ಸಾಗರ: ಹಾಲಿ ಮಾರಿಕಾಂಬಾ ದೇವಸ್ಥಾನವನ್ನು ನಿರ್ವಹಣೆ ಮಾಡುತ್ತಿರುವುದು ಅನಧಿಕೃತ ಸಮಿತಿಯಾಗಿದ್ದು, ನಮ್ಮದು ನೋಂದಾವಣೆಗೊಂಡಿರುವ ಅಧಿಕೃತ ವ್ಯವಸ್ಥಾಪಕ ಸಮಿತಿಯಾಗಿದೆ. ನಾವು ಯಾವುದೇ ಅಧಿಕಾರದ ಆಸೆಗಾಗಿ ವ್ಯವಸ್ಥಾಪಕ ಸಮಿತಿ ರಚಿಸಿಲ್ಲ. ಬದಲಾಗಿ ದೇವಸ್ಥಾನ ಆಡಳಿತ ವ್ಯವಸ್ಥೆ ಅರ್ಹರ ಕೈಗೆ ತಲುಪಬೇಕು ಎನ್ನುವ ಉದ್ದೇಶದಿಂದ ನೂತನ ಸಮಿತಿಯನ್ನು ನೋಂದಾವಣೆ ಮಾಡಲಾಗಿದೆ ಎಂದು ನೋಂದಾಯಿತ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಉಪಾಧ್ಯಕ್ಷ ಎಂ.ನಾಗರಾಜ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ಇರುವ ಸಮಿತಿಯನ್ನು ಜಾತ್ರೆ ನಿರ್ವಹಿಸಲು ರಚಿಸಲಾಗಿತ್ತು. ಆದರೆ ಕಳೆದ 15 ವರ್ಷಗಳಿಂದ ಸಮಿತಿಯು ಲೆಕ್ಕಪತ್ರವನ್ನು ಕೊಡದೆ, ಸರ್ವಸದಸ್ಯರ ಸಭೆಯನ್ನು ಸರಿಯಾಗಿ ಕರೆಯದೆ, ಭ್ರಷ್ಟಾಚಾರದಲ್ಲಿ ಮುಳುಗಿ ಅಧಿಕಾರಕ್ಕೆ ಅಂಟಿಕೊಂಡು ಕುಳಿತಿದೆ ಎಂದು ಆರೋಪಿಸಿದರು.
ಈಚೆಗೆ ಎಲ್ಲರ ಒತ್ತಡಕ್ಕೆ ಮಣಿದು ಸರ್ವಸದಸ್ಯರ ಸಭೆಯನ್ನು ಕರೆದಿದ್ದ ವ್ಯವಸ್ಥಾಪಕ ಸಮಿತಿ ಅರ್ಧಕ್ಕೆ ಸಭೆಯನ್ನು ನಿಲ್ಲಿಸಿ, 17 ಜನ ಹೊಸಬರನ್ನು ಸೇರಿಸಿಕೊಳ್ಳುತ್ತೇವೆ ಎಂದು ಹೇಳಿತ್ತು. ಸಭೆಯಲ್ಲಿ 15 ವರ್ಷದ ಲೆಕ್ಕಪತ್ರವನ್ನು ಒಂದೇ ಬಾರಿ ನೀಡಿದೆ. ಇದರಿಂದಾಗಿ ಸದಸ್ಯರಿಗೆ ಲೆಕ್ಕಪತ್ರ ನೋಡಲು ಸಹ ಆಗಿಲ್ಲ. ಹಾಲಿ ಆಡಳಿತ ನಡೆಸುತ್ತಿರುವ ಸಮಿತಿ ವಿರುದ್ಧ ಸಾಕಷ್ಟು ಭ್ರಷ್ಟಾಚಾರದ ಆರೋಪ ಇದೆ. ಸಮಿತಿ ನಡೆಸುತ್ತಿರುವ ಭ್ರಷ್ಟಾಚಾರದ ವಿರುದ್ಧ ಸಾಕಷ್ಟು ಮನವಿ ಸಲ್ಲಿಸಿದ್ದಾಗ್ಯೂ ಕಾನೂನಾತ್ಮಕ ಚೌಕಟ್ಟು ಹೊಂದಿಲ್ಲದೆ ಇರುವುದರಿಂದ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವ್ಯವಸ್ಥೆಯನ್ನು ಕಾನೂನು ಚೌಕಟ್ಟಿನೊಳಗೆ ತರಲು ನೋಂದಾಯಿತ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.
ಹಾಲಿ ನೋಂದಾಯಿತಸಮಿತಿಯಲ್ಲಿ ನೋಂದಾಯಿತ ಸದಸ್ಯರು ಇದ್ದಾರೆ. ಹಾಲಿ ಸಮಿತಿಯನ್ನು ಬರಕಾಸ್ತುಗೊಳಿಸಿ ನಮ್ಮ ಸಮಿತಿಗೆ ಅಧಿಕಾರ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗಳಿಗೆ, ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸಮಿತಿಯು ತಕ್ಷಣ ಸರ್ವಸದಸ್ಯರ ಸಭೆಯನ್ನು ಕರೆದು ಸದಸ್ಯರು ಯಾರನ್ನು ಆಯ್ಕೆ ಮಾಡುತ್ತಾರೋ ಅವರು ಅಧಿಕಾರ ಮುಂದುವರೆಸಿಕೊಂಡು ಹೋಗಲು ಅವಕಾಶ ಕಲ್ಪಿಸಬೇಕು. ಹಾಲಿ ಸಮಿತಿಯು ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಹೆಸರಿನಲ್ಲಿ ಯಾವುದೇ ರೀತಿಯ ವಹಿವಾಟು ನಡೆಸಿದರೆ ಅವರ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ. ಶಾಸಕರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಮಂಜುನಾಥ ಎಸ್.ಎಲ್., ಕಾರ್ಯದರ್ಶಿ ವಿ.ಗುರು, ಸಹ ಕಾರ್ಯದರ್ಶಿ ಜಿ.ಚಂದ್ರಕಾಂತ್, ಸದಸ್ಯರಾದ ಚಂದ್ರಪ್ಪ ಎಲ್., ಕೆ.ಸಿದ್ದಪ್ಪ, ಪ್ರಶಾಂತ್, ಹೇರಂಬ, ಕೆ.ವಿ.ಪ್ರವೀಣಕುಮಾರ್, ರಾಘವೇಂದ್ರ, ನಾರಾಯಣಪ್ಪ, ಗಣಪತಿ ನೇರಲಗಿ, ಕೇಶವ ಕಾಮತ್, ಮಹಾಬಲೇಶ್ವರ ಹಾಜರಿದ್ದರು.