Advertisement

ಹಲವು ಪ್ರದೇಶ ಜಲಾವೃತ: ಎರಡು ಮನೆಗೆ ಹಾನಿ, ಓರ್ವನಿಗೆ ಗಾಯ

11:35 AM Aug 11, 2018 | |

ಮಹಾನಗರ : ಕೆಲವು ದಿನಗಳಿಂದ ನಗರದಲ್ಲಿ ತುಸು ಬಿಡುವು ನೀಡಿದ್ದ ಮಳೆ ಮತ್ತೆ ಬಿರುಸುಗೊಂಡಿದ್ದು, ಶುಕ್ರವಾರ ದಿನವಿಡೀ ಸುರಿದ ಪರಿಣಾಮ ಹಲವು ಪ್ರದೇಶಗಳು ಜಲಾವೃತಗೊಂಡು ಜನಜೀವನ ಕೂಡ ಅಸ್ತವ್ಯಸ್ತಗೊಂಡಿತ್ತು. ಕುಲಶೇಖರ ಬಳಿ ಮಣ್ಣು ಕುಸಿದು ಎರಡು ಮನೆಗೆ ಹಾನಿಯಾಗಿದ್ದು, ಓರ್ವನಿಗೆ ಸಣ್ಣ ಪುಟ್ಟ ಗಾಯವಾಗಿದೆ.

Advertisement

ಎರಡೂವರೆ ತಿಂಗಳ ಹಿಂದೆ ನಗರದಲ್ಲಿ ಸುರಿದ ಮಹಾಮಳೆಗೆ ಜಲಾವೃತಗೊಂಡಿದ್ದ ಕೊಟ್ಟಾರ ಚೌಕಿ ಪ್ರದೇಶ ಈಗ ಮತ್ತೆ ಮುಳುಗಡೆಯಾಗಿದ್ದು, ಅಲ್ಲಿನ ಜನರು ಪರದಾಡುವಂತಾಗಿದೆ. ಚರಂಡಿಯಲ್ಲಿ ಮಳೆ ನೀರು ಸರಾಗವಾಗಿ ಹರಿಯುವುದಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಭಾರೀ ಮಳೆಗೆ ಈ ರೀತಿ ನೀರು ನುಗ್ಗಿ ತೊಂದರೆಯಾಗುತ್ತಿದೆ ಎನ್ನುವುದು ಸ್ಥಳೀಯರ ಆರೋಪ. ಹೀಗಾಗಿ, ಮಹಾನಗರ ಪಾಲಿಕೆ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಎಡೆಬಿಡದೆ ಸುರಿದ ಭಾರೀ ಮಳೆಗೆ ಕೊಟ್ಟಾರ ಚೌಕಿ ಫ್ಲೈಓವರ್‌ ಬಳಿ ಸುಮಾರು ಒಂದೂವರೆ ಅಡಿ ನೀರು ನಿಂತಿತ್ತು. ಇದೇ ಕಾರಣದಿಂದ ವಾಹನ ಸಂಚಾರಕ್ಕೂ ಕೆಲಕಾಲ ಅಡ್ಡಿಯಾಗಿತ್ತು.

ಕೊಟ್ಟಾರ ಚೌಕಿ ಸುತ್ತ-ಮುತ್ತ ಜಲಾವೃತ
 ಕೊಟ್ಟಾರ ಚೌಕಿ ಬಳಿಯಿರುವ ನಾಲ್ಕು ಅಂಗಡಿಗಳಿಗೆ ನೀರು ನುಗ್ಗಿದ್ದು ಕೆಲ ವಸ್ತುಗಳಿಗೂ ಹಾನಿಯಾಗಿದೆ. ಇದರಿಂದಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಈ ಪ್ರದೇಶದಲ್ಲಿ ಚರಂಡಿಯಲ್ಲಿ ಹೂಳು ತುಂಬಿದ್ದು ಇಷ್ಟು ದೊಡ್ಡ ಅವಾಂತರಕ್ಕೆ ಕಾರಣ. ಸ್ಥಳೀಯರು ಹೇಳುವ ಪ್ರಕಾರ, ಕಳೆದ ಎರಡು ವರ್ಷಗಳಿಂದ ಈ ಪ್ರದೇಶದ ಚರಂಡಿಯ ಹೂಳು ಎತ್ತಿರಲಿಲ್ಲ. ಅಲ್ಲದೆ, ಕೆಲ ಪ್ರದೇಶಗಳಲ್ಲಿ ರಾಜಕಾಲುವೆ ಒತ್ತುವರಿ ನಡೆಸಿರುವುದರಿಂದ ಸಣ್ಣ ಮಳೆಗೂ ಕೊಟ್ಟಾರ ಚೌಕಿ ಪ್ರದೇಶದ ಸುತ್ತ-ಮುತ್ತ ಜಲಾವೃತಗೊಳ್ಳುತ್ತದೆ.

ಕೃತಕ ನೆರೆ
ನಗರದ ಮೇರಿಹಿಲ್‌ ಸಮೀಪದ ವಿಕಾಸ್‌ ಕಾಲೇಜು ಪಕ್ಕದಲ್ಲಿ ನೀರು ನಿಂತು ಸುತ್ತಮುತ್ತಲಿನ ಮನೆ, ಅಂಗಡಿಗಳಿಗೆ ತೊಂದರೆ ಉಂಟಾಗಿದೆ. ಕೆಲವು ವರ್ಷಗಳ ಹಿಂದೆ ಈ ರಸ್ತೆಯ ಕಾಂಕ್ರಿಟ್‌ ಕಾಮಗಾರಿ ನಡೆಸುವಾಗ ಮಳೆ ನೀರು ಹರಿಯಲು ಚರಂಡಿ ವ್ಯವಸ್ಥೆ ಕಲ್ಪಿಸಲಿಲ್ಲ. ಇದೇ ಕಾರಣದಿಂದ ರಸ್ತೆಯ ಎತ್ತರ ಪ್ರದೇಶದಿಂದ ತಗ್ಗು ಪ್ರದೇಶಕ್ಕೆ ಹರಿದು ಬರುವ ಮಳೆ ನೀರು ರಸ್ತೆಯಲ್ಲೇ ನಿಲ್ಲುತ್ತಿದೆ. ಇವಿಷ್ಟೇ ಅಲ್ಲದೆ, ಮಾಲೆಮಾರ್‌, ಉರ್ವಸ್ಟೋರ್‌, ಪದವಿನಂಗಡಿ, ಕೊಟ್ಟಾರ ಕ್ರಾಸ್‌, ಪಡೀಲ್‌ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾಗಿತ್ತು.

ಮಾತನಾಡಿದ ಶಾಸಕ ವೇದವ್ಯಾಸ ಕಾಮತ್‌, ಈ ಪ್ರದೇಶದ ರಸ್ತೆಯ ನೀರು ಸರಾಗವಾಗಿ ಹರಿಯಲು ಸೂಕ್ತ ವ್ಯವಸ್ಥೆ ಇಲ್ಲ. ನೀರು ರಸ್ತೆಯಿಂದ ರಾಜಕಾಲುವೆಗೆ ಸೇರುವಲ್ಲಿ ಮಣ್ಣು ಸೇರಿಕೊಂಡಿದ್ದು ಚರಂಡಿ ಬ್ಲಾಕ್‌ ಆಗಿದೆ. ತಕ್ಷಣ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

Advertisement

ಸುರತ್ಕಲ್‌
ಶುಕ್ರವಾರ ಸುರಿದ ಭಾರೀ ಮಳೆಗೆ ಮತ್ತೆ ಹೆದ್ದಾರಿ 66ರ ಎರಡೂ ಬದಿಗಳಲ್ಲಿ ನೀರು ನಿಂತು ವಾಹನ ಸಂಚಾರ, ಪಾದಚಾರಿಗಳ ಓಡಾಟಕ್ಕೆ ಅಡಚಣೆ ಉಂಟಾಯಿತು. ಹೊಸಬೆಟ್ಟು, ಹೊನ್ನಕಟ್ಟೆ, ಕುಳಾಯಿ ಪರಿಸರದಲ್ಲಿ ರಸ್ತೆ ಬದಿಯಲ್ಲಿ ನೀರು ನಿಂತು ಸಂಚಾರ ಸಂಕಷ್ಟಕರವಾಯಿತು. ಹೆದ್ದಾರಿ ಬದಿಯ ತೋಡುಗಳಲ್ಲಿ ನೀರು ಸಮರ್ಪಕವಾಗಿ ಹರಿಯದೆ ನೀರು ನಿಂತು ಈ ಸಮಸ್ಯೆ ಉಂಟಾಗುತ್ತಿದ್ದು, ಅವೈಜ್ಞಾನಿಕ ತೋಡುಗಳ ರಚನೆಯೇ ಕಾರಣ ಎಂದು ಸಾರ್ವಜನಿಕರ ಆರೋಪ.

ಚರಂಡಿ ಕ್ಲೀನ್‌
ನಗರದ ಕೊಟ್ಟಾರ ಫ್ಲೈ ಓವರ್‌ ಬಳಿ ಬೆಳಗ್ಗೆ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತಗೊಂಡ ವಿಷಯ ತಿಳಿದ ಬಳಿಕ ಪಾಲಿಕೆ ಎಚ್ಚೆತ್ತುಕೊಂಡಿದೆ. ನ್ಯಾಷನಲ್‌ ಸೂಪರ್‌ ಟ್ರೇಡರ್‌ ಅಂಗಡಿ ಬಳಿ ಚರಂಡಿಯಲ್ಲಿ ನೀರು ಸರಾಗವಾಗಿ ಹೋಗದ ಕಾರಣ ಕೃತಕ ನೆರೆ ಉಂಟಾಗಿತ್ತು. ಬಳಿಕ ಪಾಲಿಕೆ ವತಿಯಿಂದ ಜೆಸಿಬಿ ತರಿಸಿ ಚರಂಡಿಯಿಂದ ಹೂಳೆತ್ತುವ ಕಾರ್ಯ ನಡೆಸಲಾಯಿತು.

2 ದಿನ ಮಳೆ ಸಾಧ್ಯತೆ 
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮುಂದಿನ ಎರಡು ದಿನಗಳ ಕಾಲ ನಗರದಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯೆತ ಇದೆ.

ರಾಜಕಾಲುವೆ ವರದಿ ಇನ್ನೂ ರೆಡಿಯಾಗಿಲ್ಲ!
ರಾಜಕಾಲುವೆಗಳ ಅತಿಕ್ರಮಣ, ಒತ್ತುವರಿ ಪತ್ತೆ ಮಾಡಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಮೂಡಾ ಆಯುಕ್ತರ ನೇತೃತ್ವದ ತಂಡಕ್ಕೆ ಆದೇಶ ನೀಡಿ ತಿಂಗಳು ಎರಡು ಆಗುತ್ತ ಬರುತ್ತಿದ್ದರೂ ವರದಿ ಮಾತ್ರ ಇನ್ನೂ ಅಂತಿಮಗೊಂಡಿಲ್ಲ. ಮೇ 29ರಂದು ನಗರದಲ್ಲಿ ಸುರಿದ ಭಾರೀ ಮಳೆಯಿಂದ ಕೊಟ್ಟಾರ ಸೇರಿದಂತೆ ಬಹುತೇಕ ಭಾಗದಲ್ಲಿ ನೆರೆನೀರು ರಸ್ತೆಯಲ್ಲಿಯೇ ಹರಿದು ಸಮಸ್ಯೆ ಸೃಷ್ಟಿಯಾಗಿ ಕೋಟ್ಯಾಂತರ ರೂ.ನಷ್ಟ ಉಂಟಾಗಿತ್ತು. ಇದಕ್ಕೆ ರಾಜಕಾಲುವೆಗಳ ಅತಿಕ್ರಮಣ ಪ್ರಮುಖ ಕಾರಣ ಎಂದು ಅರಿತ ಜಿಲ್ಲಾಧಿಕಾರಿಯವರು ರಾಜಕಾಲುವೆಗಳ ಒತ್ತುವರಿ ಪತ್ತೆಗೆ ವಿಶೇಷ ಸಮಿತಿ ರಚಿಸಿ ವಾರದೊಳಗೆ ವರದಿ ನೀಡುವಂತೆ ಸೂಚನೆ ನೀಡಿದ್ದರು. ಆದರೆ ಸಮಗ್ರ ಅಧ್ಯ ಯನ ನಡೆಸಬೇಕಾದ ಕಾರಣ ಜೂ. 5ರಂದು 27ಪುಟಗಳ ಮಧ್ಯಂತರ ವರದಿ ಸಲ್ಲಿಕೆ ಮಾಡಿ, ಹೆಚ್ಚುವರಿ ಅವಧಿಯನ್ನು ಸಮಿತಿ ಕೇಳಿತ್ತು. ಇದೀಗ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶ್ರೀಕಾಂತ್‌ ಮತ್ತು 4 ಮಂದಿ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ಸಮಗ್ರ ವರದಿ ತಯಾರಿಸ ಲಾಗುತ್ತಿದೆ. ಇದಕ್ಕಾಗಿ 4 ಮಂದಿ ಸಿಟಿ ಸರ್ವೇಯರ್‌ ಗಳನ್ನು ಪಡೆದುಕೊಳ್ಳಲಾಗಿದೆ. ಎನ್‌ ಐಟಿಕೆ ತಂತ್ರಜ್ಞರ ಸಹಕಾರ ಪಡೆದು ಕೊಳ್ಳಲಾಗಿದೆ. ಬೆಂಗಳೂರಿನಿಂದ ಟೊಪೋಗ್ರಫಿ ನಕ್ಷೆ ತರಿಸಿ ಎನ್‌ಐಟಿಕೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಈ ನಕ್ಷೆಯ ಆಧಾರದಲ್ಲಿ ನಗರದ ರಾಜಕಾಲು ವೆಗಳ ಮಾಹಿತಿ ಕಲೆ ಹಾಕಿ ಒತ್ತುವರಿ ಪ್ರದೇಶದ ಸಮಗ್ರ ವರದಿ ಸಿದ್ಧಪಡಿಸಿ, ಜಿಲ್ಲಾಧಿಕಾರಿಗೆ ಹಸ್ತಾಂತರಿಸಬೇಕಿದೆ. ಆದರೆ, ಇದು ಯಾವಾಗ ಎಂಬುದು ಇನ್ನೂ ಅಂತಿಮವಾಗಿಲ್ಲ.

ಸ್ಥಳಕ್ಕೆ ಶಾಸಕ, ಆಯುಕ್ತರು ಭೇಟಿ
ಕೊಟ್ಟಾರ ಚೌಕಿ ಫ್ಲೈಓವರ್‌ ಬಳಿ ನೀರು ನಿಂತ ಪ್ರದೇಶಕ್ಕೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್‌, ಪಾಲಿಕೆ ಆಯುಕ್ತ ಮೊಹಮ್ಮದ್‌ ನಜೀರ್‌, ಇಂಜಿನಿಯರ್‌ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. 

Advertisement

Udayavani is now on Telegram. Click here to join our channel and stay updated with the latest news.

Next