Advertisement

 ಮರವಂತೆ ಮೀನುಗಾರಿಕಾ ಹೊರಬಂದರು: ಇನ್ನೂ ಆರಂಭಗೊಳ್ಳದ 2ನೇ ಹಂತದ ಕಾಮಗಾರಿ

09:09 PM Oct 07, 2021 | Team Udayavani |

ಕುಂದಾಪುರ: ಮರವಂತೆಯ ಹೊರ ಬಂದರು ಪ್ರದೇಶದಲ್ಲಿ ಎರಡನೇ ಹಂತದ ಬ್ರೇಕ್‌ವಾಟರ್‌ ವಿಸ್ತರಣೆ ಕಾಮಗಾರಿಗೆ ಬಜೆಟ್‌ನಲ್ಲಿ ಅನುದಾನ ಘೋಷಣೆಯಾಗಿ 2 ವರ್ಷ ಕಳೆದರೂ, ಇನ್ನೂ ರಾಜ್ಯ ಮಟ್ಟದ ಅಂದಾಜು ಪಟ್ಟಿ ಮತ್ತು ಸಲಹಾ ಸಮಿತಿಯ ಅನುಮೋದನೆ ಬಾಕಿ ಇರುವುದರಿಂದ ವಿಳಂಬವಾಗಿದೆ. ಈ ಸಮಿತಿಯ ಸಭೆ ಅ. 8ರಂದು ಬೆಂಗಳೂರಿನಲ್ಲಿ ನಿಗದಿಯಾಗಿದ್ದು, ಅನುಮತಿ ಸಿಗುವ ನಿರೀಕ್ಷೆಯಿದೆ.

Advertisement

ಮರವಂತೆಯ ಹೊರ ಬಂದರಿನ ಎರಡನೇ ಹಂತದ ಬ್ರೇಕ್‌ ವಾಟರ್‌ ವಿಸ್ತರಣ ಕಾಮಗಾರಿಗಾಗಿ 2 ವರ್ಷಗಳ ಹಿಂದೆ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ, ಆಗಿನ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮುತುವರ್ಜಿಯಿಂದಾಗಿ ಬಜೆಟ್‌ನಲ್ಲಿ 85 ಕೋ.ರೂ. ಅನುದಾನವನ್ನು ಘೋಷಿಸಲಾಗಿತ್ತು. ಇದಕ್ಕೆ ಈಗಾಗಲೇ ಆಡಳಿತಾತ್ಮಕ ಅನುಮೋದನೆಯಾಗಿದೆ. ಈಗಿನ ಸಚಿವ ಎಸ್‌. ಅಂಗಾರ ಸಹ ಈ ಬಗ್ಗೆ ಸಭೆಯಲ್ಲಿ ಪ್ರಸ್ತಾವಿಸಿದ್ದರು.

ವಿಳಂಬ ಯಾಕೆ?:

ಈಗ ಹೊಸ ನಿಯಮದ ಪ್ರಕಾರ 10 ಕೋ.ರೂ. ಗಿಂತ ಹೆಚ್ಚಿನ ಅನುದಾನದ ಕಾಮಗಾರಿಗೆ  ರಾಜ್ಯ ಮಟ್ಟದ ಅಂದಾಜು ಪಟ್ಟಿ ಮತ್ತು ಸಲಹಾ ಸಮಿತಿಯ ಅನುಮೋದನೆ ಅಗತ್ಯವಾಗಿದೆ. ಅದರ ಅನುಮತಿ ಸಿಕ್ಕ ಬಳಿಕವಷ್ಟೇ ತಾಂತ್ರಿಕ ಸಮಿತಿಯ ಅನುಮೋದನೆ ಸಿಗುತ್ತದೆ. ಆ ಬಳಿಕ ಟೆಂಡರ್‌ ಕರೆಯುವ ಪ್ರಕ್ರಿಯೆ ನಡೆಯಲಿದೆ. ಇದಲ್ಲದೆ ಮರವಂತೆಯ ಮೊದಲ ಹಂತದ ಕಾಮಗಾರಿ ಕಳಪೆ, ಮತ್ತಿತರ ಕಾರಣಗಳಿಂದ ಪೂರ್ಣಗೊಳ್ಳದೇ ಇರುವ ಕಾರಣ, ಎರಡನೇ ಹಂತದ ಕಾಮಗಾರಿ ಮಂಜೂರಾತಿಗೆ ತಾಂತ್ರಿಕ ತೊಡಕು ಎದುರಾಗಿತ್ತು. ಈಗ ಮೊದಲ ಹಂತದ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಎರಡನೇ ಹಂತದ ಕಾಮಗಾರಿಗೆ ಹೊಸದಾಗಿ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಮೂಲಗಳ ಪ್ರಕಾರ ಈ ತಿಂಗಳಾಂತ್ಯದೊಳಗೆ ಟೆಂಡರ್‌ ಕರೆಯುವ ಸಾಧ್ಯತೆಗಳಿವೆ.

ಮೀನುಗಾರರಿಗೆ ತೊಂದರೆ:

Advertisement

ಎರಡನೇ ಹಂತದ ಬ್ರೇಕ್‌ ವಾಟರ್‌ ವಿಸ್ತರಣ ಕಾಮಗಾರಿ ವಿಳಂಬದಿಂದಾಗಿ ಮರವಂತೆಯಲ್ಲಿ ಮೀನುಗಾರರಿಗೆ ಭಾರೀ ತೊಂದರೆಯಾಗುತ್ತಿದೆ. ಈಗಾಗಲೇ ಬ್ರೇಕ್‌ ವಾಟರ್‌ ಸಮಸ್ಯೆಯಿಂದಾಗಿ ದೋಣಿಗಳು ಬಂದರು ಒಳಗೆ ಪ್ರವೇಶಕ್ಕೆ ತೊಂದರೆಯಾಗಿದೆ. ಹಾಗಾ ಗಿ ಒಂದು ತಿಂಗಳ ಕಾಲ ವಿಳಂಬವಾಗಿ ಮೀನುಗಾರಿಕೆ ಆರಂಭಗೊಂಡಿತ್ತು. ದೋಣಿಗಳು ಸುಲಭವಾಗಿ ಬಂದರಿನ ಒಳ ಪ್ರವೇಶಿಸಲು ಕಷ್ಟವಾಗುತ್ತಿದೆ. ಇಲ್ಲಿ ಸುಮಾರು 300ಕ್ಕೂ ಹೆಚ್ಚು ನಾಡದೋಣಿಗಳಿದ್ದು, ಸುಮಾರು 2 ಸಾವಿರಕ್ಕೂ ಹೆಚ್ಚಿನ ಮೀನುಗಾರರು ಇಲ್ಲಿದ್ದಾರೆ. ಬೇರೆ ಕಡೆಗಳ ಮೀನುಗಾರಿಕೆ ದೋಣಿಗಳೂ ಇಲ್ಲಿಗೆ ಬರುತ್ತವೆ.

ಬಜೆಟ್‌ನಲ್ಲಿ ಅನುದಾನ ಮಂಜೂರಾಗಿ 2 ವರ್ಷ ಆಯಿತು. ಇನ್ನೂ ಕಾಮಗಾರಿ ಶುರುವಾಗುವುದು ಕಾಣುತ್ತಿಲ್ಲ. ಹೊರ ಬಂದರು ಕಾಮಗಾರಿ ವಿಳಂಬದಿಂದಾಗಿ ಈಗಾಗಲೇ ಸುಮಾರು ದಿನಗಳ ವಿಳಂಬವಾಗಿ ಮೀನುಗಾರಿಕೆ ಆರಂಭವಾಗಿದೆ. ಇನ್ನಾದರೂ ಆದಷ್ಟು ಬೇಗ ಈ ಎರಡನೇ ಹಂತದ ಕಾಮಗಾರಿ ಆರಂಭವಾಗಲಿ. – ವಾಸುದೇವ, ಅಧ್ಯಕ್ಷರು, ಶ್ರೀ ರಾಮ ಮೀನುಗಾರರ ಸೇವಾ ಸಮಿತಿ ಮರವಂತೆ

ಮರವಂತೆಯ ಎರಡನೇ ಹಂತದ ಬ್ರೇಕ್‌ವಾಟರ್‌ ವಿಸ್ತರಣೆ ಕಾಮಗಾರಿಗೆ ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿದ್ದು, ಶುಕ್ರವಾರ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಅಂದಾಜು ಪಟ್ಟಿ ಮತ್ತು ಸಲಹಾ ಸಮಿತಿಯ ಸಭೆ ನಡೆಯಲಿದೆ. ಆ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾವಿಸಿ, ಒಪ್ಪಿಗೆ ಪಡೆಯಲಾಗುವುದು. ಆ ನಂತರ ತಾಂತ್ರಿಕ ಅನುಮೋದನೆ ಸಹಿತ ಟೆಂಡರ್‌ ಇನ್ನಿತರ ಪ್ರಕ್ರಿಯೆ ನಡೆಯಲಿದೆ.- ತಾರಕೇಶ್‌ ಪಾಯ್ದೆ, ಕಾರ್ಯನಿರ್ವಾಹಕ ಎಂಜಿನಿಯರ್‌, ಬಂದರು ಮತ್ತು ಮೀನುಗಾರಿಕಾ ಇಲಾಖೆ ಉಡುಪಿ ವಿಭಾಗ

620 ಮೀ. ಬ್ರೇಕ್‌ ವಾಟರ್‌ ವಿಸ್ತರಣೆ:

ಮರವಂತೆಯಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ಕಡಲ್ಕೊರೆತ ತಡೆಗಾಗಿ ಮೊದಲ ಹಂತದ ಕಾಮಗಾರಿಯಲ್ಲಿ ಉತ್ತರ ಭಾಗದಲ್ಲಿ 260 ಮೀ. ಹಾಗೂ ದಕ್ಷಿಣ ಭಾಗದಲ್ಲಿ 525 ಮೀ. ಒಟ್ಟು 785 ಮೀ. ಬ್ರೇಕ್‌ವಾಟರ್‌ (ಟೆಟ್ರಾಫೈಡ್‌) ನಿರ್ಮಾಣಗೊಂಡಿತ್ತು. ಈಗ ಅದರ ಮುಂದುವರಿದ ಭಾಗವಾಗಿ ಎರಡನೇ ಹಂತದ ಕಾಮಗಾರಿಯಲ್ಲಿ ಉತ್ತರ ಭಾಗದಲ್ಲಿ 560 ಮೀ. ಹಾಗೂ ದಕ್ಷಿಣ ಭಾಗದಲ್ಲಿ 60 ಮೀ. ಸೇರಿ ಒಟ್ಟು 620 ಮೀ. ತಡೆಗೋಡೆ ನಿರ್ಮಾಣಗೊಳ್ಳಲಿದೆ. ದಕ್ಷಿಣ ಭಾಗದಲ್ಲಿ ದೋಣಿಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next