Advertisement

ಮೈಮೇಲೆ ಬಂದಿದ್ದಳು ಮಾರಮ್ಮ ದೇವಿ!

12:30 AM Feb 05, 2019 | |

ಆರನೇ ತರಗತಿ ವಿದ್ಯಾರ್ಥಿಯೊಬ್ಬನ ಬಾಯಿ ಮತ್ತು ಕುತ್ತಿಗೆಯಿಂದ ರಕ್ತ ಸುರಿಯುತ್ತಿತ್ತು. ಅವನು ಹಾಕಿದ್ದ ಬಿಳಿ ಅಂಗಿಯೆಲ್ಲಾ ರಕ್ತದಿಂದ ತೋಯ್ದು ಹೋಗಿತ್ತು. ನಮ್ಮ ರೂಮ್‌ನ ಮುಂದೆ ಲೈಟ್‌ ಇಲ್ಲದ್ದರಿಂದ ಏನೊಂದೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಆದರೆ, ಆ ಕತ್ತಲಿನಲ್ಲಿಯೂ ಕೆಂಪು ಬಣ್ಣ ಕಣ್ಣಿಗೆ ರಾಚಿ, ಹೆದರಿಕೆ ಹುಟ್ಟಿಸಿತು. 

Advertisement

ಕೆಲವು ವರ್ಷಗಳ ಹಿಂದೆ ನಾನು ವಸತಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಶಿಕ್ಷಕ ಕೆಲಸದ ಜೊತೆಗೆ, ಹಾಸ್ಟೆಲ್‌ನಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯೂ ನನ್ನ ಮೇಲಿತ್ತು. ಹದಿಹರೆಯದ ಮಕ್ಕಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳುವುದು ಸುಲಭದ ಕೆಲಸವಲ್ಲ ಎಂಬುದು ಹಲವಾರು ಬಾರಿ ನನಗೆ ಮನದಟ್ಟಾಗಿತ್ತು. ಅಂಥದ್ದೇ ಒಂದು ಪ್ರಸಂಗದ ನೆನಪು ಆಗಾಗ್ಗೆ ಕಾಡುತ್ತಿರುತ್ತದೆ. 

ಒಂದು ರಾತ್ರಿ ಹನ್ನೊಂದರ ಸಮಯ. ನಮ್ಮ ರೂಂನ ಬಾಗಿಲು ಬಡಿದ ಸದ್ದಾಯಿತು. ಜೊತೆಗಿದ್ದ ಇನ್ನೊಬ್ಬ ಶಿಕ್ಷಕರು ಬಾಗಿಲು ತೆಗೆಯುವ ಮುನ್ನ,  ಬಂದವರು ಯಾರೆಂದು ನೋಡಲು ಕಿಟಕಿಯಿಂದ ಇಣುಕಿದವರೇ ಗಾಬರಿಯಾಗಿ, “ಸಾರ್‌, ಸಾಕಷ್ಟು ವಿದ್ಯಾರ್ಥಿಗಳು ಬಂದಿದ್ದಾರೆ. ಯಾರಿಗೋ ಏನೋ ಆಗಿದೆ ಬನ್ನಿ’ ಎಂದರು. ಈ ರಾತ್ರಿಯಲ್ಲಿ ಯಾರಿಗೆ ಏನಾಯ್ತಪ್ಪಾ ಎಂದು ಗಾಬರಿಯಲ್ಲಿ ಬಾಗಿಲು ತೆರೆದಾಗ ಆ ದೃಶ್ಯ ನೋಡಿ ನನ್ನ ಎದೆ ಝಲ್ಲೆಂದಿತು!

ಆರನೇ ತರಗತಿ ವಿದ್ಯಾರ್ಥಿಯೊಬ್ಬನ ಬಾಯಿ ಮತ್ತು ಕುತ್ತಿಗೆಯಿಂದ ರಕ್ತ ಸುರಿಯುತ್ತಿತ್ತು. ಅವನು ಹಾಕಿದ್ದ ಬಿಳಿ ಅಂಗಿಯೆಲ್ಲಾ ರಕ್ತದಿಂದ ತೋಯ್ದು ಹೋಗಿತ್ತು. ನಮ್ಮ ರೂಮ್‌ನ ಮುಂದೆ ಲೈಟ್‌ ಇಲ್ಲದ್ದರಿಂದ ಏನೊಂದೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಆದರೆ, ಆ ಕತ್ತಲಿನಲ್ಲಿಯೂ ಕೆಂಪು ಬಣ್ಣ ಕಣ್ಣಿಗೆ ರಾಚಿ, ಹೆದರಿಕೆ ಹುಟ್ಟಿಸಿತು. 

“ಏನಾಗಿದೆಯೋ ಇವನಿಗೆ? ಎಲ್ಲಿಂದ ಬಿದ್ದ? ಯಾರಾದ್ರೂ ಹೊಡೆದ್ರಾ? ಹೇಗಾಯ್ತು ಈ ಗಾಯ’ ಎಂದು ಗಾಬರಿಯಿಂದ ಕೇಳಿದೆವು. ಅವನನ್ನು ಕರೆ ತಂದಿದ್ದ ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ “ಇವನಿಗೆ ಏನೂ ಆಗಿಲ್ಲಾ ಸಾರ್‌. ಮೈಮೇಲೆ ಮಾರಮ್ಮ ದೇವಿ ಬಂದಾಳಂತೆ. ಈ ವರ್ಷ ಎಸ್ಸೆಸ್ಸೆಲ್ಸಿಯವರು ಯಾರೊಬ್ಬರೂ ಪಾಸಾಗಲ್ಲ. ನನಗೆ ಭಕ್ತಿಯಿಂದ ನಡೆದುಕೊಂಡ್ರೆ ಮಾತ್ರ ನಿಮ್ಮನ್ನೆಲ್ಲ ಪಾಸು ಮಾಡ್ತೀನಿ…ಅಂತ ಹೇಳ್ತಿದ್ದ ಸಾರ್‌’ ಅಂದ. “ಬಾಯಿ ಮತ್ತು ಕುತ್ತಿಗೆಯ ಸುತ್ತ ಇರೋ ರಕ್ತ ಏನು ?’ ಅಂದೆ. “ಅದು ರಕ್ತ ಅಲ್ಲಾ ಸಾರ್‌,

Advertisement

ಕುಂಕುಮ  ಹಾಕಿ ಮೈ ಮೇಲೆ ನೀರು ಸುರಿದಿದ್ದೀವಿ ಸಾರ್‌’ ಎಂದು ಮತ್ತೂಬ್ಬ ಹೇಳಿದ. ಅಷ್ಟೊತ್ತಿಗೆ ವಿಷಯ ಕೇಳಿ ಎಲ್ಲಾ ಶಿಕ್ಷಕರು ಅಲ್ಲಿಗೆ ಬಂದು ಬಿಟ್ಟಿದ್ದರು. ಮಕ್ಕಳೊಂದಿಗೆ ಉಳಿದುಕೊಳ್ಳುತ್ತಿದ್ದ ಪ್ರಿನ್ಸಿಪಾಲರು ಕೂಡ ಬಂದು, ಆ ಹುಡುಗನನ್ನು ಬಿಟ್ಟು ಉಳಿದವರೆಲ್ಲರನ್ನು ಬೈದು ಕಳಿಸಿದರು.

ಅವನನ್ನು ಒಳಗೆ ಕರೆದು “ನಿನಗೆ ಯಾವ ದೇವರು ಮೈಮೇಲೆ ಬರುತ್ತೆ ಹೇಳು?’ ಎಂದು ಗದರಿಸಿದರು. ಅವನು ಅಳುತ್ತಾ, “ನನಗೆ ಯಾವ ದೇವರೂ ಮೈಮೇಲೆ ಬರಲ್ಲ ಸಾರ್‌. ಎಸ್ಸೆಸ್ಸೆಲ್ಸಿ ಹುಡುಗರು ನನಗೆ ತುಂಬಾ ತೊಂದರೆ ಕೊಡ್ತಾರೆ. ಅವರ ಸ್ನಾನಕ್ಕೆ ನೀರು ತಂದು ಕೊಡಬೇಕು, ಪ್ರತಿ ದಿನ ಬೆಳಗ್ಗೆ ಸಂಜೆ ನಾನೊಬ್ಬನೇ ಕಸ ಗುಡಿಸಬೇಕು, ಕೆಲವೊಂದು ಸಾರಿ ಅವರ ಬಟ್ಟೆಯನ್ನೂ ನಾನೇ ತೊಳೀಬೇಕು. ಮನೆಯಿಂದ ಏನಾದರೂ ತಿನ್ನೋದಕ್ಕೆ ತಂದ್ರೆ ಎಲ್ಲವನ್ನೂ ಕಸೊಡು ತಾವೇ ತಿಂದು ಮುಗಿಸ್ತಾರೆ. ನನಗೆ ಏನು ಮಾಡೋದು ಅಂತ ತೋಚದೆ, ಅವರನ್ನು ಹೆದರಿಸಲು ದೇವರು ಮೈ ಮೇಲೆ ಬಂದಂತೆ ನಾಟಕ ಮಾಡಿದೆ’ ಎಂದು ಹೇಳಿದ.

“ಮುಂದೆ ಈ ರೀತಿ ಮಾಡಬಾರದು. ನಿನಗೇನಾದ್ರೂ ತೊಂದರೆ ಆಗುತ್ತಿದ್ದರೆ ಅದನ್ನು ಮೊದಲು ನಮ್ಮ ಗಮನಕ್ಕೆ ತರಬೇಕು’

ಎಂದು ಪ್ರಿನ್ಸಿಪಾಲರು ಅವನಿಗೆ ಧೈರ್ಯ ಹೇಳಿ ಕಳುಹಿಸಿದರು. ಆರನೇ ಕ್ಲಾಸಿನ ಅವನು ಮಾಡಿದ ಪ್ಲಾನ್‌ನಿಂದ ನಮಗೆ ನಗು ತಡೆಯಲಾಗಲಿಲ್ಲ. ಆಮೇಲೆ ಎಲ್ಲರೂ ಅದನ್ನು ನೆನಪಿಸಿಕೊಂಡು ನಕ್ಕಿದ್ದೇ ನಕ್ಕಿದ್ದು. 

ವೀರೇಶ್‌ ಮಾಡ್ಲಾಕನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next