ನವದೆಹಲಿ: ನಕ್ಸಲೀಯರ ಜೊತೆ ಸಂಪರ್ಕ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಯೂನಿರ್ವಸಿಟಿ ಪ್ರೊಫೆಸರ್ ಜಿಎನ್ ಸಾಯಿಬಾಬಾಗೆ ಮಹಾರಾಷ್ಟ್ರದ ಗಡ್ ಚಿರೋಲಿ ಕೋರ್ಟ್ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮಾವೋವಾದಿಗಳ ಜೊತೆ ಸಂಪರ್ಕ ಮತ್ತು ದೇಶ ವಿರೋಧಿ ಚಟುವಟಿಕೆ ಆರೋಪದಡಿ ಗಡ್ ಚಿರೋಲಿ ಕೋರ್ಟ್ ಆರು ಮಂದಿಯನ್ನು ದೋಷಿ ಎಂದು ತಿಳಿಸಿತ್ತು.
ಕೋರ್ಟ್ ಸಾಯಿಬಾಬಾ, ವಿದ್ಯಾರ್ಥಿ ಮಿಶ್ರಾ ಹಾಗೂ ಉಳಿದ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ವಿಜಯ್ ಟಿರ್ಕೆಗೆ 10 ವರ್ಷಗಳ ಕಠಿಣ ಶಿಕ್ಷೆ ನೀಡಿದೆ.
ದೆಹಲಿ ಯೂನಿರ್ವಸಿಟಿಯ ಪ್ರೊಫೆಸರ್ ಸಾಯಿಬಾಬಾ, ಜೆಎನ್ ಯು ವಿದ್ಯಾರ್ಥಿ ಹೆಮ್ ಮಿಶ್ರಾ, ಮಾಜಿ ಪತ್ರಕರ್ತ ಪ್ರಶಾಂತ್ ರಾಹಿ ಹಾಗೂ ಮಹೇಶ್ ಟಿರ್ಕೆ, ಪಾಂಡು ನರೋಟೆ ಮತ್ತು ವಿಜಯ್ ಟಿರ್ಕೆಯನ್ನು ದೋಷಿ ಎಂದು ಕೋರ್ಟ್ ಘೋಷಿಸಿತ್ತು.
ಇಂದು ಮಧ್ಯಾಹ್ನ ಶಿಕ್ಷೆಯ ಪ್ರಮಾಣ ಪ್ರಕಟಿಸಿದ ಕೋರ್ಟ್, ಸಾಯಿಬಾಬಾ ಹಾಗೂ ಉಳಿದ ಐವರು ಆರೋಪಿಗಳು ಭಾರತ ವಿರೋಧಿ ಧೋರಣೆ ತಳೆದಿರುವುದು ಸಾಬೀತಾಗಿದೆ ಎಂದು ತಿಳಿಸಿತ್ತು. ಕಾನೂನು ಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆ 13, 18, 20, 38 ಮತ್ತು 39ರ ಅನ್ವು ಜಡ್ಜ್ ಎಸ್ಎಸ್ ಶಿಂಧೆ ಶಿಕ್ಷೆಯನ್ನು ಪ್ರಕಟಿಸಿದ್ದರು.2013ರಲ್ಲಿ ಸಾಯಿಬಾಬಾ ಅವರನ್ನು ನವದೆಹಲಿಯ ನಿವಾಸದಲ್ಲಿ ಬಂಧಿಸಲಾಗಿತ್ತು.
ಬಳಿಕ ನಕ್ಸಲೀಯರ ಜೊತೆ ಸಂಪರ್ಕ ಹೊಂದಿರುವ ಬಗ್ಗೆ ದೊರೆತ ಸಾಕ್ಷ್ಯಗಳ ಆಧಾರದ ಮೇಲೆ ಮಿಶ್ರಾ ಹಾಗೂ ಇನ್ನಿಬ್ಬರನ್ನು ಬಂಧಿಸಿದ್ದರು. ಬಳಿಕ ಅನಾರೋಗ್ಯದ ಕಾರಣದಿಂದ ಸಾಯಿಬಾಬಾ ಬೇಲ್ ಪಡೆದು ಹೊರಬಂದಿದ್ದು, ಸಾಯಿಬಾಬಾ ಶೇ.90ರಷ್ಟು ಅಂಗವಿಕಲರಾಗಿದ್ದು ತಳ್ಳುಗಾಡಿಯಲ್ಲೇ ಕಾಲಕಳೆಯುತ್ತಿರುವುದಾಗಿ ವರದಿ ವಿವರಿಸಿದೆ.