ಕಾಸರಗೋಡು ಜಿಲ್ಲೆಯಲ್ಲಿ 12 ವರ್ಷದ ಬಾಲಕನಿಗೂ ಕೂಡ ಮಾದಕ ದ್ರವ್ಯದ ಚಟ ಹಿಡಿದಿದೆ ಎಂದು ಸರ್ವೆಯೊಂದರಲ್ಲಿ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 700 ಕಿಲೋಗಿಂತ ಅಧಿಕ ಗಾಂಜಾ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ಇದೆ.
Advertisement
ವಿದ್ಯಾರ್ಥಿಗಳಲ್ಲೇ ಹೆಚ್ಚುವಿದ್ಯಾರ್ಥಿಗಳಲ್ಲಿ ಮದ್ಯಕ್ಕಿಂತಲೂ ಮಾದಕ ದ್ರವ್ಯ ಬಳಕೆ ಅಧಿಕವಾಗುತ್ತಿದೆ. ಸುಲಭವಾಗಿ ಸಾಗಾಟ, ಬಳಸಲು ಸುಲಭ ಮತ್ತು ಅಧಿಕ ಮಾದಕತೆ ಲಭಿಸುತ್ತದೆ ಎಂಬ ಕಾರಣದಿಂದ ಗಾಂಜಾ ಸಹಿತ ಮಾದಕ ದ್ರವ್ಯ ಬಳಕೆ ಹೆಚ್ಚುತ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಬೊಟ್ಟು ಮಾಡುತ್ತಿದ್ದಾರೆ. ಕಾಸರಗೋಡು ಜಿಲ್ಲೆಯಿಂದಲೂ ಭಾರೀ ಪ್ರಮಾಣದಲ್ಲಿ ಮಾದಕ ದ್ರವ್ಯ ವಶಪಡಿಸಲಾಗಿದೆ ಎಂದು ನಾರ್ಕೋಟಿಕ್ಸ್ ಸೆಲ್ ಅಧಿಕಾರಿಗಳು ಹೇಳುತ್ತಾರೆ. ಅಂತಾರಾಜ್ಯ ಮಾದಕ ಸಾಗಾಟದಾರರನ್ನು ಬಂಧಿಸಿ ವಾಹನಗಳನ್ನು ವಶಪಡಿಸಲಾಗಿದೆ. ಶಿಕ್ಷಣ ಸಂಸ್ಥೆಗಳ ಪರಿಸರದಲ್ಲಿ ಮಾದಕ ದ್ರವ್ಯ ಮಾರಾಟ ಮಾಡುವವರನ್ನು ಬಂಧಿಸಲು ನಾಲ್ಕು ಶ್ಯಾಡೋ ಪೊಲೀಸ್ ವಿಭಾಗವನ್ನು ರಚಿಸಲಾಗಿದ್ದು, ಸಕ್ರಿಯವಾಗಿ ಕಾರ್ಯಾಚರಿಸುತ್ತಿದೆ. ಮಾದಕ ಬೆರೆತ ಮಿಠಾಯಿ, ಚೂಯಿಂಗಂ, ಜ್ಯೂಸ್ ಮೊದಲಾದವು ಗಡಿ ದಾಟಿ ಕಾಸರಗೋಡು ಜಿಲ್ಲೆಗೆ ಹರಿದು ಬರುತ್ತಿದೆ. ಅನ್ಯ ರಾಜ್ಯಗಳ ಕಾರ್ಮಿಕರು ಗಾಂಜಾ, ಪಾನ್ ಮಸಾಲ ಮೊದಲಾದ ಮಾದಕ ವಸ್ತುಗಳನ್ನು ಜಿಲ್ಲೆಗೆ ಸಾಗಿಸುತ್ತಿದ್ದಾರೆ. ಜಿಲ್ಲೆಯ ಶಾಲಾ ವಿದ್ಯಾರ್ಥಿಗಳನ್ನು ಗುರಿಯಿರಿಸಿಕೊಂಡು ಮಾದಕ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ತಿಳಿವಳಿಕೆ ತರಗತಿ ನಡೆಸಲು ಆರು ಮಂದಿ ತರಬೇತುದಾರರನ್ನು ನೇಮಿಸಿದೆ. ಜಿಲ್ಲೆಯ 81 ಶಾಲೆಗಳಲ್ಲಿ 40 ವಿದ್ಯಾರ್ಥಿಗಳಂತೆ ಮಾದಕ ವಿರುದ್ಧ ಕ್ಲಬ್‌ಗಳನ್ನು ರೂಪೀಕರಿಸಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ನಡೆಸಲಾಗುತ್ತಿದೆ.
Related Articles
ಶಾಲಾ, ಕಾಲೇಜು ಪರಿಸರಗಳಲ್ಲಿ ಗಾಂಜಾ, ನಿಷೇಧಿತ ಪಾನ್ ಮಸಾಲ ಉತ್ಪನ್ನಗಳ ಮಾರಾಟವನ್ನು ತಡೆಗಟ್ಟಲು ಪೊಲೀಸರು ತಪಾಸಣೆಯನ್ನು ಸಕ್ರಿಯಗೊಳಿಸಿದ್ದಾರೆ. ಹಲವೆಡೆಗಳಲ್ಲಿ ಇಂತಹ ಮಾದಕ ವಸ್ತುಗಳು ರಹಸ್ಯವಾಗಿ ಮಾರಾಟವಾಗುತ್ತಿವೆೆ ಎಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ. ಮಾದಕ ವಸ್ತುಗಳ ಮಾರಾಟ, ಸಾಗಾಟ ಬಗ್ಗೆ ಮಾಹಿತಿ ಲಭಿಸಿದಲ್ಲಿ ಸಾರ್ವಜನಿಕರು ತತ್‌ಕ್ಷಣ ಹತ್ತಿರದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಅಥವಾ ಜಿಲ್ಲಾ ಪೊಲೀಸರ “ಆಪರೇಶನ್ ಮೂನ್ ಲೈಟ್’ ನಂಬ್ರ ಆಗಿರುವ 9497975812 ನಂಬ್ರಕ್ಕೆ ಮಾಹಿತಿ ನೀಡಬಹುದು. ಶಾಲಾ ವಿದ್ಯಾರ್ಥಿಗಳು ಮೊಬೈಲ್ ಫೋನ್‌ಗಳನ್ನು ಶಾಲೆ ಪರಿಸರದ ಅಂಗಡಿಗಳಲ್ಲಿ ಇಡುತ್ತಿರುವುದಾಗಿ ಮಾಹಿತಿ ಲಭಿಸಿದೆ. ಇಂತಹ ಮೊಬೈಲ್ ಲಭಿಸಿದಲ್ಲಿ ಅಂಗಡಿಗಳ ವಾರಿಸುದಾರರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
Advertisement