ಬೀದರ: ವಿಶ್ವ ಆರೊಗ್ಯ ಸಂಸ್ಥೆಯು ಈ ವರ್ಷದ ಘೋಷಣೆಯಾದ “ಖನ್ನತೆ ಬಗ್ಗೆ ಮಾತಾಡೋಣ’ ಎಂಬ ವಿಷಯವನ್ನು ಜಿಲ್ಲೆಯ ಜನರಿಗೆ ತಲುಪಿಸುವ ಉದ್ದೇಶದಿಂದ ಮ್ಯಾರಥಾನ್ ಓಟ ಆಯೋಜಿಸಿದೆ ಎಂದು ಬ್ರಿಮ್ಸ್ ಸಂಸ್ಥೆ ನಿರ್ದೇಶಕ ಡಾ| ಸಿ.ಚನ್ನಣ್ಣ ಹೇಳಿದರು.
ನಗರದ ಬ್ರಿಮ್ಸ್ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪಾರಂಪರಿಕ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೂರು ವರ್ಷಗಳಿಂದ ಈ ಮ್ಯಾರಾಥಾನ್ ಓಟ ಆಯೋಜಿಸಲಾಗುತ್ತಿದ್ದು, ಸರ್ವೋತ್ಛ ನ್ಯಾಯಾಲಯದ ಆದೇಶದ ಮೇರೆಗೆ “ಹೆಲ್ಮೆಟ್ ಕಡ್ಡಾಯ ಧರಿಸುವಿಕೆ’ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ ಎಂದರು.
ಮ್ಯಾರಥಾನ್ ಓಟವು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವದ ಜೊತೆಗೆ ಉತ್ಸಾಹ ಹೆಚ್ಚಿಸುತ್ತದೆ. ಪಠ್ಯದ ಮಹತ್ವವವನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡುವ ಸಾಮಾಜಿಕ ಕಳಕಳಿ ಇದರಿಂದ ಸಾಧ್ಯವಾಗಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಸಂಚಾರಿ ಪೊಲೀಸ್ ಠಾಣೆ ಸಿಪಿಐ ಶ್ರೀನಿವಾಸ ಅಲ್ಲಾಪುರ ಮಾತನಾಡಿ, ಇಂದು ಶೇ.50ರಷ್ಟು ಜನರು ಅಪಘಾತಕ್ಕೊಳಗಾಗಿ ಸಾವನಪ್ಪುತ್ತಿದ್ದು, ಅದರಲ್ಲಿ ಅರ್ಧದಷ್ಟು ಬೈಕ್ ಸವಾರರೆ ಇದ್ದಾರೆ. ಹೆಲ್ಮೆಟ್ ಇಂದು ಬರಿ ಪೊಲೀಸರ ಭಯಕ್ಕಾಗಿ ಧರಿಸದೇ, ತಮ್ಮ ಆತ್ಮ ರಕ್ಷಣೆಗಾಗಿ ಧರಿಸಬೇಕು ಎಂದು ಕರೆ ನೀಡಿದರು.
ಈ ಮ್ಯಾರಥಾನ್ ಓಟವು ಮೆಡಿಕಲ್ ಕಾಲೇಜಿನಿಂದ ಆರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬ್ರಿಮ್ಸ್ ಕಾಲೇಜಿನ ಮೈದಾನಕ್ಕೆ ಬಂದು ತಲುಪಿತು. ಪುರುಷರ ಸ್ಪರ್ಧೆಯಲ್ಲಿ ವಿಕ್ರಾಂತ ಪ್ರಥಮ, ರಘುನಾಥ ದ್ವಿತೀಯ ಹಾಗೂ ಸುಲೇಮಾನ್ ಕಿಂಗ್ ತೃತೀಯ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ದೀಪಾ ಮದನೆ ಪ್ರಥಮ, ರುಕ್ಸಾನಾ ಬೇಗಂ ದ್ವಿತೀಯ ಹಾಗೂ ಕೋಮಲ ಗುತ್ತೇದಾರ್ ತೃತೀಯ ಸ್ಥಾನ ಪಡೆದರು. ಬ್ರಿಮ್ಸ್ ಕನ್ನಡ ಸಂಘದ ಕಾರ್ಯದರ್ಶಿ ರಾಜಕುಮಾರ ಹೆಬ್ಟಾಳೆ ಸ್ವಾಗತಿಸಿದರು. ಸುಶೀಲ ಬಿರಾದಾರ ನಿರೂಪಿಸಿದರು. ಅಧ್ಯಕ್ಷ ಡಾ| ಚಂದ್ರಕಾಂತ ಚಲ್ಲರ್ಗೆ ವಂದಿಸಿದರು.