Advertisement

ಮಂಗಳೂರಿನ ಮಗಳು, ಉತ್ತರ ಕನ್ನಡದ ಸೊಸೆ ಮಾರ್ಗರೇಟ್‌ ಆಳ್ವ

10:21 AM Jul 18, 2022 | Team Udayavani |

ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಮಾರ್ಗರೇಟ್‌ ಆಳ್ವ(80) ಅವರು ಮಂಗಳೂರಿನ ಮಗಳಾದರೆ, ಉತ್ತರ ಕನ್ನಡದ ಸೊಸೆ. ಅವರ ಇಡೀ ಕುಟುಂಬವೇ ಪಕ್ಷ ನಿಷ್ಠೆಯ ರಾಜಕಾರಣಕ್ಕೆ ಮಾದರಿಯಾಗಿದ್ದು, ಆಳ್ವ ಸುಮಾರು 60 ವರ್ಷಗಳ ಕಾಲ ಕಾಂಗ್ರೆಸ್‌ ಜತೆ ಪಯಣಿ­ಸಿದ್ದಾರೆ. ಇವರ ಅತ್ತೆ, ಮಾವ ಹಾಗೂ ಮಗ ಕೂಡ ಕಾಂಗ್ರೆಸ್‌ನಲ್ಲಿ ಇದ್ದವರು.

Advertisement

ಮಂಗಳೂರಿನ ರೋಮನ್‌ ಕೆಥೋಲಿಕ್‌ ಕುಟುಂಬದಲ್ಲಿ 1942ರ ಎಪ್ರಿಲ್‌ 14ರಲ್ಲಿ ಜನಿಸಿದ ಮಾರ್ಗರೇಟ್‌ ಆಳ್ವ, ಬೆಂಗಳೂರಿನ ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಬಿಎ, ಗವರ್ನ್ಮೆಂಟ್‌ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ತಮ್ಮ ಶಾಲಾ-ಕಾಲೇಜಿನ ದಿನಗಳಿಂದಲೇ ಅವರಲ್ಲಿ ನಾಯಕತ್ವ ಗುಣ ಬೆಳೆದಿತ್ತು. ಚರ್ಚಾ ಸ್ಪರ್ಧೆಗಳಲ್ಲಿ ಆಳ್ವÌರದ್ದು ಎತ್ತಿದ ಕೈ. ಹಲವು ವಿದ್ಯಾರ್ಥಿ ಚಳವಳಿಗಳಲ್ಲೂ ಪಾಲ್ಗೊಂಡು ಸೈ ಎನಿಸಿಕೊಂಡಿದ್ದರು.

ಎಐಸಿಸಿ ಜಂಟಿ ಕಾರ್ಯದರ್ಶಿ­ಯಾ­ಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ­ಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೊದಲಿಗೆ 1974ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆದು ರಾಜ್ಯಸಭೆಗೆ ಆಯ್ಕೆಯಾದ ಆಳ್ವ, ಅನಂತರ 1980, 1986, 1992 ರಲ್ಲೂ ಚುನಾಯಿತ­ರಾ­ದರು.

ಕೇಂದ್ರ­ದಲ್ಲಿ ಸಂಸ­ದೀಯ ವ್ಯವಹಾರಗಳ ಖಾತೆ, ಯುವ ಮತ್ತು ಕ್ರೀಡಾ ಇಲಾಖೆ, ಮಹಿಳಾ- ಮಕ್ಕಳ ಅಭಿ­ವೃದ್ಧಿ ಖಾತೆ ಸಹಾಯಕ ಸಚಿವೆ­ಯಾಗಿದ್ದರು.

1999ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದಿಂದ ಸ್ಪರ್ಧಿಸಿ, ಗೆದ್ದು ಲೋಕಸಭೆ ಪ್ರವೇಶಿಸಿದರು. 2004ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡರು. 2004ರಿಂದ 09ರ ವರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಗೋವಾ, ಗುಜರಾತ್‌, ರಾಜಸ್ಥಾನ, ಉತ್ತರಾಖಂಡದ ರಾಜ್ಯಪಾಲ ರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

Advertisement

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದುಡಿದವರು
ಶಿರಸಿ: ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಮಾರ್ಗರೇಟ್‌ ಆಳ್ವ ಹೆಸರು ಪ್ರಕಟವಾಗುತ್ತಿದ್ದಂತೆ ಉತ್ತರ ಕನ್ನಡದ ಹಿರಿಯ ಕಾಂಗ್ರೆಸ್ಸಿಗರಲ್ಲೂ ಹರ್ಷ ಗರಿಗೆದರಿದೆ. 1999ರಲ್ಲಿ ಉತ್ತರ ಕನ್ನಡದಿಂದ ಲೋಕಸಭೆಗೆ ಆಯ್ಕೆ ಆಗಿದ್ದ ಮಾರ್ಗರೇಟ್‌ ಅವರು ಅನಂತರದ ಸಂಸತ್ತಿನ ಚುನಾವಣೆಯಲ್ಲಿ ಬಿಜೆಪಿಯ ಅನಂತ ಕುಮಾರ ಹೆಗಡೆ ಎದುರು ಸೋಲುಂಡರು. ಆದರೂ ಸರಳತೆಯಿಂದಲೇ ಜಿಲ್ಲೆಯ ಸಂಪರ್ಕ ಇಟ್ಟುಕೊಂಡು ಅನೇಕ ಅಭಿವೃದ್ಧಿಗಳಿಗೂ ಜತೆಯಾಗಿದ್ದವರು.

ಇಲ್ಲಿನ ಸಂಸದೆಯಾಗಿದ್ದಾಗ ಬಸ್‌ ನಿಲ್ದಾಣಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿ ಪ್ರಯಾಣಿಕರ ಸಮಸ್ಯೆಗೆ ಪರಿಹಾರ ಸೂಚಿಸಿದ್ದರು. ಅನೇಕ ರಸ್ತೆ, ಸೇತುವೆ, ಸಮುದಾಯ ಭವನ ಕಟ್ಟಿಸಿದ್ದರು. ಇಂದಿಗೂ ಅದರ ಉದ್ಘಾಟನೆಯ ಫಲಕಗಳು ಜಿಲ್ಲೆಯಲ್ಲಿವೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡಿದ ಮಾರ್ಗರೇಟ್‌, ಗೌಳಿ, ಸಿದ್ಧಿ ಜನಾಂಗವನ್ನು ಹಿಂದುಳಿದ ವರ್ಗಗಳಿಗೆ ಸೇರಿಸಬೇಕು ಎಂಬ ಪ್ರಯತ್ನ ಮಾಡಿದ್ದರು. ವಿಶ್ವ ಮಟ್ಟದ ಮಹಿಳಾ ದನಿಯಾಗಿ ನೆಲ್ಸನ್‌ ಮಂಡೇಲಾ ಪ್ರಶಸ್ತಿ ಕೂಡ ಪಡೆದಿದ್ದಾರೆ. ಅವರ ಬಯೋಗ್ರಫಿಯಲ್ಲೂ ಜಿಲ್ಲೆಯ ಒಡನಾಟ ಬಿಚ್ಚಿಟ್ಟಿದ್ದಾರೆ. ಇಲ್ಲಿನ ಅಡಿಕೆ ಬೆಳೆಗಾರರ ಸಮಸ್ಯೆಯಿಂದ ಹಿಡಿದು ಎಲ್ಲವನ್ನೂ ಅರಿತಿದ್ದವರು ಮಾರ್ಗರೇಟ್‌.
ಇವರ ಮಗ ನಿವೇದಿತ್‌ ಆಳ್ವ ಕರಾವಳಿ ಅಭಿವೃದ್ಧಿ ಪ್ರಾಧಿ ಕಾರದ ಈ ಹಿಂದಿನ ಅಧ್ಯಕ್ಷರಾಗಿ ಕೂಡ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅವರ ಮಾವ ಜೋಕಿಂ ಆಳ್ವ ಉತ್ತರ ಕನ್ನಡದ ಜಿಲ್ಲೆಯ ಸಂಸದರಾಗಿದ್ದರು ಎಂಬುದೂ ಉಲ್ಲೇಖನೀಯ.

 

Advertisement

Udayavani is now on Telegram. Click here to join our channel and stay updated with the latest news.

Next