Advertisement

ಮಾ. 5ರೊಳಗೆ ಸರ್ಕಾರ ಪತನ

12:30 AM Feb 05, 2019 | Team Udayavani |

ಹುಬ್ಬಳ್ಳಿ: ರಾಜ್ಯದಲ್ಲಿನ ಸಮ್ಮಿಶ್ರ ಸರಕಾರ ಕಂಟಕದಲ್ಲಿದ್ದು, ಸರಕಾರದಲ್ಲಿನ ಮಿತ್ರರೇ ಶತ್ರುಗಳಾಗಿ ಸರಕಾರಕ್ಕೆ ಗಂಡಾಂತರ ತರುವ ಸಾಧ್ಯತೆಯಿದೆ. ಮಾರ್ಚ್‌ 5ರೊಳಗೆ ಇದು ಪತನಗೊಳ್ಳಲಿದೆ. ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಅಖೀಲ ಕರ್ನಾಟಕ ಜ್ಯೋತಿರ್ವಿಜ್ಞಾನ ಸಂಶೋಧನಾ ಸಂಸ್ಥೆ ಅಧ್ಯಕ್ಷ ವಿದ್ವಾನ್‌ ಗಣೇಶ ಹೆಗಡೆ ಭವಿಷ್ಯ ನುಡಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಯಡಿಯೂರಪ್ಪ ಜಾತಕದಲ್ಲಿ ರಾಶಾಧಿಪತಿ ಕುಜನು ಸ್ವಕ್ಷೇತ್ರದಲ್ಲಿ ಶುಭಸ್ಥಾನಕ್ಕೆ ಫೆ. 6ರಂದು ಬರಲಿದ್ದು, ಅವರಿಗೆ ಸದ್ಯ ಸಾಡೇಸಾತ್‌ ಶನಿ ಪೀಡೆ ಇದ್ದರೂ ರವಿಯು ಶುಭಸ್ಥನಾಗಿ ಬಂದಿರುವುದರಿಂದ ಅಧಿಕಾರ ಹೊಂದುವ ಎಲ್ಲಾ ಯೋಗಗಳಿವೆ. ಅವರು ಸಿಎಂ ಆದರೂ ಅಕ್ಟೋಬರ್‌ ಅಂತ್ಯವರೆಗೆ ಅನೇಕ ಕಂಟಕ, ತೊಂದರೆ ಅನುಭವಿಸಬೇಕಾಗುತ್ತದೆ. ಅಕ್ಟೋಬರ್‌ ನಂತರ ಸಿಎಂ ಸ್ಥಾನ ಬದಲಾವಣೆಗೆ ಒತ್ತಡ ಬಂದರೂ ನಂತರ ಅವರೇ ಸುಸೂತ್ರವಾಗಿ ಅಧಿಕಾರ ನಡೆಸಲಿದ್ದಾರೆ. ಈ ನನ್ನ ಹೇಳಿಕೆ ಸುಳ್ಳಾದರೆ ಮಾಧ್ಯಮದ ಎದುರು ಮತ್ತೆ ಬರಲ್ಲ. ಸಾರ್ವಜನಿಕವಾಗಿ ಬಹಿರಂಗ ಕ್ಷಮೆ ಕೋರುವೆ ಎಂದರು.

ಮತ್ತೆ ಮೋದಿ ಪ್ರಧಾನಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 285ಕ್ಕೂ ಅಧಿಕ ಸ್ಥಾನ ಪಡೆಯುವ ಮೂಲಕ ನರೇಂದ್ರ ಮೋದಿ ಮತ್ತೆ ಪ್ರಧಾನ ಮಂತ್ರಿ ಆಗುವುದು ಖಚಿತ. ಮಾರ್ಚ್‌ ನಂತರ ಎಲ್ಲರೂ ಆಶ್ಚರ್ಯ ಪಡುವ ರೀತಿಯಲ್ಲಿ ಪ್ರಧಾನಿ ಮೋದಿ ಅವರ ಪ್ರತಿಭೆ ಶೇ.75 ಜನಪ್ರಿಯತೆ ಬೆಳೆಯಲಿದೆ. ಏ.5ರಿಂದ ಮೇ 15ರೊಳಗೆ ಲೋಕಸಭೆ ಚುನಾವಣೆ ನಡೆದರೆ ಖಂಡಿತಾ ಮೋದಿ ಪ್ರಧಾನಿಯಾಗುವ ಸಾಧ್ಯತೆಯನ್ನು ಅವರ ಜಾತಕ ಸೂಚಿಸುತ್ತದೆ. ರಾಜ್ಯದಲ್ಲಿ ಬಿಜೆಪಿ 15ಕ್ಕಿಂತ ಅಧಿಕ ಸ್ಥಾನ ಪಡೆಯಲಿದೆ. ಧಾರವಾಡ ಸಂಸದ ಪ್ರಹ್ಲಾದ ಜೋಶಿ ಈ ಬಾರಿಯ ಚುನಾವಣೆಯಲ್ಲಿ ಸುಲಭವಾಗಿ ಗೆಲುವು ಸಾಧಿಸುವ ಅವಕಾಶ ಕಡಿಮೆ. ಅವರು ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next