Advertisement

ಕುರುಬ ಸಮಾಜದ ಮಹಿಳೆಗೆ ಮರೆಗುದ್ದಿ ಮಠದ ಪೀಠಾಧಿಕಾರ

10:23 AM Mar 02, 2020 | Lakshmi GovindaRaj |

ಜಮಖಂಡಿ: ಇಳಕಲ್‌-ಚಿತ್ತರಗಿ ಸಂಸ್ಥಾನಮಠದ ಶಾಖಾಮಠ ಮರೇಗುದ್ದಿ ಬಸವಕೇಂದ್ರ ಮಹಾಂತ ಮಠಕ್ಕೆ ಶನಿವಾರ ಕುರುಬ ಸಮಾಜದ ಮಹಿಳೆಯೊ ಬ್ಬರನ್ನು ಪೀಠಾಧಿಕಾರಿಯನ್ನಾಗಿ ಮಾಡುವುದರ ಮೂಲಕ ಹೊಸ ಇತಿಹಾಸ ಸೃಷ್ಟಿಸಲಾಯಿತು.

Advertisement

ಇಳಕಲ್‌ ಮಹಾಂತ ಮಠದ ಗುರುಮಹಾಂತ ಶ್ರೀಗಳು ಮಠದ ಭಕ್ತರ ನೇತೃತ್ವದಲ್ಲಿ ಬೆಳಿಗ್ಗೆ 6-30ರ ಸುಮಾರಿಗೆ ಬಸವತತ್ವದ ವಿಧಿ ವಿಧಾನಗಳ ಮೂಲಕ ಪಟ್ಟಾ ಧಿಕಾರ ನೆರವೇರಿಸಿದರು. ನೀಲಮ್ಮ ತಾಯಿ ಅವರು ಆಗ ನೀಲವಿಜಯ ಮಹಾಂತಮ್ಮ ತಾಯಿ ಎಂದು ಮರುನಾಮಕರಣ ಹೊಂದಿದರು.

ಲಿಂಗಪೂಜೆ-ಪಾದಪೂಜೆ-ವಚನ ಪಠಣ ಹಾಗೂ ಪ್ರಮಾಣ ವಚನ ಮಾಡಿಸುವುದರೊಂದಿಗೆ ನೀಲವಿಜಯ ಮಹಾಂತಮ್ಮ ತಾಯಿ ಅವರಿಗೆ ಗುರುಮಹಾಂತ ಶ್ರೀಗಳು ತಮ್ಮ ತಲೆಯ ಮೇಲಿದ್ದ ರುದ್ರಾಕ್ಷಿ ಕಿರೀಟವನ್ನು ಧಾರಣೆ ಮಾಡಿದರು. ನಂತರ, ಅವರಿಗೆ ಜೋಳಿಗೆಯನ್ನು ಹಾಕಿದರು. ಆಗ ನೀಲವಿಜಯ ಮಹಾಂತಮ್ಮ ತಾಯಿಯವರು ಭಕ್ತರಿಂದ ಕಾಣಿಕೆಯನ್ನು ಸ್ವೀಕರಿಸಿದರು.

ನಂತರ, ಮಠದಿಂದ ಪ್ರಮುಖ ವೇದಿಕೆವರೆಗೆ ಸಕಲ ವಾದ್ಯವೈಭವದೊಂದಿಗೆ ಮೆರವಣಿಗೆ ಮಾಡುತ್ತ ಕರೆದುಕೊಂಡು ಹೋಗಲಾಯಿತು. ವೇದಿಕೆಯಲ್ಲಿ ಗುರುಮಹಾಂತ ಸ್ವಾಮಿಗಳು ಹಾಗೂ ನೀಲವಿಜಯ ಮಹಾಂತಮ್ಮ ತಾಯಿಯವರು ಸಮಾನ ಕುರ್ಚಿಗಳಲ್ಲಿ ಕುಳಿತುಕೊಳ್ಳುವುದರ ಮೂಲಕ ಸಮಾನತೆ ಸಾರಿದರು. ವೇದಿಕೆಯಲ್ಲಿ ಎಲ್ಲ ಸ್ವಾಮೀಜಿಯವರ ಸಮ್ಮುಖದಲ್ಲಿ ನೀಲವಿಜಯ ಮಹಾಂತಮ್ಮ ತಾಯಿಯವರು ನೂತನ ಪೀಠಾಧಿಕಾರಿ ಎಂದು ಘೋಷಿಸಿದರು.

ಏಳು ವರ್ಷಗಳ ಹಿಂದೆ ದೀಕ್ಷೆ: 2013ರಲ್ಲಿ ಇಳಕಲ್‌ ಮಹಾಂತ ಸ್ವಾಮೀಜಿ ಅವರಿಂದ ಜಂಗಮ ದೀಕ್ಷೆ ಪಡೆದ ನೀಲಮ್ಮ ತಾಯಿ (ನೀಲವಿಜಯ ಮಹಾಂತಮ್ಮ ತಾಯಿ)ಅವರು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಸಂಶಿ ಗ್ರಾಮದವರು. ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರೈಸಿದ ಅವರು, 15ನೇ ವರ್ಷಕ್ಕೆ ಬ್ರಹ್ಮಾಂಡ ಆಶ್ರಮದಲ್ಲಿ ಸೇವೆ ಮಾಡುತ್ತ ಸಿದ್ದೇಶ್ವರ ಶ್ರೀಗಳ ಬಳಿ ಜ್ಞಾನದೀಕ್ಷೆ ಪಡೆದರು.

Advertisement

ನಂತರ, ಬಿಎ ಪದವಿ ಪಡೆದು ಸಂಶಿಮಠದ ಶಾಲೆಯಲ್ಲಿ ಶಿಕ್ಷಕಿಯಾಗಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ನಂತರ, ಅದೇ ಮಠದ ಇನ್ನೊಂದು ಶಾಖೆ ರಬಕವಿಗೆ ವರ್ಗಾವಣೆ ಪಡೆದು ಅಲ್ಲಿ 10 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. ಈ ವೇಳೆ, ಹಳಂಗಳಿಯಲ್ಲಿ ಡಿಎಡ್‌ ಪದವಿ ಮುಗಿಸಿದ ಅವರು, ಪಿಎಂ ಬುದ್ನಿಯಲ್ಲಿ ಸತ್ಯವತಿ ಶರಣಮ್ಮರ ಪ್ರವಚನದಲ್ಲಿ ಸೇವೆ ಸಲ್ಲಿಸಿ ಅಲ್ಲಿಯೇ ಶಿಕ್ಷಕಿಯಾಗಿ ಮೂರು ವರ್ಷ ಸೇವೆ ಸಲ್ಲಿಸಿದರು.

ಬಸವತತ್ವ ಪ್ರಚಾರವೇ ಗುರಿ: ಪೀಠಾಧಿಕಾರ ವಹಿಸಿಕೊಂಡು ಮಾತನಾಡಿದ ನೀಲವಿಜಯ ಮಹಾಂತಮ್ಮ ತಾಯಿಯವರು, ಶಿಕ್ಷಕಿಯಾಗಿ ಮಕ್ಕಳ ಸೇವೆ, ಸ್ವಾಮೀಜಿಯಾಗಿ ಸಮಾಜ ಸೇವೆ ಮಾಡುವುದೇ ನನ್ನ ಮುಖ್ಯ ಕರ್ತವ್ಯ. ಗುರುಗಳ ಆಶೀರ್ವಾದದಿಂದ ಜನರ ಮನಸ್ಸನ್ನು ಬದಲಿಸಿ ಅಧ್ಯಾತ್ಮದತ್ತ ವಾಲಿಸುವುದೇ ನನ್ನ ಗುರಿ. ಸಮಾಜಮುಖೀಯಾಗಿ ಸೇವೆ ಮಾಡುತ್ತೇನೆ.

ಚಿತ್ತರಗಿ ಪೀಠದ ಶಾಖಾಮಠವು ನನಗೆ ಒಲಿದಿರುವುದು ನನ್ನ ಸೌಭಾಗ್ಯ. ಮಠದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಭಕ್ತರಲ್ಲಿ ಜಾಗೃತಿ ಮೂಡಿಸುತ್ತೇನೆ. ಬಸವತತ್ವವನ್ನು ಮೈಗೂಡಿಸಿಕೊಂಡು ಬೆಳೆದ ನಾನು ಬಸವತತ್ವ ನಿಷ್ಠರಾಗಿ ಬಸವತತ್ವ ಪ್ರಚಾರವನ್ನು ಮನೆ, ಮನೆಗೆ ತಲುಪಿಸುವ ಕೆಲಸದಲ್ಲಿ ತೊಡಗುತ್ತೇನೆ ಎಂದು ಹೇಳಿದರು.

ಶಿರೂರು ಮಹಾಂತತೀರ್ಥದ ಡಾ| ಬಸವಲಿಂಗ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮಿಗಳು, ಕೂಡಲಸಂಗಮ ಬಸವಧರ್ಮ ಪೀಠದ ಜಗದ್ಗುರು ಗಂಗಾಮಾತೆ, ಅತ್ತಿವೇರಿಯ ಬಸವೇಶ್ವರಿ ತಾಯಿ, ಸಿದ್ದನಕೋಟೆ ಶ್ರೀಗಳು, ಜನವಾಡದ ಅಲ್ಲಮಪ್ರಭು ಆಶ್ರಮದ ಮಲ್ಲಿಕಾರ್ಜುನ ದೇವರು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next