Advertisement

ಒಂದೇ ಇಲಾಖೆಯಡಿ ಹಲವು ಯೋಜನೆಗೆ ಚಿಂತನೆ

08:29 AM Jun 04, 2019 | Team Udayavani |

ತುಮಕೂರು: ಕೇಂದ್ರ ಸರ್ಕಾರ ಹೊಸದಾಗಿ ಜಲಶಕ್ತಿ ಸಚಿವಾಲಯ ಆರಂಭಿಸಿ, ನೀರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಯೋಜನೆಯನ್ನು ಒಂದೇ ಇಲಾಖೆ ಅಡಿ ತರುವ ಮಹತ್ವದ ನಿರ್ಧಾರ ಕೈಗೊಳ್ಳಲಾಗುವುದು. ಈ ಮೂಲಕ ದೇಶದ ಪ್ರತಿಯೊಬ್ಬರಿಗೂ ಕುಡಿಯುವ ನೀರು ಮತ್ತು ಕೃಷಿಗೆ ನೀರು ನೀಡಲು ಪ್ರಧಾನ ಮಂತ್ರಿಗಳು ಚಿಂತಿಸಿದ್ದಾರೆ. ಇಂತ ಸಂದರ್ಭದಲ್ಲಿ ನದಿ ಜೋಡಣೆ ಕುರಿತು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿಗಳು ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಂಸದ ಜಿ.ಎಸ್‌. ಬಸವರಾಜ್‌ ಆಗ್ರಹಿಸಿದರು.

Advertisement

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನದಿ ಜೋಡಣೆ ಯೋಜನೆ ಪ್ರಧಾನಿ ನರೇಂದ್ರ ಮೋದಿಯವರ ತಪಸ್ಸು. ಈ ಯೋಜನೆಯಡಿಯಲ್ಲಿ ದಕ್ಷಿಣ ಭಾರತದಲ್ಲಿ ನದಿ ಜೋಡಣೆಗೆ ಯೋಜನೆ ತಯಾರಾಗುತ್ತಿದೆ. ರಾಜ್ಯದಲ್ಲಿನ ನದಿ ಜೋಡಣೆಯಿಂದ ರೈತರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಶಾಶ್ವತ ನೀರಾವರಿಗೆ ವಿಶೇಷ ಅಧಿವೇಶನ:ಕುಡಿಯುವ ನೀರು ಮತ್ತು ಕೃಷಿಗೆ ಅನುಕೂಲವಾಗಬೇಕಾದರೆ ನದಿ ಜೋಡಣೆ ಆಗಬೇಕು. ಈ ಒತ್ತಾಯ ನಮ್ಮ ರಾಜ್ಯದಿಂದಲೇ ಮೊದಲು ಪ್ರಾರಂಭವಾಗಬೇಕು. ಹೀಗಾಗಿ ಸಂಸದರ ಹಾಗೂ ಸರ್ವ ಪಕ್ಷಗಳ ಸಭೆ ಕರೆಯಬೇಕು. ಶಾಶ್ವತ ನೀರಾವರಿಗಾಗಿ ವಿಶೇಷ ಅಧಿವೇಶನ ಮಾಡಬೇಕಿದೆ. ಕೇಂದ್ರ ಜಲಶಕ್ತಿ ಸಚಿವಾಲಯದ ಸಚಿವ ಗಜೇಂದ್ರ ಶೇಖಾವತ್‌ ಅವರನ್ನು ತುಮಕೂರಿಗೆ ಕಾರ್ಯಕ್ರಮಕ್ಕೆ ಕರೆಯಲಾಗುವುದು. ನೀರಾವರಿ ಯೋಜನೆ ಜಾರಿಗೆ ರಾಜ್ಯ ಮಟ್ಟದ ಬೃಹತ್‌ ಸಮಾವೇಶವನ್ನು ಮಾಡಲಾಗುತ್ತದೆ. ರಾಜ್ಯದ ಸರ್ವ ಧರ್ಮದ ಮಠಾಧೀಶರು ಸಮಾವೇಶದಲ್ಲಿ ಭಾಗವಹಿಸುವರು. ಈಗಾಗಲೇ ಮಠಾಧೀಶರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿದರು.

ಊರಿಗೊಂದು ಕೆರೆ, ಆ ಕೆರೆಗೆ ನದಿ ನೀರು ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ 2019-20 ಸಾಲಿನ ಬಜೆಟ್‌ನಲ್ಲಿ ಈ ಯೋಜನೆ ಸೇರಿಸಿ ಅನುದಾನ ಮಂಜೂರು ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಮನವಿಪತ್ರ ಸಲ್ಲಿಸಲಾಗಿದೆ ಎಂದರು.

ಹೇಮಾವತಿ ನೀರು ಹಂಚಿಕೆಯಲ್ಲಿ ಅನ್ಯಾಯ: ಹೇಮಾವತಿ ನೀರು ಜಿಲ್ಲೆಗೆ ಬಿಡದಿದ್ದೇ ನನಗೆ ವರದಾನವಾಗಿದೆ. ಹಾಸನದಿಂದ ಜಿಲ್ಲೆಗೆ ಹೇಮಾವತಿ ನೀರಿನ ಹಂಚಿಕೆಯಲ್ಲಾದ ಅನ್ಯಾಯವನ್ನು ಜನರು ಅರಿತುಕೊಂಡಿದ್ದರು. ಇದರಿಂದ ದೇವೇಗೌಡರು ನಿಂತರೂ ನನಗೆ ಜನ ಮತ ನೀಡಿದರು. ಇದು ನೀರಾವರಿ ಬಗ್ಗೆ ಜನತೆಗೆ ಅರಿವು ಮೂಡಿಸಲಾಗಿದೆ.

Advertisement

ರಾಜ್ಯದ ರೈತರಿಗೆ ನೀರು, ವಿದ್ಯುತ್‌ ಹಾಗೂ ಅವರ ಉತ್ಪನ್ನಕ್ಕೆ ಉತ್ತಮ ಬೆಲೆ ನೀಡಿದರೆ ಯಾವ ಸರ್ಕಾರವೂ ಅವರ ಸಾಲಮನ್ನಾ ಮಾಡುವ ಅವಶ್ಯಕತೆಯಿಲ್ಲ. ರೈತರೇ ಸರ್ಕಾರಕ್ಕೆ ಸಾಲ ನೀಡುತ್ತಾರೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ನಾಗರಾಜ್‌, ನಟರಾಜ್‌, ನಗರಸಭೆ ಮಾಜಿ ಅಧ್ಯಕ್ಷೆ ಕಮಲಮ್ಮ ಸೇರಿದಂತೆ ಮತ್ತಿತರಿದ್ದರು.

ಹೊರಗಡೆಯಿಂದ ಬಂದವರಿಗೆ ಅವಕಾಶ ನೀಡಲ್ಲ: 
ನನ್ನ ಕೊನೆಯ ಚುನಾವಣೆ ಇದಾಗಿತ್ತು. ಮುಂದೆ ನಾನು ಚುನಾವಣೆಗೆ ಸ್ಫರ್ಧಿಸುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಹೊಸಬರಿಗೆ ಅವಕಾಶ ನೀಡುತ್ತೇವೆ. ಯಾವುದೇ ಕಾರಣಕ್ಕೂ ಹೊರಗಡೆಯಿಂದ ಬಂದವರಿಗೆ ಅವಕಾಶ ನೀಡುವುದಿಲ್ಲ. ನೂರಾರು ಕೋಟಿ ರೂ. ಖರ್ಚು ಮಾಡಿದವರ ಮುಂದೆ ನಾನು ಏನು ಅಲ್ಲ. ಜಿಲ್ಲೆಯ ಜನತೆ ಹಣಕ್ಕೆ ಬೆಲೆ ನೀಡದೆ ನನ್ನನ್ನು ಗೆಲ್ಲಿಸಿದ್ದಾರೆ ಎಂದು ಸಂಸದ ಜಿ.ಎಸ್‌.ಬಸವರಾಜ್‌ ಪರೋಕ್ಷವಾಗಿ ದೇವೇಗೌಡರಿಗೆ ಟಾಂಗ್‌ ನೀಡಿದರು. ಮಧುಗಿರಿ ಭಾಗದಲ್ಲಿ ಹೆಚ್ಚಿನ ಮತಗಳು ಲಭಿಸಿದ್ದು, ರಾಜಣ್ಣ ಅವರ ಬೆಂಬಲಿಗರು, ಅಲ್ಲಿನ ಶಾಸಕರ ಕಾರ್ಯ ವೈಖರಿಯಿಂದ ಬೇಸತ್ತು ಬಿಜೆಪಿಗೆ ಮತ ಹಾಕಿದ್ದಾರೆ. ಇದರಲ್ಲಿ ರಾಜಣ್ಣ ಅವರ ಬಗ್ಗೆ ಅನ್ಯತಾಭಾವಿಸುವುದು ಬೇಡ. ಎಚ್‌ಡಿಡಿ ಸೋಲಿಗೆ ವಿವಿಧ ಕಾರಣಗಳಿವೆ. ಅದೇ ರೀತಿ ಮುದ್ದಹನುಮೇಗೌಡ ಅವರ ಬೆಂಬಲಿಗರು ಮತ ಹಾಕಿರಬಹುದು ಎಂದರು.
ಹೇಮೆ ನೀರು ಹರಿಸಲು ಕ್ರಮ:

ತುಮಕೂರಿಗೆ ಹೇಮಾವತಿ ನೀರು ಹರಿಸದಿದ್ದರೆ, ನೀರಾವರಿ ಆಯೋಗದವರು ಕ್ರಮ ಕೈಗೊಂಡು ನೀರು ಹರಿಸುತ್ತಾರೆ ಎಂದು ಸಂಸದ ಜಿ.ಎಸ್‌ ಬಸವರಾಜ್‌ ತಿಳಿಸಿದರು. ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ತುಮಕೂರು ಜಿಲ್ಲೆಗೆ ಹೇಮಾವತಿ ನೀರು 24.5 ಟಿಎಂಸಿ ಬಿಡಬೇಕು ಎಂದು ಟ್ರಿಬಿನಲ್ ಆದೇಶ ಇದೆ. ಆ ನೀರು ಹರಿಯಬೇಕು. ಹೇಮಾವತಿ ನೀರನ್ನು ಜಿಲ್ಲೆಗೆ ಹರಿಸಲು ದೇವೇಗೌಡರ ಕುಟುಂಬದವರು ತೊಂದರೆ ನೀಡಿದರೆ, ಟ್ರಿಬಿನಲ್ ಕಮಿಟಿಗೆ ದೂರು ನೀಡುತ್ತೇವೆ. ಆ ಕಮಿಟಿಯವರು ಒದ್ದು ಜಿಲ್ಲೆಗೆ ನೀರು ಹರಿಸುತ್ತಾರೆ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು. ಈ ಬಗ್ಗೆ ಜಿಲ್ಲೆಯ ಜನ ಆತಂಕ ಪಡಬೇಕಾಗಿಲ್ಲ. ನಮ್ಮ ನೀರು ನಮಗೆ ಬರುತ್ತದೆ ಎಂದ ಅವರು, ಸಚಿವ ಎಸ್‌.ಆರ್‌. ಶ್ರೀನಿವಾಸ್‌ಗೆ ತಿಳುವಳಿಕೆ ಇಲ್ಲ. ತಿಳುವಳಿಕೆ ಇದ್ದಿದ್ದರೆ ಆ ರೀತಿ ಮಾತನಾಡುತ್ತಿರಲಿಲ್ಲ. ಇಂದು ನೀರು ಇಲ್ಲದೆ ಅವನ ಕ್ಷೇತ್ರವೇ ಹಾಳಾಗಿ ಹೋಗಿದೆ. ಆದರೂ ಈ ರೀತಿ ಮಾತನಾಡುತ್ತಾರೆ ಎಂದು ಹೇಳುವ ಮೂಲಕ ತುಮಕೂರಿನಲ್ಲಿ ಮತ್ತೆ ಜಲ ರಾಜಕಾರಣ ಶುರುವಾಗಿದೆ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next