Advertisement

ಮಾ. 8-10: ಮಣಿಪಾಲ ಎಸ್‌ಒಸಿಯಲ್ಲಿ “ನಮ್ಮ ಅಂಗಡಿ’ 

01:00 AM Mar 03, 2019 | Harsha Rao |

ಉಡುಪಿ: ಮಣಿಪಾಲದ ಸ್ಕೂಲ್‌ ಆಫ್ ಕಮ್ಯೂನಿಕೇಶನ್‌ ವಿದ್ಯಾರ್ಥಿಗಳು ವರ್ಷಂಪ್ರತಿ ಆಯೋಜಿಸುತ್ತಿರುವ ಬಹು ಬೇಡಿಕೆಯ “ನಮ್ಮ ಅಂಗಡಿ 2019’ಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಮಾ. 8ರಿಂದ 10ರ ವರೆಗೆ ನಡೆಯುವ ಈ ಮೂರು ದಿನಗಳ ಉತ್ಸವಕ್ಕಾಗಿ ವಿದ್ಯಾರ್ಥಿಗಳು ಮರದ ತುಂಡುಗಳನ್ನು ಹದವಾಗಿ ನಯಗೊಳಿಸಿ ಅದಕ್ಕೆ ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ.

Advertisement

ಕಳೆದ 15 ವರ್ಷಗಳಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಸುಮಾರು 20,000ದಷ್ಟು ಜನರು ಆಗಮಿಸುತ್ತಾರೆ ಎನ್ನುತ್ತಾರೆ ಇಲ್ಲಿನ ವಿದ್ಯಾರ್ಥಿಗಳು.

ನಿರುಪಯುಕ್ತ ಬಾಟಲಿಗಳಿಂದ ಆಟಿಕೆ ಮಾಡುವ ವಿಧಾನ, ಮಣ್ಣಿನ ಮಡಕೆ ತಯಾರಿ, ಬೀಜಗಳನ್ನು ಬಳಸಿ ಪೈಟಿಂಗ್‌ ಕಲಾಕೃತಿ ರಚಿಸುವುದು, ಖಾರ್ವಿ ಪೈಂಟಿಂಗ್‌, ಮರದ ಎಲೆಗಳನ್ನು ಬಳಸಿ ಕಲಾಕೃತಿ ರಚಿಸುವುದು, ಮರದ ಕೆತ್ತನೆಗಳ ಬಗ್ಗೆ ಪ್ರಾಯೋಗಿಕವಾಗಿ ನಡೆಯುವ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ.

ನೂರಕ್ಕೂ ಅಧಿಕ ವಸ್ತುಗಳ ಪ್ರದರ್ಶನ
ಮರದ ಕೆತ್ತನೆಯಿಂದ ತಯಾರಿಸಿದ ಪೆನ್‌ ಹೋಲ್ಡರ್‌, ಕೀಪಂಚ್‌, ಡೋರ್‌ಫಿಕ್ಸಿಂಗ್‌, ಕೊಳಲು, ದೇವರ ವಿಗ್ರಹಗಳು, ಮಣ್ಣಿನ ವಿಗ್ರಹ, ದೀಪಗಳು, ಬೆಡ್‌ಶೀಟ್‌ಗಳು, ಆಲಂಕಾರಿಕ ವಸ್ತುಗಳು ಹಾಗೂ ಇತರ ದಿನಬಳಕೆಯ ವಸ್ತುಗಳು ಸಹಿತ ಸುಮಾರು ನೂರಕ್ಕೂ ಅಧಿಕ ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗುತ್ತದೆ. ಇದನ್ನು ಇಲ್ಲಿನ ವಿದ್ಯಾರ್ಥಿಗಳೇ ಸಿದ್ಧಪಡಿಸುತ್ತಾರೆ ಎಂಬುದು ವಿಶೇಷ.

“ನಮ್ಮ ಅಂಗಡಿ’ಯಿಂದ “ನಮ್ಮ ಭೂಮಿ’ಗೆ
ಕುಂದಾಪುರ ತಾಲೂಕಿನ ಕನ್ಯಾನದಲ್ಲಿ 1991ರಲ್ಲಿ ನಮ್ಮ ಭೂಮಿ ಸಂಸ್ಥೆ ಪ್ರಾರಂಭವಾಗಿತ್ತು. ಅರ್ಧದಲ್ಲೆ ಶಾಲೆಯಿಂದ ಹೊರಹೋಗುವ ವಿದ್ಯಾರ್ಥಿಗಳ ಅಭಿರುಚಿಯನ್ನು ಗುರುತಿಸಿ ಇಲ್ಲಿ ಅವರಿಗೆ ತರಬೇತಿ ನೀಡುವ ಕೆಲಸ ಮಾಡಲಾಗುತ್ತಿದೆ. ಇಂದು ಹಳ್ಳಿ ಮಕ್ಕಳು ಶಾಲೆ ಬಿಟ್ಟು ನಗರಗಳತ್ತ ವಲಸೆ ಹೋಗುತ್ತಿದ್ದು, ಇದನ್ನು ತಡೆಯುವ ಉದ್ದೇಶದಿಂದ ಈ ಸಂಸ್ಥೆ ಆರಂಭಿಸಲಾಗಿದೆ. ಮರಗೆಲಸ, ಎಲೆಕ್ಟ್ರಿಕಲ್ಸ್‌, ಗಾರ್ಮೆಂಟ್ಸ್‌, ಬ್ಯೂಟೀಷಿಯನ್ಸ್‌ ಕುರಿತು ಇಲ್ಲಿ ತರಬೇತಿ ನೀಡಲಾಗುತ್ತದೆ. ಸ್ಕೂಲ್‌ ಆಫ್ ಕಮ್ಯೂನಿಕೇಶನ್‌ನ ಮೂಲಕವೂ ನಮಗೆ ಉತ್ತಮ ರೀತಿಯ ನೆರವು ಸಿಗುತ್ತಿದೆ ಎನ್ನುತ್ತಾರೆ ನಮ್ಮ ಭೂಮಿ ಸಂಸ್ಥೆಯ ಸಹಾಯಕ ನಿರ್ದೇಶಕ ಶಿವಾನಂದ ಶೆಟ್ಟಿ ಅವರು. ನಮ್ಮ ಅಂಗಡಿಯಲ್ಲಿ ಮಾರಾಟವಾದ ವಸ್ತುಗಳ ಹಣವು ನಮ್ಮ ಭೂಮಿಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಿನಿಯೋಗವಾಗುತ್ತಿದೆ. ಈ ಮೂಲಕ ಇಲ್ಲಿನ ಸ್ಕೂಲ್‌ ಆಫ್ ಕಮ್ಯೂನಿಕೇಶನ್‌ ಸಂಸ್ಥೆಯು ಶಾಲಾ ಮಕ್ಕಳ ಅಭಿರುಚಿಯನ್ನು ಗುರುತಿಸುವ ಕೆಲಸ ಮಾಡುತ್ತಿದೆ ಎನ್ನುತ್ತಾರೆ ಅವರು.

Advertisement

ಕಲೆ ನಮ್ಮ ಪರಂಪರೆ
ಕಲೆ ನಮ್ಮ ಪರಂಪರೆಯಾಗಿದ್ದು, ಇದನ್ನು ಉಳಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಸಹಕಾರಿಯಾಗಲಿದೆ. ಇದರಿಂದ ಲಭಿಸುವ ಹಣ ಒಳ್ಳೆಯ ಉದ್ದೇಶಕ್ಕೆ ವಿನಿಯೋಗವಾಗುತ್ತಿದೆ. 
– ನೀತಿ ಎಸ್‌.ಹೆಗ್ಡೆ, ಪ್ರಥಮ ಬಿಎ ವಿದ್ಯಾರ್ಥಿನಿ

ಹೊಸ ವಿಚಾರ ತಿಳಿಯಲು ಸಾಧ್ಯ
ಕಳೆದ ವರ್ಷವೂ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ಇದು ನಮ್ಮ ಶಿಕ್ಷಣಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇದರಿಂದ ಹೊಸ ವಿಚಾರಗಳನ್ನು ತಿಳಿಯಲು ಸಾಧ್ಯವಾಗಿದೆ.
– ಸ್ಕೈಲಾ ಪಿರೇರಾ, ದ್ವಿತೀಯ ವರ್ಷದ ಎಂಎ ವಿದ್ಯಾರ್ಥಿನಿ

ಜಾಗೃತಿ ಮೂಡಿಸುವ ಉದ್ದೇಶ
ವಿದ್ಯಾರ್ಥಿಗಳ ಕಲಾಕೌಶಲವನ್ನು ಗುರುತಿಸುವ ಉದ್ದೇಶ ಇದಾಗಿದೆ. ಈ ಮೂಲಕ ವಿದ್ಯಾರ್ಥಿಗಳ ಅಭಿರುಚಿಯನ್ನು ಪ್ರೋತ್ಸಾಹಿಸುವ ಕೆಲಸವೂ ನಡೆಯುತ್ತಿದೆ. ಇದು ಪರಿಸರ ಸ್ನೇಹಿಯಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ಸಂತಸದ ಸಂಗತಿ.
– ಡಾ| ಪದ್ಮಾ ರಾಣಿ, ಎಸ್‌ಒಸಿ ನಿರ್ದೇಶಕಿ 

Advertisement

Udayavani is now on Telegram. Click here to join our channel and stay updated with the latest news.

Next