Advertisement

ಮರೆತೇನೆಂದರೂ ಮರೆಯಲಿ ಹ್ಯಾಂಗ?

03:45 AM Mar 31, 2017 | |

ಮರೆಯಲಾರೆವು. ಖಂಡಿತ. ಮಾರ್ಚ್‌  23ಕ್ಕೆ, ಸರಿಯಾಗಿ ಒಂದು ವರುಷದ ಹಿಂದೆ ಕಾಲೇಜಿನಲ್ಲಿ “ನಮ್ಮ ಕಡೆಯ ತರಗತಿ’ ಎಂಬ ಖುಷಿ. ಇನ್ನು ರಿವಿಜನ್‌ ಹಾಲಿಡೇಸ್‌, ನಂತರ ಎಕ್ಸಾಮ… ಹೀಗೆಲ್ಲ ಲೆಕ್ಕಾಚಾರ ಹಾಕಿಕೊಂಡು ಕಾಲೇಜಿಗೆ ಹೊರಡುತ್ತಿದ್ದಾಗಲೇ ನನಗೊಂದು ಅಘಾತಕಾರಿ ಸುದ್ದಿ ಕಿವಿಗೆ ಬಂದು ಅಪ್ಪಳಿಸಿತ್ತು. ನಮ್ಮದೇ ಸ್ವಂತ ಉಪನ್ಯಾಸಕಿಯೊಬ್ಬರು ಬೆಳಗ್ಗೆ ಕಾಲೇಜಿಗೆ ಬರುವ ದಾರಿಯಲ್ಲಿ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮೃತಪಟ್ಟರು ಎಂದು. ಒಂದು ನಿಮಿಷ ನನ್ನ ಸುತ್ತಮುತ್ತ ಏನಾಗುತ್ತಿದೆ ಎಂಬುದೇ ತಿಳಿಯದಾಯಿತು. ಒಂದೇ ಒಂದು ದಿನ ಬಾಕಿ ಇತ್ತು, ಅವರ ತರಗತಿಗೆ ಕಿವಿ ಕೊಡಲು. ಆದರೆ ಈಗ ಅವರು ನಮ್ಮೊಂದಿಗಿಲ್ಲ ಎಂಬುದನ್ನು ಊಹಿಸಲೂ ಸಾಧ್ಯವಾಗಲಿಲ್ಲ ನನಗೆ. ವಾಟ್ಸಾಪ್‌ ಗ್ರೂಪ್‌ಗ್ಳಲ್ಲೆಲ್ಲ ಇದೇ ಸುದ್ದಿ. ಇದು ಸತ್ಯವೆ ಎಂದು ನಮಲ್ಲಿ ಚರ್ಚೆ ಶುರುವಾಗಿತ್ತು. ದೇವರೆ ಇದು ಸುಳ್ಳಾಗಿರಲಿ ಎಂದುಕೊಂಡಾಗಲೇ ಅದಕ್ಕೆ ಸಂಬಂಧಪಟ್ಟ ಫೋಟೊಗಳೆಲ್ಲವೂ ಬರಲಾರಂಭಿಸಿದಾಗ ದುಃಖ ಇನ್ನಷ್ಟು ಉಮ್ಮಳಿಸಿತು. ನಮ್ಮ ಪ್ರೀತಿಯ ಉಪನ್ಯಾಸಕಿಯೊಬ್ಬರು ನಡು ರಸ್ತೆಯಲ್ಲಿ ಭೀಕರವಾಗಿ ಸಾವನ್ನಪಿದ್ದನ್ನು ಕಂಡಾಗ ದೇವರು ಇಷ್ಟು ಕಠಿಣ ಹೃದಯಿಯೂ ಆಗಿರಬಹುದು ಅನಿಸಿದ್ದೇ ಆಗ.

Advertisement

ಅವರ ಪಾಠಗಳನ್ನು ಕೇಳತೊಡಗಿ ಇನ್ನೂ ಒಂದು ವರ್ಷವಾಗಿರಲಿಲ್ಲ. ಮೌನಿಯಾಗಿರಲು ಇಷ್ಟ ಪಡುತ್ತಿದ್ದರು. ನಮ್ಮ ಮನಮುಟ್ಟುವಂತೆ ಉಪನ್ಯಾಸ ಮಾಡುತ್ತಿದ್ದರು. ನಮ್ಮನ್ನು ಅವರ ವಿದ್ಯಾರ್ಥಿಗಳೆಂದು ಭಾವಿಸದೆ ಅವರ ಗೆಳತಿಯರೆಂದುಕೊಂಡಿದ್ದರು. ನಮಗೂ ಅವರಿಗೂ ಹೆಚ್ಚು ವಯಸ್ಸಿನ ಅಂತರವಿರಲಿಲ್ಲ. ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಥಿಗಳಂತೆ, ಉಪನ್ಯಾಸಕರೊಂದಿಗೆ ಉಪನ್ಯಾಸಕರಂತೆ ಎಲ್ಲರೊಂದಿಗೆ ಬೆರೆತುಕೊಂಡಿದ್ದರು. ಅಂದು ಅವರೊಂದಿಗೆ ಕಳೆದ ಪ್ರತಿಯೊಂದು ನಿಮಿಷವೂ ಪ್ರತಿಯೊಂದೂ ದಿನವೂ ನೆನಪಿಗೆ ಬರಲು ಆರಂಭಿಸಿತು. ಛೇ! ಹೀಗೇಕೆ ಆಯಿತು ಎಂದೆಲ್ಲ ಅನ್ನಿಸತೊಡಗಿ ಬೇಸರವೆನಿಸಿತು.

ಅವರನ್ನು ನಾವು ಇಂದಿಗೂ ನಿಷ್ಠೆಯಿಂದ ನಿರ್ವಹಿಸುವ ಎಲ್ಲ  ಕೆಲಸಗಳಲ್ಲೂ ನೆನಪಿಸಿಕೊಳ್ಳುತ್ತೇವೆ. ಅವರು ನಮ್ಮೊಂದಿಗೆ ಇರುತ್ತಿದ್ದರೆ ಹೀಗಿರುತ್ತಿತ್ತು, ಹಾಗಿರುತ್ತಿತ್ತು, ಹೀಗೆ ಮಾಡುತ್ತಿದ್ದರು, ಹಾಗೆ ಉಪದೇಶಿಸುತ್ತಿದ್ದರು ಎಂದೆಲ್ಲ ನಾವು ನಾವೇ ಮಾತಾಡಿಕೊಳ್ಳುತ್ತಿದ್ದೆವು.

ನಿಜ, ಕಳೆದು ಹೋದ ಸಮಯಕ್ಕೆ ಮರುಗಿದರೆ ಏನೂ ಪ್ರಯೋಜನವಿಲ್ಲ. ಆದರೆ ನಾವು ಬರೀ ಒಬ್ಬರು ಉಪನ್ಯಾಸಕಿಯನ್ನು ಕಳೆದುಕೊಳ್ಳಲಿಲ್ಲ. ನಾವು ಕಳೆದುಕೊಂಡದ್ದು ಒಂದು ಆದರ್ಶ ವ್ಯಕ್ತಿತ್ವವನ್ನು. ಇನ್ನೂ ಏನೇನೋ ಸಾಧಿಸಬೇಕು ಎಂದುಕೊಂಡಿದ್ದ ಛಲವಂತೆಯನ್ನು. ನಿಮಗೆಲ್ಲರಿಗೂ ಒಳ್ಳೆಯದಾಗಲಿ ಎಂದು ಆಶೀರ್ವದಿಸಿದ ಒಬ್ಬಳು ಅಕ್ಕನ ಮನಸ್ಸಿನ ಹೆಣ್ಣನ್ನು ;  ನಾನು ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದು ನಮ್ಮನ್ನು ಹುರಿದುಂಬಿಸುತ್ತಿದ್ದ  ಜೀವದ ಗೆಳತಿಯಂಥ ಸಹೃದಯಿಯನ್ನು; ಏನೆ ಕಲಿತರೂ ಹೇಗೇ ಕಲಿತರೂ ತಲೆಗೆ ಪಾಠ ಹತ್ತದೇ ಕೊನೆಗೆ ಸೋತು ಕುಳಿತಾಗ ಅದನ್ನು ಅದ್ಭುತವಾಗಿ ಅರ್ಥಮಾಡಿಸಿ ಅಂಕವನ್ನು ಗಳಿಸಬಹುದು ಎಂದು ಧೈರ್ಯ ತಂದು ಕೊಟ್ಟ ಒಬ್ಬ ಉಪನ್ಯಾಸಕಿಯನ್ನು ! 
ನಿಜವಾಗಲೂ ಇಂಥವರು ಇನ್ನು ನಮಗೆ ಸಿಗುತ್ತಾರೋ ಇಲ್ಲವು ಗೊತ್ತಿಲ್ಲ. ಆದರೆ ಅವರೊಂದಿಗೆ ಕಳೆದ ಎಲ್ಲಾ ಕ್ಷಣವೂ ಇಂದೂ ಕೂಡ ನೆನಪಾಗಿ ಕಾಡುತ್ತಿದೆ.

ಪಿನಾಕಿನಿ ಪಿ. ಶೆಟ್ಟಿ 
ತೃತೀಯ ಬಿ. ಕಾಂ.
ಸೈಂಟ್‌ ಆಗ್ನೆಸ್‌ ಕಾಲೇಜು, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next