ಬೆಂಗಳೂರು: ನಗರಾಭಿವೃದ್ಧಿ ಇಲಾಖೆಯು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶನಾಲಯದ ಸಹಯೋಗದಲ್ಲಿ ಭೂಮಿ ಪರಿವರ್ತನೆ ಹಾಗೂ ಕಟ್ಟಡ ಮತ್ತು ಬಡಾವಣೆ ನಕ್ಷೆ ಮಂಜೂರಾತಿಯನ್ನು ಆನ್‌ಲೈನ್‌ನಲ್ಲಿ ನೀಡುವ ವ್ಯವಸ್ಥೆಗೆ ಗುರುವಾರ ಚಾಲನೆ ನೀಡಿದ್ದು ವಿವರ ಹೀಗಿದೆ.
ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಕೇಂದ್ರ ಕಚೇರಿ, ರಾಜ್ಯ ನಗರ ಯೋಜನಾ ಮಂಡಳಿ, 30 ಶಾಖೆ ಕಚೇರಿಗಳು, ವಲಯ ಕಚೇರಿ, ಮೂರು ವಿಭಾಗೀಯ ಕಚೇರಿ, 30 ನಗರಾಭಿವೃದ್ಧಿ ಪ್ರಾಧಿಕಾರಗಳು, 52 ಯೋಜನಾ ಪ್ರಾಧಿಕಾರಗಳು ಸೇರಿದಂತೆ ಒಟ್ಟು 118 ಪ್ರಾಧಿಕಾರಗಳ ವೆಬ್‌ಸೈಟ್‌ಗಳನ್ನು ಲೋಕಾರ್ಪಣೆ ಮಾಡಲಾಗಿದೆ.
ಕಟ್ಟಡ ನಕ್ಷೆ ಅನುಮೋದನೆಗೆ ನಾನಾ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಪಡೆಯಲು ಒಂದೇ ಬಾರಿ ಎಲ್ಲ ದಾಖಲೆಗಳನ್ನು ಅರ್ಜಿದಾರರಿಂದ ಪಡೆದು ಸಕ್ಷಮ ಪ್ರಾಧಿಕಾರಗಳ ತಂತ್ರಾಂಶಗಳ ಸಂಯೋಜನೆಯೊಂದಿಗೆ ಪರಿಶೀಲಿಸಿ ಸರಳವಾಗಿ ಅನುಮೋದನೆ ನೀಡಲು ಎಲ್ಬಿಪಿಎಎಸ್ (LBPAS) ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಈ ತಂತ್ರಾಂಶ ‘ಅಮೃತ್’ ಯೋಜನೆಯಡಿ ಆಯ್ಕೆಯಾಗಿರುವ 26 ನಗರ/ ಪಟ್ಟಣಗಳಲ್ಲಿ ಪ್ರಾರಂಭವಾಗಿದ್ದು, ಸದ್ಯದಲ್ಲೇ 100 ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಆರಂಭಿಸವಾಗಲಿದೆ. ಬಳಿಕ ಹಂತ ಹಂತವಾಗಿ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಾರಿಗೊಳಿಸಲು ಸಿದ್ಧತೆ ನಡೆದಿದೆ.
ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯಡಿ ಮಹಾಯೋಜನೆಗಳಲ್ಲಿ (ಸಿಡಿಪಿ) ಭೂ- ಉಪಯೋಗ ಪ್ರಸ್ತಾವಗಳಿಗೆ ಸರ್ಕಾರ ಅನುಮೋದನೆ ನೀಡುವ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು “end to end application’ ಅನ್ನು ‘ಎಲ್ಬಿಪಿಎಎಸ್’ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ಬಳಕೆಯಲ್ಲಿನ ಸಾಧಕ- ಬಾಧಕ ಪರಿಶೀಲಿಸಿ ರಾಜ್ಯದ ಎಲ್ಲ ಪ್ರಾಧಿಕಾರಗಳಲ್ಲಿ ಅಳವಡಿಸಲು ತೀರ್ಮಾನಿಸಿದೆ. ವಿನ್ಯಾಸ ಅನುಮೋದನೆ ನೀಡುವ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸಿದ್ದು, ಎಲ್ಲ ನಿರಾಕ್ಷೇಪಣಾ ಪತ್ರಗಳಿಗೆ ಒಂದೇ ಬಾರಿ ಅರ್ಜಿ ಸಲ್ಲಿಸುವ ವ್ಯವಸ್ಥೆಯೊಂದಿಗೆ ಆನ್‌ಲೈನ್‌ನಲ್ಲಿ ಅನುಮೋದನೆ ನೀಡುವ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ.
ಜನರಿಗಿರುವ ಅನುಕೂಲ: ಅರ್ಜಿ ಸಲ್ಲಿಸಲು ಖುದ್ದಾಗಿ ಕಚೇರಿಗಳಿಗೆ ಹೋಗುವ ಅಗತ್ಯವಿಲ್ಲ. ಅರ್ಜಿ ಸಲ್ಲಿಕೆ ಪೂರ್ವದಲ್ಲೇ ನಕ್ಷೆಗಳು ಕಟ್ಟಡ ಉಪವಿಧಿಗಳಿಗೆ ಅನುಗುಣವಾಗಿವೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬಹುದು. ಇತರೆ ಅನುಮೋದನೆಗಳಿಗೆ ಪ್ರತ್ಯೇಕ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.