರುವ ಸಮುದ್ರ ಮಾಲಿನ್ಯ

09:33 AM Sep 23, 2022 | Team Udayavani |

ಕುಂದಾಪುರ: ಕಡಲ ತೀರದಲ್ಲಿರುವ ಕೆಲವು ನಗರಗಳ ತ್ಯಾಜ್ಯದ ನೀರು ನೇರವಾಗಿ ಸಮುದ್ರ ಸೇರುತ್ತಿರುವುದು, ಮೀನುಗಾರಿಕಾ ಬಂದರು, ಪ್ರವಾಸಿ ತಾಣಗಳು, ಬೀಚ್‌ಗಳಲ್ಲಿ ಪ್ರವಾಸಿಗರು, ಸ್ಥಳೀಯರು ಎಸೆಯುವ ಪ್ಲಾಸ್ಟಿಕ್‌ ಗಳೆಲ್ಲ ಕಸದ ರಾಶಿಯಾಗುತ್ತಿದ್ದು, ಇದು ಸಮುದ್ರದಲ್ಲಿ ಜೀವಿಸುವ ಜಲಚರಗಳಿಗೆ ಮಾರಕವಾಗಿ ಪರಿಣಮಿಸಿದೆ. ಇದರಿಂದ ಕಡಲಾಮೆ, ಡಾಲ್ಫಿನ್‌ನಂತಹ ಜೀವಿಗಳು ಸಾವನ್ನಪ್ಪಿದ ನಿದರ್ಶನವು ಇದೆ.

Advertisement

ಸಮುದ್ರ, ಕಡಲ ತೀರದಲ್ಲಿ ಪ್ಲಾಸ್ಟಿಕ್‌, ಚಪ್ಪಲಿ, ಬಾಟಲಿಗಳು, ತಿಂಡಿ ಪಟ್ಟಣಗಳು, ಬಳಸಿ ಬೀಸಾಡಿದ ಮೀನಿನ ಬಲೆಗಳಿಂದ ಸಮುದ್ರ ಮಲಿನಗೊಳ್ಳುತ್ತಿದ್ದು, ಈಗಂತೂ ಸಮುದ್ರದಲ್ಲಿ ತ್ಯಾಜ್ಯ ರಾಶಿ ದಿನೇ ದಿನೇ ಲೋಡುಗಟ್ಟಲೆ ಹೆಚ್ಚುತ್ತಿದೆ. ಇದು ಸಮುದ್ರ ಜೀವಿಗಳ ಜೀವಕ್ಕೆ ಕುತ್ತು ತರುತ್ತಿರುವುದು ಆತಂಕಕಾರಿ ಬೆಳವಣಿಗೆ.

ಕಡಲಾಮೆಗೆ ಹೆಚ್ಚಿನ ಅಪಾಯ

ಮರವಂತೆಯ ಕಡಲ ಕಿನಾರೆಯಲ್ಲಿ ಸೆ.21 ರಂದು ಅಳಿವಿನಂಚಿನಲ್ಲಿರುವ ಅಪರೂಪದ ಪೈಲೆಟ್‌ ವೇಲ್‌ ಎನ್ನುವ ತಿಮಿಂಗಿಲದ ಪ್ರಬೇಧವೊಂದು ಸಾವನ್ನಪ್ಪಿದ್ದು, ಅದರ ಕಳೇಬರ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿದಾಗ ಮೀನಿನ ಶ್ವಾಸಕೋಶದಲ್ಲಿ ಗಾಳಿ ಇರದ ಕಾರಣ, ಶುಷ್ಕ ವಾತಾವರಣದ ಒತ್ತಡದಿಂದ ಸಾವನ್ನಪ್ಪಿರಬಹುದು ಎಂದು ತಿಳಿದು ಬಂದಿದ್ದು, ಇದಕ್ಕೆ ಕಡಲಿನಲ್ಲಿ ಪ್ಲಾಸ್ಟಿಕ್‌, ಮೀನಿನ ಬಲೆಯಂತಹ ಕರಗಿಸಲಾಗದ ವಸ್ತುಗಳನ್ನು ತಿನ್ನುವ ಆಹಾರವೆಂದು ಸೇವಿಸಿರುವುದು ಸಹ ಒಂದು ಕಾರಣ ಎನ್ನುವುದಾಗಿ ಪರೀಕ್ಷೆ ನಡೆಸಿದ ಮಂಗಳೂರಿನ ಸ್ವಯಂ ಸೇವಾ ಸಂಸ್ಥೆಯಾದ ರೀಫ್ವಾಚ್‌ ಮರೈನ್‌ ಕನ್ಸರ್ವೇಶನ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ರೀತಿ ಕೆಲವು ದಿನಗಳ ಹಿಂದೆ ಹೊನ್ನಾವರದಲ್ಲಿ ಅನೇಕ ಕಡಲಾಮೆಗಳು ಬಲಿಯಾಗಿದ್ದವು. ಇವುಗಳಲ್ಲಿ ಹೆಚ್ಚಿನವು ಕಡಲಿಗೆ ಎಸೆದ ಬಲೆಗೆ ಮೀನು ಸಿಕ್ಕಿ, ಈಜಾಡಲು ಆಗದಿರುವುದರಿಂದ ಸಾವನ್ನಪ್ಪಿವೆ. ಕರಾವಳಿ ಭಾಗದಲ್ಲಿ ಸಮುದ್ರ ತ್ಯಾಜ್ಯ ಹೆಚ್ಚಳದಿಂದಾಗಿಯೇ ಡಾಲ್ಫಿನ್‌, ಬ್ಲೂವೇಲ್‌ ಪ್ರಬೇಧಗಳು ಸಾವನ್ನಪ್ಪಿರುವ ನಿದರ್ಶನಗಳು ಇವೆ.

Advertisement

ಅರಿವು ಮೂಡಬೇಕಿದೆ

ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್‌ನವರು ವಿವಿಧ ಸಂಘಟನೆಗಳೊಂದಿಗೆ ಕಳೆದ 150ಕ್ಕೂ ಅಧಿಕ ವಾರಗಳಿಂದ ಕೋಡಿ ಕಡಲ ತೀರದ ಸ್ವತ್ಛತ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದೆ. ತ್ರಾಸಿ – ಮರವಂತೆ ಕ್ಲೀನ್‌ ಪ್ರಾಜೆಕ್ಟ್ ನವರು ತ್ರಾಸಿ- ಮರವಂತೆ ಭಾಗದಲ್ಲಿ, ಬೈಂದೂರಿನ ಸೋಮೇಶ್ವರ ಕಡಲ ಕಿನಾರೆ ಸಹಿತ ಕರಾವಳಿಯುದ್ದಕ್ಕೂ ಹಲವೆಡೆ ಸ್ವಚ್ಛತ ಕಾರ್ಯ ನಿತ್ಯ ನಿರಂತರವಾಗಿ ನಡೆಯುತ್ತಿದೆ. ಆದರೆ ಪ್ರತಿ ವಾರ ಇವರು ಸ್ವಚ್ಛತೆ ಮಾಡುವಾಗ ಮಾತ್ರ ಲೋಡುಗಟ್ಟಲೆ ತ್ಯಾಜ್ಯ ರಾಶಿ ಸಂಗ್ರಹವಾಗುತ್ತಿದೆ. ಕಡಲಿಗೆ ಕಸ ಎಸೆಯಬಾರದು, ಅಲ್ಲಿಗೆ ಸೇರುವ ನದಿ, ಹಳ್ಳ, ತೊರೆ, ತೋಡಿನ ನೀರಿಗೂ ಪ್ಲಾಸ್ಟಿಕ್‌ ಇನ್ನಿತರ ಕಸವನ್ನೆಲ್ಲ ಎಸೆಯಬಾರದು ಅನ್ನುವ ನಾಗರಿಕ ಪ್ರಜ್ಞೆ ನಮ್ಮೆಲ್ಲರಲ್ಲೂ ಮೂಡಬೇಕಿದೆ. ಆಗ ಮಾತ್ರ ಸಮುದ್ರ ಮಾಲಿನ್ಯವನ್ನು ಒಂದಷ್ಟರ ಮಟ್ಟಿಗೆ ಕಡಿಮೆ ಮಾಡುವ ಜತೆಗೆ, ಜಲಚರಗಳನ್ನು ರಕ್ಷಿಸಬಹುದು.

ತ್ಯಾಜ್ಯ ಎಸೆಯಬೇಡಿ: ಸಮುದ್ರಕ್ಕೆ ಎಸೆಯುವ ಮೀನಿನ ಬಲೆ, ಪ್ಲಾಸ್ಟಿಕ್‌ಗಳಿಂದ ಅಲ್ಲಿ ವಾಸಿಸುವ ಜಲಚರಗಳಿಗೆ ಅಪಾಯವಿದೆ. ಅವುಗಳು ಸಾವನ್ನಪ್ಪಿದ ಪ್ರಸಂಗವೂ ನಡೆದಿದೆ. ಕಡಲಾಮೆಗಳಿಗೆ ಮೀನಿನ ಬಲೆಗಳೇ ಮಾರಕವಾಗಿವೆ. ಬಲೆಗಳನ್ನು ಕಡಲಿಗೆ ಎಸೆಯದೆ ಸ್ಥಳೀಯ ಸಂಸ್ಥೆಗಳ ಕಸ ವಿಲೇವಾರಿ ಘಟಕಕ್ಕೆ ನೀಡಿ. ಸಾಧ್ಯವಾದಷ್ಟು ತ್ಯಾಜ್ಯಗಳನ್ನು ಸಮುದ್ರ ಪಾಲಾಗದಂತೆ ನಾವೆಲ್ಲ ಎಚ್ಚರಿಕೆ ವಹಿಸುವ ಜತೆಗೆ, ಎಲ್ಲೆಡೆ ಜಾಗೃತಿಯೂ ಮೂಡಿಸಬೇಕಾಗಿದೆ. – ವಿರಿಲ್‌ ಸ್ಟೀಫಾನ್‌, ಮಂಗಳೂರಿನ ರೀಫ್ವಾಚ್‌ ಮರೈನ್‌ ಕನ್ಸರ್ವೇಶನ್‌ ಸಂಸ್ಥೆ ಅಧಿಕಾರಿ

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next