Advertisement

ಮಾರಿಕಾಂಬಾ ಜಾತ್ರಾ ವ್ಯವಸ್ಥೆಯನ್ನು ಹಾಳು ಮಾಡುವ ಪ್ರಯತ್ನದ ವಿರುದ್ಧ ಸಮಿತಿ ಎಚ್ಚರಿಕೆ

07:46 PM Feb 02, 2022 | Team Udayavani |

ಸಾಗರ: ಇತಿಹಾಸ ಪ್ರಸಿದ್ಧವಾದ ಮಾರಿಕಾಂಬಾ ದೇವಿ ಪ್ರಮುಖ 8 ಹಿಂದುಳಿದ ಸಮಾಜದ ಆರಾಧ್ಯ ದೇವತೆಯಾಗಿದ್ದಾಳೆ. ದೇವಸ್ಥಾನದಲ್ಲಿ ಅಧಿಕಾರ ಗಿಟ್ಟಿಸಿಕೊಳ್ಳಲು ಯಾವುದೇ ರಾಜಕೀಯ ಪಕ್ಷಗಳು ಪ್ರಯತ್ನ ನಡೆಸಿ ವ್ಯವಸ್ಥೆಯನ್ನು ಹಾಳು ಮಾಡುವ ಪ್ರಯತ್ನ ನಡೆಸಬಾರದು. ಒಂದೊಮ್ಮೆ ಅಂತಹ ಪ್ರಯತ್ನಗಳು ರಾಜಕೀಯ ಪಕ್ಷಗಳು ಮಾಡಿದರೆ ಹಿಂದುಳಿದ ಸಮಾಜದ ಉಗ್ರ ಪ್ರತಿಭಟನೆ ಜೊತೆಗೆ ದೊಡ್ಡಮಟ್ಟದ ರಾಜಕೀಯ ಹಿನ್ನೆಡೆ ಅನುಭವಿಸಬೇಕಾಗುತ್ತದೆ ಎಂದು ಹರಳಯ್ಯ ಸಮಾಜದ ಅಧ್ಯಕ್ಷ ಹಾಗೂ ಮಾರಿಕಾಂಬಾ ಹಿತರಕ್ಷಣಾ ಸಮಿತಿ ಸಂಚಾಲಕ ಎಂ.ಡಿ.ಆನಂದ್ ಎಚ್ಚರಿಕೆ ನೀಡಿದ್ದಾರೆ.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಸರ್ವಸದಸ್ಯರ ಸಭೆಯಲ್ಲಿ ಸದಸ್ವತ್ವ ಇಲ್ಲದ ಕೆಲವರು ಭಾಗವಹಿಸಿ ಸಭೆಯಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ. ಸಭೆ ನಂತರ ಬೇರೆಬೇರೆ ರಾಜಕೀಯ ಪಕ್ಷದ ಮುಖಂಡರು ನಾವು ಸಭೆಯಲ್ಲಿ ಪಾಲ್ಗೊಳ್ಳುತ್ತೇವೆ, ನಮ್ಮನ್ನು ಸಮಿತಿ ಸಂಚಾಲಕರನ್ನಾಗಿ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದರು.

ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಯಲ್ಲಿ ಅಮ್ಮನಿಗೆ ನಡೆದುಕೊಳ್ಳುವವರು, ಲಾಗಾಯ್ತಿನಿಂದ ಜಾತ್ರೆ ಇನ್ನಿತರ ಸಂದರ್ಭದಲ್ಲಿ ವಿವಿಧ ಆಚರಣೆಗಳಲ್ಲಿ ಪಾಲ್ಗೊಳ್ಳುವ ಹಿಂದುಳಿದ ಸಮಾಜದವರು ಮಾತ್ರ ಸಂಚಾಲಕರಾಗಿ ಇರಬಹುದು. ಅಧಿಕಾರ, ಹಣ ಮತ್ತು ತೋಳ್ಬಲದಿಂದ ಅಧಿಕಾರಕ್ಕೆ ಬರುವ ಪ್ರಯತ್ನ ಯಾವುದೇ ರಾಜಕೀಯ ಪಕ್ಷಗಳು ಮಾಡಬಾರದು. ಹಿಂದಿನ ಯಾವ ಶಾಸಕರು ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಯೊಳಗೆ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಮಾರಿಕಾಂಬಾ ದೇವಸ್ಥಾನ ಹಿಂದೂ ಸಮಾಜದ ಪ್ರತಿಷ್ಠಿತ ದೇವಸ್ಥಾನವಾಗಿದೆ. ರಾಜಕೀಯ ಮೇಲಾಟದಿಂದ ದೇವಸ್ಥಾನದೊಳಗೆ ಅನ್ಯಧರ್ಮಿಯರು ಹಕ್ಕು ಚಲಾಯಿಸುವಂತೆ ಆಗಬಾರದು ಎಂದು ಹೇಳಿದರು.

ಗಂಗಾಮತ ಸಮಾಜದ ಉಪಾಧ್ಯಕ್ಷ ಧರ್ಮರಾಜ್ ಮಾತನಾಡಿ, ಮಾರಿಕಾಂಬಾ ದೇವಸ್ಥಾನಕ್ಕೆ 100 ವರ್ಷಗಳ ಇತಿಹಾಸವಿದೆ. ಹರಳಯ್ಯ, ಮೋಚಿ, ಸಮಗಾರ, ಚಮ್ಮಾರ, ಡೋರರು, ಛಲವಾದಿ, ಅಸಾದಿ, ಉಪ್ಪಾರ, ಮಡಿವಾಳ, ಕುರುಬ, ಚಾರೋಡಿ, ಗುಡಿಗಾರರು, ಗಂಗಾಮತಸ್ಥರು ನಿರಂತರ ಅಮ್ಮನ ಸೇವೆ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಈಚೆಗೆ ನಡೆದ ಸರ್ವಸದಸ್ಯರ ಸಭೆಯಲ್ಲಿ ಸದಸ್ಯರಲ್ಲದ, ದೇವಸ್ಥಾನದ ಇತಿಹಾಸ ಗೊತ್ತಿಲ್ಲದ ಕೆಲವರು ಅನಗತ್ಯ ಪ್ರವೇಶ ಮಾಡಿ ಗೊಂದಲ ಸೃಷ್ಟಿ ಮಾಡಿದ್ದನ್ನು ನಮ್ಮ 8 ಸಮಾಜ ತೀವ್ರವಾಗಿ ಖಂಡಿಸುತ್ತದೆ. ದೇವಸ್ಥಾನದೊಳಕ್ಕೆ ಯಾವುದೇ ರಾಜಕೀಯ ತರುವ ಪ್ರಯತ್ನ ಯಾವ ಪಕ್ಷದವರೂ ಮಾಡಬಾರದು. ಅಂತಹ ಪ್ರಕ್ರಿಯೆ ಯಾವುದಾದರೂ ರಾಜಕೀಯ ಪಕ್ಷದಿಂದ ನಡೆದರೆ ನಮ್ಮ 8 ಸಮಾಜ ಅವರ ವಿರುದ್ಧ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಉಪ್ಪಾರ ಸಮಾಜದ ಅಧ್ಯಕ್ಷ ರಾಮಪ್ಪ ಟಿ., ಕಾರ್ಯದರ್ಶಿ ಈಶ್ವರ್, ಚಾರೋಡಿ ಆಚಾರ್ ಸಮಾಜದ ಅಧ್ಯಕ್ಷ ಜಿ.ಕುಮಾರ್, ಮಡಿವಾಳ ಸಮಾಜದ ಅಧ್ಯಕ್ಷ ಕೊಟ್ರಪ್ಪ, ಪ್ರಮುಖರಾದ ಮಂಜುನಾಥ್, ಹನುಮಂತಪ್ಪ, ಜಗನ್ನಾಥ್, ರಾಘವೇಂದ್ರ, ಶ್ರೀಧರ್ ಇನ್ನಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next