Advertisement

ಮಾ. 8: ಕಡಬ, ಮೂಡುಬಿದಿರೆ ತಾ|ಉದ್ಘಾಟನೆ

12:30 AM Mar 07, 2019 | |

ಮಂಗಳೂರು: ಕಡಬ ಹಾಗೂ ಮೂಡುಬಿದಿರೆ ತಾಲೂಕುಗಳ ಅಧಿಕೃತ ಉದ್ಘಾಟನೆ ಮಾ. 8ರಂದು ನಡೆಯಲಿದ್ದು, ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರು ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಈ ಹಿಂದೆ ಮಾ. 7ರಂದು ನಿಗದಿಯಾಗಿದ್ದ ದಿನವನ್ನು ಮಾ. 8ಕ್ಕೆ ಮರು ನಿಗದಿಪಡಿಸಲಾಗಿದೆ. ಮಧ್ಯಾಹ್ನ 2.30ಕ್ಕೆ ಮೂಡುಬಿದಿರೆ ಹಾಗೂ ಸಂಜೆ 4.35ಕ್ಕೆ ಕಡಬ ತಾಲೂಕು ಉದ್ಘಾಟನೆಗೊಳ್ಳಲಿದೆ ಎಂದರು.

ಉಭಯ ತಾಲೂಕುಗಳಲ್ಲಿ ಮಿನಿ ವಿಧಾನಸೌಧ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಲು ತಲಾ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಇದೇ ವೇಳೆ ಶಂಕುಸ್ಥಾಪನೆ ನೆರವೇರಲಿದೆ ಎಂದರು.

ಮುಚ್ಚಳಿಕೆ ಹೆಸರಲ್ಲಿ ಕಿರುಕುಳ
ಹಿಂದೆ ರೌಡಿ ಶೀಟರ್‌ ಆಗಿದ್ದು ಅಥವಾ ವಿವಿಧ ಪ್ರಕರಣಗಳು ದಾಖಲಾಗಿದ್ದರೂ ಪ್ರಸ್ತುತ ಸನ್ನಡತೆಯಲ್ಲಿರುವ ವ್ಯಕ್ತಿಗಳನ್ನು ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮುಚ್ಚಳಿಕೆ ಬರೆದುಕೊಡಲು ಠಾಣೆಗೆ ಕರೆಸಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪೊಲೀಸ್‌ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಚುನಾವಣಾ ಆಯೋಗದ ನಿರ್ದೇಶಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ ಎಂದು ಸಚಿವ ಖಾದರ್‌ ತಿಳಿಸಿದರು.

ಆಯೋಗದ ನಿರ್ದೇಶ ಪಾಲಿಸಿ
ಕಾನೂನು ರೀತಿಯಲ್ಲಿ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸುವುದಕ್ಕೆ ನನ್ನ ವಿರೋಧವಿಲ್ಲ. ಆದರೆ ಚುನಾವಣಾ ಆಯೋಗದ ನಿಯಮಗಳಿಗೆ ವಿರುದ್ಧವಾಗಿ ಒಂದೊಂದು ಠಾಣೆಯಲ್ಲಿ ಒಂದೊಂದು ರೀತಿಯ ವರ್ತನೆ ಮಾಡುವುದು ಸರಿಯಲ್ಲ. ಕೇಂದ್ರ ಚುನಾವಣಾ ಆಯೋಗದ ನಿಯಮದ ಪ್ರಕಾರ, ಒಂದು ವರ್ಷ ಕಾಲ ಯಾವುದೇ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡಿಲ್ಲವಾದರೆ ಅಂತಹವರನ್ನು ರೌಡಿ ಪಟ್ಟಿಯಿಂದ ಮುಕ್ತಗೊಳಿಸಲು ಅವಕಾಶವಿದೆ. ಆದರೆ ಪ್ರಕರಣ ಕೈ ಬಿಡಬೇಕು ಎಂದು ಹೇಳುತ್ತಿಲ್ಲ ಎಂದರು.

Advertisement

ಈ ರೀತಿಯ ಸೂಚನೆಯಿಂದ ಸಚಿವರ ಹೆಸರು ದುರುಪಯೋಗವಾಗುವ ಸಾಧ್ಯತೆ ಇದೆಯಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಯು.ಟಿ. ಖಾದರ್‌, ಒಂದು ವೇಳೆ ಇಂತಹ ಸಂದರ್ಭದಲ್ಲಿ ನನ್ನ ಹೆಸರು ಹೇಳಿದ್ದರೆ, ಅದನ್ನು ಖಾತ್ರಿಪಡಿಸುವುದು ಪೊಲೀಸರ ಜವಾಬ್ದಾರಿ. ಯಾರೋ ನನ್ನ ಹೆಸರು ಹೇಳಿದರು ಎಂದು ಕೇಸು ದಾಖಲಿಸದೆ ಬಿಟ್ಟು ಬಿಡುವುದು ಸರಿಯಲ್ಲ. ಚುನಾವಣಾ ಆಯೋಗದ ನಿಯಮದ ಪ್ರಕಾರವೇ ನಡೆದುಕೊಳ್ಳಬೇಕು ಎಂದು ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ರೈ ವಿರುದ್ಧ ಐಟಿ ದಾಳಿ ಅಚ್ಚರಿ 
ಪ್ರಾಮಾಣಿಕ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಮಾಜಿ ಸಚಿವ ರಮಾನಾಥ ರೈ ಅವರ ವಿರುದ್ಧದ ಐಟಿ ದಾಳಿ ಅಚ್ಚರಿಗೆ ಕಾರಣವಾಗಿದೆ. ಚುನಾವಣೆ ಸಮೀಪಿಸುವಾಗಲೇ ಈ ದಾಳಿ ಯಾಕೆ ನಡೆಯುತ್ತಿದೆ ಎಂದವರು ಪ್ರಶ್ನಿಸಿದರು.

ಬಿಎಸ್‌ವೈಯವರನ್ನು ಪ್ರಶ್ನಿಸಲಿ
ಬಿಜೆಪಿಗೆ ಸೀಟಿನ ಚಿಂತೆ ಎಂಬ ಖಾದರ್‌ ಹೇಳಿಕೆಗೆ ಪ್ರತಿಯಾಗಿ ಕೋಟ ಶ್ರೀನಿವಾಸ ಪೂಜಾರಿಯವರು ನೀಡಿರುವ ಪ್ರತಿ ಹೇಳಿಕೆಯ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, ಅವರಿಗೆ ಏನು ಹೇಳಬೇಕೆಂದು ತಿಳಿಯದೆ ಮಾತನಾಡಿರಬಹುದು. ಹಿರಿಯ ರಾಜಕಾರಣಿಯಾಗಿರುವ ಶ್ರೀನಿವಾಸ ಪೂಜಾರಿಯವರು ಯಡಿಯೂರಪ್ಪ ಅವರನ್ನು ಪ್ರಶ್ನಿಸುವ ಬದಲು ನನ್ನನ್ನು ಕೇಳಿರುವುದರಲ್ಲಿ ಅರ್ಥವಿಲ್ಲ ಎಂದು ವ್ಯಂಗ್ಯವಾಡಿದರು.

ಭಯೋತ್ಪಾದಕರಿಗೆ ಬೆಂಬಲ ನೀಡುವ ಪಿಡಿಪಿ ಜತೆ ಕಾಶ್ಮೀರದಲ್ಲಿ ಬಿಜೆಪಿ ಕೈಜೋಡಿಸಿರುವುದು ಯಾಕೆ ಎಂಬುದಕ್ಕೆ ಉತ್ತರ ನೀಡಲಿ ಎಂದ ಸಚಿವ ಖಾದರ್‌, ಜಿಲ್ಲೆಯಲ್ಲಿ ಒಂದು ಲೋಡ್‌ ಮರಳು ಸಾಗಿಸುವುದಕ್ಕೆ ಸಾಕಷ್ಟು ತಪಾಸಣೆ ನಡೆಸಲಾಗುತ್ತದೆ. ಹಾಗಿರುವಾಗ 300 ಕೆಜಿ ಆರ್‌ಡಿಎಕ್ಸ್‌ ಪುಲ್ವಾಮದಲ್ಲಿ ಹೇಗೆ ಬಂತು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಅದಕ್ಕೆ ಅವರ ಬಳಿ ಉತ್ತರವಿದೆಯೇ ಎಂದು ಪ್ರಶ್ನಿಸಿದರು.

ವರದಿ ಆಧರಿಸಿ ಕ್ರಮ
ಕಾವೂರು ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ತಡರಾತ್ರಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಪೊಲೀಸರು ಅಡ್ಡಿಪಡಿಸಿದ ಬಗ್ಗೆ ಪಶ್ಚಿಮ ವಲಯ ಐಜಿಪಿ ಜತೆಗೂ ಮಾತನಾಡಿದ್ದು, ಈ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಇಲಾಖೆಯ ಗೌರವಕ್ಕೆ ಕಪ್ಪು ಚುಕ್ಕೆ ಬರುವ ರೀತಿಯಲ್ಲಿ ಪೊಲೀಸರು ನಡೆದುಕೊಂಡಿರುವ ಬಗ್ಗೆ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next