Advertisement

ದೇಗುಲದಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿ ಮತ್ತೆರಡು ದೇವಸ್ಥಾನದಲ್ಲಿ ಕಳವುಗೈದಿದ್ದನಂತೆ

09:15 AM Aug 13, 2022 | Team Udayavani |

ಕುಂದಾಪುರ/ಬೈಂದೂರು/ಗಂಗೊಳ್ಳಿ : ಮರವಂತೆಯ ಮಹಾರಾಜ ಸ್ವಾಮಿ ಶ್ರಿ ವರಾಹ ದೇವಸ್ಥಾನಕ್ಕೆ ನುಗ್ಗಿ, ಕಳ್ಳತನಕ್ಕೆ ಯತ್ನಿಸಿದ ಆರೋಪಿ ಕರುಣಾಕರ್‌ ದೇವಾಡಿಗ (23) ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಈತ ಇದಲ್ಲದೆ ಇನ್ನೆರಡು ದೇವಸ್ಥಾನಕ್ಕೆ ನುಗ್ಗಿ ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ.

Advertisement

ಕಂಬದಕೋಣೆ ನಿವಾಸಿ ಕರುಣಾಕರ್‌ನನ್ನು ಗಂಗೊಳ್ಳಿ ಪೊಲೀಸರ ತಂಡ ಕಂಬದಕೋಣೆ ಸಮೀಪ ಬಂಧಿಸಿದ್ದರು. ಆರೋಪಿಯನ್ನು ಬೈಂದೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಬಂಧಿತನಿಗೆ ನ್ಯಾಯಾಧೀಶರು 6 ದಿನಗಳ ಪೊಲೀಸ್‌ ಕಸ್ಟಡಿ ವಿಧಿಸಿದ್ದಾರೆ.

ಅಪ್ರಾಪ್ತ ವಯಸ್ಕಳನ್ನು ವರಿಸಿದ್ದ
ಕರುಣಾಕರ್‌ ಮತ್ತು ಆತನ ಅಪ್ರಾಪ್ತ ವಯಸ್ಕ ಪತ್ನಿ ಆ. 9ರಂದು ಮರವಂತೆ ದೇಗುಲಕ್ಕೆ ಭಕ್ತರಂತೆ ಬಂದು ಗರ್ಭಗುಡಿಯೊಳಗೆ ನುಗ್ಗಿ ಕಳ್ಳತನಕ್ಕೆ ಪ್ರಯತ್ನಿಸಿದ್ದರು. ಈ ಸಂಬಂಧ ಬಂಧಿತ ಆರೋಪಿ ಕರುಣಾಕರ್‌ನನ್ನು ವಿಚಾರಣೆ ನಡೆಸಿದಾಗ ಇದರೊಂದಿಗೆ ತಗ್ಗರ್ಸೆ ಗ್ರಾಮದ ಚಂದಣ ಎನ್ನುವಲ್ಲಿನ ಸೋಮಲಿಂಗೇಶ್ವರ ದೇಗುಲ, ಕೊಲ್ಲೂರು ಠಾಣೆ ವ್ಯಾಪ್ತಿಯ ಹೊಸೂರಿನ ದೇವಸ್ಥಾನಕ್ಕೂ ನುಗ್ಗಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ವಿಚಾರಣೆ ಮುಂದುವರಿದಿದ್ದು, ತನಿಖೆಯಲ್ಲಿ ಇನ್ನಷ್ಟು ಹೊಸ ಪ್ರಕರಣಗಳು ಬೆಳಕಿಗೆ ಬಂದರೂ ಬರಬಹುದು. ಕರುಣಾಕರನ ಪತ್ನಿ ಅಪ್ರಾಪ್ತ ವಯಸ್ಕಳಾದ ಕಾರಣ ಆಕೆಯನ್ನು ರಿಮಾಂಡ್‌ ಹೋಮ್‌ಗೆ ದಾಖಲಿಸಲಾಗಿದೆ.

ಎಸ್ಪಿ ವಿಷ್ಣುವರ್ಧನ್‌ ನಿರ್ದೇಶನದಂತೆ, ಎಎಸ್‌ಪಿ ಎಸ್‌.ಟಿ. ಸಿದ್ಧಲಿಂಗಪ್ಪ, ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್‌, ಬೈಂದೂರು ವೃತ್ತ ನಿರೀಕ್ಷಕ ಸಂತೋಷ್‌ ಕಾಯ್ಕಿಣಿ ಸೂಚನೆಯಂತೆ ಎಸ್‌ಐ ವಿನಯ ಕೊರ್ಲಹಳ್ಳಿ ಅವರ ನೇತೃತ್ವದಲ್ಲಿ ಎಸ್‌ಐ ಜಯಶ್ರೀ ಹುನ್ನೂರ, ಸಿಬಂದಿ ಮೋಹನ ಪೂಜಾರಿ, ಶ್ರೀಧರ, ನಾಗೇಂದ್ರ, ಚಾಲಕ ದಿನೇಶ್‌ ಬೈಂದೂರು, ಸುಧೀರ ಪೂಜಾರಿ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.

Advertisement

ಇದನ್ನೂ ಓದಿ : ಉಳ್ಳಾಲ : ಕಿಂಡರ್‌ ಗಾರ್ಟನ್‌ ಶಿಕ್ಷಕಿ ಮೃತದೇಹ ಆರೋಗ್ಯ ಕೇಂದ್ರದ ಬಾವಿಯಲ್ಲಿ ಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next