Advertisement

ನಿರ್ಮಾಣಕ್ಕೆ ಆನ್‌ಲೈನ್‌ನಲ್ಲೇ ನಕ್ಷೆ!

09:15 AM Nov 09, 2017 | Team Udayavani |

ಬೆಂಗಳೂರು: ಮನೆ ನಿರ್ಮಾಣಕ್ಕಾಗಿ ಕಟ್ಟಡ ನಕ್ಷೆ ಪಡೆಯಲು ಇನ್ನು ಮುಂದೆ ಸರ್ಕಾರಿ ಕಚೇರಿಗೆ ಅಲೆಯಬೇಕಿಲ್ಲ. ಅನಗತ್ಯ ಕಿರಿಕಿರಿ ಅನುಭವಿಸಬೇಕಿಲ್ಲ. ಮನೆಯಲ್ಲೇ ಕುಳಿತು ಆನ್‌ಲೈನ್‌ ಮೂಲಕ ಸುಲಭವಾಗಿ ಕಟ್ಟಡ ನಕ್ಷೆ ಪಡೆಯಬಹುದು.

Advertisement

ಹೌದು, ರಾಜ್ಯದ ಜನತೆಗೆ ಸುಲಭವಾಗಿ ಕಟ್ಟಡ ನಕ್ಷೆ ದೊರೆಯುವಂತೆ ಮಾಡುವ ಉದ್ದೇಶದಿಂದ ಸರ್ಕಾರ “ನಿರ್ಮಾಣ’ ಹೆಸರಿನ ಸ್ವಯಂಚಾಲಿತ ಕಟ್ಟಡ ನಕ್ಷೆ  ಮಂಜೂರಾತಿ ತಂತ್ರಾಂಶದ ಮೂಲಕ ಆನ್‌ಲೈನ್‌ಲ್ಲಿಯೇ ನಕ್ಷೆ ಮಂಜೂರು ಮಾಡಲು ತೀರ್ಮಾನಿಸಿದೆ.
ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಈಗಾಗಲೇ ನಿರ್ಮಾಣ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಅನಗತ್ಯ ವಿಳಂಬ ತಪ್ಪಿಸಲು ನಿರ್ಮಾಣ ತಂತ್ರಾಂಶದ ಮೂಲಕ ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆನ್‌ಲೈನ್‌ ಮೂಲಕ ನಕ್ಷೆ ಮಂಜೂರಾತಿ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಈಗಾಗಲೇ ರಾಜ್ಯದ
ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಕುರಿತ ಮಾಹಿತಿ ಕಲೆ ಹಾಕಿ ತಂತ್ರಾಂಶದಲ್ಲಿ ಅಳವಡಿಸಿದ್ದು, ಒಂದೂವರೆ ತಿಂಗಳಲ್ಲಿ ಆನ್‌ಲೈನ್‌ನಲ್ಲಿ ಜನರಿಗೆ ನಕ್ಷೆ ಲಭ್ಯವಾಗಲಿದೆ. ಈ ತಂತ್ರಾಂಶದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ಪ್ರಕ್ರಿಯೆ ಪ್ರಾರಂಭದಿಂದ ಕೊನೆಯವರೆಗೆ ಆನ್‌ಲೈನ್‌
ಮೂಲಕವೇ ನಡೆಯಲಿದ್ದು, ಮಂಜೂರಾತಿ ಪ್ರಕ್ರಿಯೆಯ ಪ್ರಮುಖ ಹಂತಗಳ ಮಾಹಿತಿ ಇ-ಮೇಲ್‌ ಅಥವಾ ಮೊಬೈಲ್‌ ಸಂದೇಶದ ಮೂಲಕ ಅರ್ಜಿದಾರರಿಗೆ ರವಾನೆಯಾಗಲಿದೆ. ಪ್ರಕ್ರಿಯೆ ಪೂರ್ಣಗೊಂಡ ನಂತರವೂ ನಕ್ಷೆ ಅರ್ಜಿದಾರರ ಇ-ಮೇಲ್‌ಗೆ
ರವಾನೆಯಾಗುವ ವ್ಯವಸ್ಥೆ ಮಾಡಲಾಗುತ್ತಿದೆ.

ಕಲಬುರಗಿಯಲ್ಲಿ ಪ್ರಾಯೋಗಿಕ ಪರೀಕ್ಷೆ: ಆನ್‌ಲೈನ್‌ ಮೂಲಕ ಕಟ್ಟಡ ನಕ್ಷೆ ಮಂಜೂರಾತಿ ವ್ಯವಸ್ಥೆ ಕಲಬುರಗಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದು, ಅದು ಯಶಸ್ವಿಯಾಗುವ ಭರವಸೆಯಿದೆ. ಪ್ರಾಯೋ ಗಿಕ ಪರೀಕ್ಷೆಯಲ್ಲಿ ಕಂಡುಬಂದ ತಾಂತ್ರಿಕ ಸಮಸ್ಯೆ ಪರಿಹರಿಸಲಾಗಿದ್ದು, 15 ದಿನಗಳಲ್ಲಿ ಈ ಕೆಲಸ ಮುಗಿ ಯಲಿದೆ. ಇದರ ಯಶಸ್ಸು ಆಧರಿಸಿ ರಾಜ್ಯದಾ ದ್ಯಂತ ಆನ್‌ಲೈನ್‌ ಕಟ್ಟಡ ನಕ್ಷೆ ಸೇವೆ ವಿಸ್ತರಿಸಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿ ಯೊಬ್ಬರು “ಉದಯ 
ವಾಣಿ’ಗೆ ತಿಳಿಸಿದ್ದಾರೆ. 

ಆನ್‌ಲೈನ್‌ ಪೇಮೆಂಟ್‌:
ಕಟ್ಟಡ ನಕ್ಷೆ ಮಂಜೂರಾತಿ ಅನುಮತಿಗಾಗಿ ಅರ್ಜಿದಾರರು ಪಾವತಿಸಬೇಕಾದ ಶುಲ್ಕವನ್ನೂ ಆನ್‌ಲೈನ್‌ನಲ್ಲಿ ಇ-ಪೇಮೆಂಟ್‌ ಗೇಟ್‌ ವೇ ಮೂಲಕವೇ ಪಾವತಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಹೀಗೆ ಸಂದಾಯವಾಗುವ ಶುಲ್ಕಗಳನ್ನು ಆಯಾ ಲೆಕ್ಕ ಶೀರ್ಷಿಕೆಗಳಿಗೆ ಹೊಂದಾಣಿಕೆ ಮಾಡುವ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಿಕೊಳ್ಳಲಿದ್ದಾರೆ.

ಅರ್ಜಿದಾರರ ವಿರುದ್ಧ ಕ್ರಮ: ಸುಲಭವಾಗಿ ನಕ್ಷೆ ಮಂಜೂರು ಮಾಡಲು ನಗರಾಭಿವೃದ್ಧಿ ಇಲಾಖೆ ಈ ವ್ಯವಸ್ಥೆ ಜಾರಿಗೊಳಿಸುತ್ತಿದೆ. ಕಟ್ಟಡ ವಿಸ್ತೀರ್ಣ ಹೆಚ್ಚಿರುವ ಹಾಗೂ ವಾಣಿಜ್ಯ ಉದ್ದೇಶದ ಕಟ್ಟಡ ಹೀಗೆ ಕೆಲವೊಂದು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ. ಉಳಿದಂತೆ ಅರ್ಜಿದಾರರ ಮೇಲೆ ನಂಬಿಕೆ ಇಟ್ಟು ನಕ್ಷೆ ಮಂಜೂರು
ಮಾಡಲಾಗುತ್ತದೆ. ನಂತರದಲ್ಲಿ ಅಧಿಕಾರಿಗಳು ದಿಢೀರ್‌ ಪರಿಶೀಲನೆ ನಡೆಸಲಿದ್ದು, ಒಂದೊಮ್ಮೆ ಅರ್ಜಿದಾರರು ತಪ್ಪು ಮಾಹಿತಿ ನೀಡಿರುವುದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.

Advertisement

ಅರ್ಜಿದಾರರಿಗೆ ಮಾಹಿತಿ: ಅರ್ಜಿದಾರರು ಕಟ್ಟಡ ನಿರ್ಮಿಸುವ ವಿಸ್ತೀರ್ಣ ಹೆಚ್ಚಾಗಿದ್ದರೆ ಹಾಗೂ ವಾಣಿಜ್ಯ ಉದ್ದೇಶದ ಕಟ್ಟಡಗಳಾದರೆ ಅಧಿಕಾರಿಗಳು ಸ್ಥಳ ಪರಿಶೀಲಿಸಲಿದ್ದು, ಅವರು ಯಾವ ದಿನಾಂಕದಂದು ಪರಿಶೀಲನೆಗೆ ಬರಲಿ ದ್ದಾರೆ ಎಂಬ ಮಾಹಿತಿ ಮೊದಲೇ ಅರ್ಜಿದಾರರಿಗೆ ರವಾನೆಯಾಗಲಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ನಂತರ ಅದೇ ಸ್ಥಳದಿಂದ ವರದಿ ತಂತ್ರಾಂಶಕ್ಕೆ ವರದಿ ಅಪ್‌ಲೋಡ್‌ ಮಾಡಬೇಕು. ಅದಕ್ಕಾಗಿ ಜಿಪಿಎಸ್‌ ವ್ಯವಸ್ಥೆಯನ್ನೂ ಒದಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕಟ್ಟಡ ನಕ್ಷೆ ಮಂಜೂರಾತಿಯಲ್ಲಿ ಪಾರ ದರ್ಶಕತೆ ಹಾಗೂ ಶೀಘ್ರ ನಕ್ಷೆ ಸಿಗುವಂತೆ ಮಾಡಲು ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸಲು ಸಿದ್ಧತೆ ನಡೆಸಲಾಗಿದೆ. ಕಲಬುರಗಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. 
 ●ಅಂಜುಮ್‌ ಪರ್ವೇಜ್‌, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ

ವೆಂ.ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next