Advertisement

ಚಾಮರಾಜನಗರ: ಜಮೀನಿನಲ್ಲಿ ಬೆಳೆದಿದ್ದ 3 ಲಕ್ಷ ಮೌಲ್ಯದ 134 ಗಾಂಜಾ ಗಿಡ ವಶ: ಓರ್ವನ ಬಂಧನ

03:58 PM Sep 14, 2020 | keerthan |

ಚಾಮರಾಜನಗರ: ಕಾಡಂಚಿನ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ, 3 ಲಕ್ಷ ರೂ. ಮೌಲ್ಯದ 26 ಕೆಜಿ ತೂಕದ 134 ಗಾಂಜಾ ಗಿಡಗಳನ್ನು ಪೂರ್ವ ಪೊಲೀಸ್ ಠಾಣೆ ಪೊಲೀಸರು ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

Advertisement

ತಾಲೂಕಿನ ಶನಿವಾರ ಮುಂಟಿ ಗ್ರಾಮದ ಜಡೇಗೌಡ (ಮಾರಕುನ್ನ) (40) ಬಂಧಿತ. ಇನ್ನೋರ್ವ ಆರೋಪಿ ಬೆಲವತ್ತ ಗ್ರಾಮದ ಮಾದಯ್ಯ ತಲೆಮರೆಸಿಕೊಂಡಿದ್ದಾನೆ. ಬಂಧಿತನ ಪತ್ತೆಗಾಗಿ ತನಿಖೆ ಮುಂದುವರೆದಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸರಾ ಥಾಮಸ್, ಚಾಮರಾಜನಗರ ತಾಲೂಕಿನ ಬೆಲವತ್ತ ಗ್ರಾಮದ ಬಳಿಯ ಮೇಲ್ಮಾಳದ ಸರ್ವೇ ನಂ. 312ರ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆಯಲಾಗಿದೆ ಎಂಬ ಮಾಹಿತಿ ತಿಳಿದು ಬಂದಿತು. ಹೀಗಾಗಿ ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಪೂರ್ವ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ತಾಜುದ್ದೀನ್ ಮತ್ತು ಸಿಬ್ಬಂದಿ, ತಹಶೀಲ್ದಾರ್ ಚಿದಾನಂದ ಗುರುಸ್ವಾಮಿಯವರ ಸಮಕ್ಷಮ ದಾಳಿ ನಡೆಸಿದರು ಎಂದರು.

ಇದನ್ನೂ ಓದಿ: ನನ್ನನ್ನು ರಾಜಕೀಯವಾಗಿ ಮುಗಿಸಲು ಯಾರಿಗೂ ಸಾಧ್ಯವಿಲ್ಲ: ಜಮೀರ್ ಅಹಮದ್ ಖಾನ್

ಈ ದಾಳಿಯಲ್ಲಿ ಸಿಬ್ಬಂದಿಗಳಾದ ಎಎಸ್‌ಐ ಸೀಗಯ್ಯ, ಎಚ್.ಸಿ. ಚಂದ್ರು, ಪುಟ್ಟರಾಜು, ಶಾಂತರಾಜು, ಮಹೇಶ್, ಮಹದೇವಪ್ಪ, ಬಸವಣ್ಣ, ಮುನಿಯಪ್ಪ, ಪೇದೆಗಳಾದ ವೆಂಕಟೇಶ, ಚಂದ್ರಶೇಖರ್, ಸಂತೋಷ್‌ಕುಮಾರ, ನಾಗೇಂದ್ರ, ಅಶೋಕ, ರವಿ, ಕಿಶೋರ, ಬಸವರಾಜು, ರಂಗೇಗೌಡ, ಭಾಷಾಸಾಬ್ ಮುಲ್ಲಾ, ಚಾಲಕರಾದ ಮಹದೇವಸ್ವಾಮಿ, ನಾಗರಾಜು ಭಾಗವಹಿಸಿದ್ದರು. ಈ ತಂಡಕ್ಕೆ ವೈಯಕ್ತಿಕವಾಗಿ 20 ಸಾವಿರ ರೂ. ನಗದು ಬಹುಮಾನವನ್ನು ಎಸ್ಪಿ ದಿವ್ಯಾ ಸರಾ ಥಾಮಸ್ ನೀಡಿದರು.

Advertisement

ಎರಡು ದಿನಗಳ ಹಿಂದೆ ದೊಡ್ಡರಾಯಪೇಟೆ ಕ್ರಾಸ್ ಸಮೀಪ ಸಿಇಎನ್ ಪೊಲೀಸರು 2 ಕೆಜಿ 30 ಗ್ರಾಂ ತೂಕದ 1 ಲಕ್ಷ ಮೌಲ್ಯದ ಒಣಗಾಂಜಾ ವಶಪಡಿಸಿಕೊಂಡಿದ್ದರು. ಆ ತಂಡಕ್ಕೆ 5 ಸಾವಿರ ರೂ. ನಗದು ಬಹುಮಾನವನ್ನು ಎಸ್ಪಿಯವರು ಇದೇ ಸಂದರ್ಭದಲ್ಲಿ ನೀಡಿದರು.

ಮಾದಕ ವಸ್ತುಗಳ ಮಾರಾಟ ಜಾಲದ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸುವಂತೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ. ಹಾಗಾಗಿ ಜಿಲ್ಲೆಯಲ್ಲೂ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

ಜಿಲ್ಲೆಯ ಅರಣ್ಯಗಳ ಅಂಚಿನಲ್ಲಿ ಗಾಂಜಾ ಬೆಳೆಯುತ್ತಿದ್ದ ಬಗ್ಗೆ ಮಾಹಿತಿ ಇದೆ. ಹಾಗಾಗಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸಂಶಯ ಬಂದ ಕಡೆಗಳಲ್ಲಿ ದಾಳಿ, ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ದಿವ್ಯಾ ತಿಳಿಸಿದರು.

ಎಎಸ್ಪಿ ಅನಿತಾ, ಪ್ರಭಾರ ಡಿವೈಎಸ್‌ಪಿ ಅನ್ಸರ್ ಅಲಿ, ಸಿಇಎನ್ ಇನ್‌ಸ್ಪೆಕ್ಟರ್ ಮೋಹಿತ್ ಸಹದೇವ್, ಪೂರ್ವ ಠಾಣೆ ಸಬ್ ಇನ್‌ಸ್ಪೆಕ್ಟರ್ ತಾಜುದ್ದೀನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next