Advertisement

ಉಡುಪಿ ಜಿಲ್ಲೆಯಲ್ಲಿಯೂ ಗಾಂಜಾ ನಶೆ; ಪೊಲೀಸರ ಕಣ್ಗಾವಲು; ಯುವ ಸಮುದಾಯ ಗುರಿ

11:54 PM Sep 04, 2020 | mahesh |

ಉಡುಪಿ/ಕುಂದಾಪುರ: ದೇಶ, ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ಡ್ರಗ್ಸ್‌ ದಂಧೆಯ ಕರಾಳ ಮುಖ ಕಳಚಿ ಬೀಳುತ್ತಿದೆ. ಜಿಲ್ಲೆ ಯಲ್ಲಿಯೂ ಗಾಂಜಾ ಸೇವನೆ ಮತ್ತು ಮಾರಾಟಗಾರರ ಪತ್ತೆಕಾರ್ಯ ಬಿರುಸು ಗೊಂಡಿದ್ದು ಗಾಂಜಾ ವ್ಯಸನಕ್ಕೆ ಬ್ರೇಕ್‌ ಹಾಕಲು ಪೊಲೀಸ್‌ ಇಲಾಖೆ ಸಕಲ ತಯಾರಿ ನಡೆಸಿದೆ.

Advertisement

ಕೊರೊನಾ ಹಾಗೂ ಲಾಕ್‌ಡೌನ್‌ನಿಂದಾಗಿ ಜನರು ಸಂಕಷ್ಟ ಅನುಭವಿಸುತ್ತಿದ್ದರೂ ಜಿಲ್ಲೆಯಲ್ಲಿ ಗಾಂಜಾ ಮಾರಾಟ ಹಾಗೂ ಕೊಳ್ಳುವವರ ಸಂಖ್ಯೆ ವಿಪರೀತ ಏರಿಕೆಯಾಗಿದೆ. ಕಳೆದೆರಡು ವಾರಗಳಲ್ಲಿ ಭಾರೀ ಪ್ರಮಾಣದಲ್ಲಿ ಗಾಂಜಾ ಮಾರಾಟ ಮತ್ತು ಸೇವಿಸುವವರನ್ನು ಪೊಲೀಸರು ಬಂಧಿಸಿದ್ದಾರೆ. 2020ರ ಆರಂಭದಿಂದ ಸೆ.3ರ ವರೆಗೆ ಜಿಲ್ಲೆಯಲ್ಲಿ 166 ಪ್ರಕರಣಗಳು ದಾಖಲಾಗಿದ್ದು 166 ಮಂದಿಯನ್ನು ಎನ್‌ಡಿಪಿಎಸ್‌ ಕಾಯ್ದೆಯಡಿ ಬಂಧಿಸಲಾಗಿದೆ. 18,11,600 ರೂ.ಮೌಲ್ಯದ 62 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಯುವ ಸಮುದಾಯವೇ ಗುರಿ
ಡ್ರಗ್‌ ಪೆಡ್ಲರ್‌ಗಳು ಯುವಸಮುದಾ ಯವನ್ನೇ ಟಾರ್ಗೆಟ್‌ ಮಾಡಿಕೊಂಡಿದ್ದಾರೆ. ಬಂಧಿತರಾಗಿರುವ ಬಹುತೇಕ ಮಂದಿ 17ರಿಂದ 30ರ ವಯೋಮಾನದವರು ಎಂಬುವುದು ಕಳವಳಕಾರಿ ಮತ್ತು ಆತಂಕದ ಸಂಗತಿಯಾಗಿದೆ. ಸಣ್ಣಪುಟ್ಟ ಅಂಗಡಿಗಳು, ಶಾಲಾ ಕಾಲೇಜುಗಳು ಆವರಣ, ಐಶಾರಾಮಿ ರೆಸ್ಟೋರೆಂಟ್‌, ಪಾಳುಬಿದ್ದ ಜಾಗಗಳಲ್ಲಿ ಗಾಂಜಾ ವ್ಯಾಪಾರಗಳು ನಡೆಯುತ್ತಿವೆ.

ಹೊರಜಿಲ್ಲೆ, ರಾಜ್ಯದವರೇ ಅಧಿಕ!
ಜಿಲ್ಲೆಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಗಾಂಜಾ ಪೂರೈಕೆಯಾಗುತ್ತಿವೆ. ಕೇರಳದಿಂದ ಮಂಗಳೂರು, ಉಡುಪಿ ಜಿಲ್ಲೆಗಳಿಗೆ ಮೀನಿನ ಲಾರಿಯಲ್ಲಿ ಗಾಂಜಾ ಸಾಗಿಸಲಾಗುತ್ತದೆ. ಶಿವಮೊಗ್ಗ ದಿಂದ ತರಕಾರಿ ಮೂಟೆಗಳಲ್ಲಿ ಗಾಂಜಾ ಸೇರಿಸಿ ಬಸ್ಸಿನಲ್ಲಿ ಪಾರ್ಸೆಲ್‌ ಮೂಲಕ ಸಾಗಿಸುವ ವ್ಯವಸ್ಥಿತ ಜಾಲಗಳಿವೆ. ಯಾರಿಗೂ ಅನುಮಾನ ಬಾರದಂತೆ ರೈಲುಗಳಲ್ಲಿ, ಬಸ್‌ಗಳಲ್ಲಿ ಪಾರ್ಸೆಲ್‌, ಕೊರಿಯರ್‌ ಹಾಗೂ ಪರಿಚಯಸ್ಥರ ಮೂಲಕ ಗಾಂಜಾ ಸರಬರಾಜು ನಿರಂತರವಾಗಿ ನಡೆಯುತ್ತಿದೆ.

ಗಾಂಜಾ ಸೇವನೆ ಪ್ರಕರಣವೂ ಹೆಚ್ಚಳ
ಗಾಂಜಾ ಮಾರಾಟದಂತೆ ಗಾಂಜಾ ಸೇವನೆಯೂ ಕಾನೂನು ಬಾಹಿರ ವಾಗಿದ್ದು ಅಂತಹವರನ್ನೂ ಪೊಲೀಸರು ಬಂಧಿಸು ತ್ತಿದ್ದಾರೆ. ಗಾಂಜಾ ಸೇವನೆಗೆ ಸಂಬಂಧಿಸಿ ದಂತೆ 2017ರಲ್ಲಿ 45 ಪ್ರಕರಣ ಗಳು ದಾಖಲಾಗಿದ್ದು, 58 ಮಂದಿಯನ್ನು ಬಂಧಿಸ ಲಾಗಿದೆ. 2018ರಲ್ಲಿ 89 ಪ್ರಕರಣಗಳು ದಾಖಲಾಗಿದ್ದು, 96 ಮಂದಿ ಯನ್ನು ಬಂಧಿಸಲಾಗಿದೆ. 2019ರಲ್ಲಿ 182 ಪ್ರಕರಣಗಳು ದಾಖಲಾಗಿದ್ದು, 190 ಮಂದಿಯನ್ನು ಬಂಧಿಸಲಾಗಿದೆ. 2020ರ ಸೆ.3ರ ವರೆಗೆ 119 ಪ್ರಕರಣಗಳು ದಾಖಲಾಗಿದ್ದು, 132 ಮಂದಿಯನ್ನು ಬಂಧಿಸಲಾಗಿದೆ.

Advertisement

ಪೂರ್ಣ ಅಧಿಕಾರ
ಕರಾವಳಿ ಭಾಗದಲ್ಲಿ ಅವ್ಯಾಹತವಾಗಿ ಗಾಂಜಾ ಸಾಗಾಟ ಮತ್ತು ಸೇವನೆ ನಡೆಯುತ್ತಿರುವುದರ ಬಗ್ಗೆ ಮಾಹಿತಿ ಇದೆ. ಅಕ್ರಮ ತಡೆಗಟ್ಟುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸರಿಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದೇನೆ. ಜಿಲ್ಲೆಯನ್ನು ಮಾದಕ ವ್ಯಸನ ಮುಕ್ತ ಮಾಡುವುದೇ ನಮ್ಮ ಗುರಿ.
ಬಸವರಾಜ ಬೊಮ್ಮಾಯಿ, ಗೃಹ ಸಚಿವರು

ವಿಶೇಷ ಸಮಿತಿ ರಚನೆ
ಮಾದಕ ವಸ್ತುಗಳ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳಲಾಗಿದೆ. ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಸೆನ್‌ ಪೊಲೀಸರು ಈಗಾಗಲೇ ಆಯಾಕಟ್ಟಿನ ಸ್ಥಳಗಳ ಮೇಲೆ ನಿಗಾ ಇರಿಸಿದ್ದಾರೆ. ಈ ಬಗ್ಗೆ ವಿಶೇಷ ಸಮಿತಿಯನ್ನು ರಚಿಸಲಾಗಿದ್ದು 15 ದಿನಗಳಿಗೊಮ್ಮೆ ಸಭೆ ನಡೆಸಿ ಚರ್ಚಿಸಲಾಗುತ್ತಿದೆ.
-ಎನ್‌.ವಿಷ್ಣುವರ್ಧನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next