Advertisement

ಹಣಕಾಸು ದುರ್ಬಳಕೆ ಆರೋಪ: ಸಿಎಸ್‌ಐ ಚರ್ಚ್‌ ಬಿಷಪ್‌ ಮನೆ, ಕಚೇರಿ ಮೇಲೆ ಇ.ಡಿ. ದಾಳಿ

08:16 PM Jul 26, 2022 | Team Udayavani |

ತಿರುವನಂತಪುರ: ಕೇರಳದ ಸಿಎಸ್‌ಐ ಚರ್ಚ್‌ನ ನಿರ್ವಾಹಕ ಮತ್ತು ದಕ್ಷಿಣ ಕೇರಳ ಡಯೋಸಿಸ್‌ (ಎಸ್‌ಕೆಡಿ) ಬಿಷಪ್‌ ಎ.ಧರ್ಮರಾಜ್‌ ರಸಲಂ ಅವರ ಮನೆ ಮತ್ತು ಕಚೇರಿಗಳ ಮೇಲೆ ಕೊಚ್ಚಿಯ ಜಾರಿ ನಿರ್ದೇಶನಾಲಯ ಕಚೇರಿಯ ಅಧಿಕಾರಿಗಳು ದಾಳಿ ಮಾಡಿದ್ದಾರೆ.

Advertisement

ಡಯೋಸಿಸ್‌ನ ಅಡಿಯಲ್ಲಿ ಬರುವ ವೈದ್ಯಕೀಯ ಕಾಲೇಜಿಗೆ ಪ್ರವೇಶ ನೀಡಲು ಕ್ಯಾಪಿಟೇಶನ್‌ ಶುಲ್ಕವನ್ನು ಪಡೆದಿರುವ ಮತ್ತು ದತ್ತಿಗಾಗಿ ಸಂಗ್ರಹಿಸಲಾದ ಮೊತ್ತವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇಲೆ ಬಿಷಪ್‌ ಮನೆ, ಕಚೇರಿಗಳಲ್ಲಿ ಮ್ಯಾರಥಾನ್‌ ಶೋಧ ಕಾರ್ಯ ನಡೆಸಲಾಗಿದೆ.

ಒಟ್ಟು 13 ಗಂಟೆಗಳ ಕಾಲ ಈ ಕಾರ್ಯಾಚರಣೆ ನಡೆದಿದ್ದು, ಇವರ ಮನೆ, ಕಚೇರಿ ಮಾತ್ರವಲ್ಲದೇ, ಏಕಕಾಲಕ್ಕೆ ಸಿಎಸ್‌ಐ ಮೆಡಿಕಲ್‌ ಕಾಲೇಜು ನಿರ್ದೇಶಕ ಡಾ. ಬೆನ್ನೆಟ್‌ ಅಬ್ರಹಾಂ, ಡಯೋಸಿಸ್‌ ಆಡಳಿತಾತ್ಮಕ ಕಾರ್ಯದರ್ಶಿ ಟಿಟಿ ಪ್ರವೀಣ್‌ ಅವರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ. ಈ ವೇಳೆ ಬಿಷಪ್‌ ಪರ ಮತ್ತು ವಿರೋಧಿಗಳ ಗುಂಪು ಅವರ ಮನೆಯ ಮುಂಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ನೆರೆದು, ಪರಸ್ಪರ ಪರ-ವಿರೋಧ ಘೋಷಣೆಗಳನ್ನೂ ಕೂಗಿದ್ದಾರೆ.

ಆರ್ಚ್‌ಬಿಷಪ್‌ ರಾಜೀನಾಮೆ ಕೇಳಿದ ವ್ಯಾಟಿಕನ್‌
ಸಾಮೂಹಿಕ ಪ್ರಾರ್ಥನೆ(ಮಾಸ್‌) ವೇಳೆ ಸಮಾನ ವಿಧಾನವನ್ನು ಪಾಲಿಸುವಂತೆ ಸೂಚಿಸಿದ್ದರೂ ಅದನ್ನು ಜಾರಿ ಮಾಡಿಲ್ಲ ಎಂಬ ಕಾರಣಕ್ಕಾಗಿ ವ್ಯಾಟಿಕನ್‌ ಕೇರಳದ ಎರ್ನಾಕುಳಂ ಆರ್ಚ್‌ಬಿಷಪ್‌ ಆ್ಯಂಟನಿ ಕರಿಯಿಲ್‌ ಅವರ ರಾಜೀನಾಮೆ ಕೇಳಿದೆ. ವ್ಯಾಟಿಕನ್‌ನಡಿ ಬರುವ ಪ್ರಮುಖ ಚರ್ಚುಗಳಲ್ಲಿ ಒಂದಾದ ಕೇರಳ ಮೂಲದ ಸೈರೋ ಮಲಬಾರ್‌ ಚರ್ಚ್‌ ಕಳೆದ ವರ್ಷದ ನವೆಂಬರ್‌ನಿಂದಲೇ ಎಲ್ಲ ಡಯೋಸಿಸ್‌ನಲ್ಲೂ ಸಮಾನ ಮಾದರಿಯ ಮಾಸ್‌ ಅನ್ನು ಪರಿಚಯಿಸಿತ್ತು. ಆದರೆ, ಅದನ್ನು ಪಾಲಿಸದ ಕಾರಣ ಕರಿಯಿಲ್‌ರನ್ನು ತೆಗೆದುಹಾಕಲು ವ್ಯಾಟಿಕನ್‌ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next