ಬೀದರ: ಮಾವೋವಾದ, ಆತಂಕವಾದ, ಜಾತಿವಾದ ಮುಂತಾದವು ದೇಶವನ್ನು ಕಾಡುತ್ತಿವೆ. ಮಾವೋವಾದಿಗಳಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ಚಿಂತಕ, ´ೋರಂ ಫಾರ್ ಅವೇರ್‌ನೆಸ್ ಆಫ್ ನ್ಯಾಷನಲ್ ಸೆಕ್ಯುರಿಟಿ (ಎಫ್‌ಎಎನ್‌ಎಸ್) ರಾಷ್ಟ್ರೀಯ ಸಂಘಟನಾ ಮಹಾ ಪ್ರಧಾನ ಕಾರ್ಯದರ್ಶಿ ಗೋಲೋಕ್ ಬಿಹಾರಿ ರಾಯ್ ಎಚ್ಚರಿಸಿದರು.
ಎಫ್‌ಎಎನ್‌ಎಸ್‌ನ ಸ್ಥಳೀಯ ಘಟಕವು ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸುರಕ್ಷತೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ನಕ್ಸಲ್ ಚಳವಳಿ ಆರಂಭದ ದಿನಗಳಲ್ಲಿ ಶೋಷಣೆ ವಿರುದ್ಧ ಮತ್ತು ಶೋಷಿತರ ಪರ ಹೋರಾಟ ನಡೆಯುತಿತ್ತು. ಚಳವಳಿಗಾರರು ಸಾರ್ವಜನಿಕ ಸಂಪತ್ತಿಗೆ ಧಕ್ಕೆಯುಂಟು ಮಾಡುತ್ತಿರಲಿಲ್ಲ. ಶೋಷಣೆ ತಪ್ಪಿಸುವುದಷ್ಟೇ ಅವರ ಉದ್ದೇಶವಾಗಿರುತಿತ್ತು. ಆದರೆ, ಮಾವೋವಾದ ಸಂಪೂರ್ಣವಾಗಿ ಭಿನ್ನವಾಗಿದೆ. ರಾಷ್ಟ್ರೀಯ ಸುರಕ್ಷತೆಗೆ ಸವಾಲಾಗಿ ಪರಿಣಮಿಸಿದೆ ಎಂದು ಹೇಳಿದರು.
ಮಾವೋವಾದಿಗಳು ಸಾರ್ವಜನಿಕ ಸಂಪತ್ತನ್ನು ಹಾಳು ಮಾಡುತ್ತಿದ್ದಾರೆ. ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿಯನ್ನು ಕೊಲ್ಲುವುದು, ಪೊಲೀಸ್ ಠಾಣೆಗಳನ್ನು ಧ್ವಂಸ ಮಾಡುವುದು, ಸಂಪರ್ಕ ವ್ಯವಸ್ಥೆ ಹಾಳು ಮಾಡುವುದು ನಡೆಯುತ್ತಲೇ ಇದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಭದ್ರತೆಗೆ ಅಪಾಯವೊಡ್ಡುವ ಘಟನೆ ನಡೆದಾಗ ಜನ ಭಾವುಕರಾಗಿ ಮಾತನಾಡುತ್ತಾರೆ. ನಂತರ ಕರ್ತವ್ಯ ಮರೆತುಬಿಡುತ್ತಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತೆ ಕುರಿತು ಜಾಗೃತಿ ಮೂಡಿಸುವ ಕಾರ್ಯ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಬೇಕಾಗಿದೆ ಎಂದರು.
ರಾಷ್ಟ್ರೀಯ ಭದ್ರತೆ ಕುರಿತು ಚರ್ಚೆ, ಚಿಂತನೆಗೇನು ಕಮ್ಮಿ ಇಲ್ಲ. ಆದರೆ, ಸಮಾಧಾನಕರ ಮಾರ್ಗ ಶೋಧಿಸುವ ಮತ್ತು ಆ ದಾರಿಯಲ್ಲಿ ಮುನ್ನಡೆಯುವಂತೆ ಜನರನ್ನು ಸನ್ನದ್ಧಗೊಳಿಸುವ ಕೆಲಸ ಆಗಬೇಕಾಗಿದೆ. ಎಫ್‌ಎಎನ್‌ಎಸ್ ದೇಶದಾದ್ಯಂತ ಜನರನ್ನು ಜಾಗೃತಗೊಳಿಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು. ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಉದ್ಘಾಟಿಸಿದರು. ಎಫ್‌ಎಎನ್‌ಎಸ್‌ನ ಪೋಷಕ ಸದಸ್ಯ ಸಂಜಯ ಖೇಣಿ ಅದ್ಯಕ್ಷತೆ ವಹಿಸಿದ್ದರು. ಆರ್ಯ ವೈಶ್ಯ ಸಂಘದ ಅಧ್ಯಕ್ಷ ದತ್ತಾತ್ರಿ ಸಿಂದೋಲ್ ವೇದಿಕೆಯಲ್ಲಿದ್ದರು.
ಎಚ್‌ಕೆಇ ಸಂಸ್ಥೆ ನಿರ್ದೇಶಕ ಡಾ| ರಜನೀಶ ವಾಲಿ, ಜಗದೀಶ ಖೂಬಾ, ಭರತ ಶೆಟಕಾರ್, ಶಿವರುದ್ರಪ್ಪ ಗಿರಿ, ರಾಜು ಚಿಂತಾಮಣಿ, ದತ್ತಾತ್ರೇಯ ದಾಚೇಪಲ್ಲಿ, ನಿತೀನ್ ಕರ್ಪೂರ್, ಸುನೀಲ್ ಗುನ್ನಳ್ಳಿ, ಮಡೆಪ್ಪ, ಶಿವರಾಜ ಕುದರೆ, ಅಶೋಕ ಪಾಟೀಲ, ನಾಗಭೂಷಣ ಕಮಠಾಣಾ, ಶಿವಕುಮಾರ ಪಾಟೀಲ, ಬಸವರಾಜ ಸಿಂದಬಂದಗಿ, ಅನಿಲ ದುರ್ಗೆ, ಮಡೆಪ್ಪ ಗಂಗಶೆಟ್ಟಿ, ಮನ್ಮಥ ಕಾಡವಾದ್, ವಿರೂಪಾಕ್ಷ ಗಾದಗಿ, ಸೂರ್ಯಕಾಂತ ಹಾಲಹಳ್ಳಿ, ರಾಕೇಶ ಪಾಟೀಲ ಡಾಕುಳಗಿ, ಆಕಾಶ ಅಡ್ಡೆ, ಸಮೀರ್ ಚಿಟ್ಟಾ, ಸಂದೀಪ ತಳಘಟಕರ್, ಸಂಜುಕುಮಾರ ಮತ್ತಿತರರು ಇದ್ದರು. ರಾಜಕುಮಾರ ಪಸಾರೆ ಸ್ವಾಗತಿಸಿದರು. ಅನಿಲ್ ರಾಜಗೀರಾ ವಂದಿಸಿದರು.