ನವದೆಹಲಿ :ಕೆಲವು ತಿಂಗಳ ಹಿಂದೆ ದುಬೈನ ಅಂಗಡಿಯಿಂದ ಕಳವಾಗಿದ್ದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರ ಹೆರಿಟೇಜ್ ವಾಚನ್ನು ಅಸ್ಸಾಂನಲ್ಲಿ ವಶಪಡಿಸಿಕೊಳ್ಳ ಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ.
ಅಂತರಾಷ್ಟ್ರೀಯ ಸಹಕಾರದ ಕಾಯಿದೆಯಲ್ಲಿ ಅಸ್ಸಾಂ ಪೊಲೀಸರು ದುಬೈ ಪೋಲೀಸರ ಜೊತೆ ಸಮನ್ವಯ ಸಾಧಿಸಿ, ಲೆಜೆಂಡರಿ ಫುಟ್ಬಾಲ್ ಆಟಗಾರ ಲೇಟ್ ಡಿಯಾಗೋ ಮರಡೋನಾಗೆ ಸೇರಿದ ಹಬ್ಲೋಟ್ ಕೈ ಗಡಿಯಾರ ವಶ ಪಡಿಸಿಕೊಳ್ಳಲಾಗಿದ್ದು,ವಾಜಿದ್ ಹುಸೇನ್ ಎಂಬಾತನನ್ನು ಬಂಧಿಸಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಎಂದು ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವ ಶರ್ಮ ಟ್ವೀಟ್ ಮಾಡಿದ್ದಾರೆ.
ದುಬೈ ಮೂಲದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪೂರ್ವ ಅಸ್ಸಾಂನ ಶಿವಸಾಗರ್ ಮೂಲದ ಭದ್ರತಾ ಸಿಬ್ಬಂದಿ ವಾಜಿದ್ ಹುಸೇನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಸೀಮಿತ ಆವೃತ್ತಿಯ ಹೆರಿಟೇಜ್ ವಾಚ್ ಅನ್ನು ವಶಪಡಿಸಿಕೊಂಡಿದ್ದಾರೆ. ದುಬೈ ಪೊಲೀಸರ ಮಾಹಿತಿ ಮೇರೆಗೆ ಮುಂಜಾನೆ 4 ಗಂಟೆಗೆ ಹುಸೇನ್ ನನ್ನು ಬಂಧಿಸಲಾಗಿದೆ.
ಫುಟ್ಬಾಲ್ ಆಟಗಾರನ ವಸ್ತುಗಳನ್ನು ಸಂಗ್ರಹಿಸುತ್ತಿದ್ದ ದುಬೈ ಮೂಲದ ಕಂಪನಿಯಲ್ಲಿ ಹುಸೇನ್ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎಂದು ದುಬೈ ಪೊಲೀಸರು ತಿಳಿಸಿದ್ದಾರೆ. ಕೆಲಸದ ಮೇಲೆ ಕೆಲವು ದಿನಗಳ ನಂತರ, ಅವರು ತಮ್ಮ ತಂದೆಗೆ ಅನಾರೋಗ್ಯ ಎಂದು ರಜೆ ಕೇಳಿ ದೇಶಕ್ಕೆ ಮರಳಿದ್ದ, ಆಗಸ್ಟ್ 15 ರಂದು ನವದೆಹಲಿ ತಲುಪಿದ್ದ ಎಂದು ತಿಳಿದು ಬಂದಿದೆ.
ಡಿಯಾಗೋ ಅರ್ಮಾಂಡೋ ಮರಡೋನಾ ಅರ್ಜೆಂಟೀನಾದ ಪ್ರಖ್ಯಾತ ಫುಟ್ಬಾಲ್ ಆಟಗಾರ. ಕ್ರೀಡಾ ಲೋಕದ ಇತಿಹಾಸದಲ್ಲಿ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಿದ್ದವರು. 25 ನವೆಂಬರ್ 2020 ರಂದು ನಿಧನ ಹೊಂದಿದ್ದರು.