Advertisement

ವಿಷ ಪ್ರಸಾದ ಬಾಧಿತರಿಗೆ ಹಲವು ಯೋಜನೆ ಘೋಷಣೆ

06:58 AM Dec 26, 2018 | |

ಹನೂರು(ಚಾಮರಾಜನಗರ)/ವಿಜಯಪುರ: ಸುಳ್ವಾಡಿ ಗ್ರಾಮದ ಕಿಚ್‌ಗುತ್‌ ದೇಗುಲದಲ್ಲಿ ನಡೆದ ವಿಷ ಪ್ರಾಷನ ಘಟನೆಯಿಂದ ಬಾಧಿತರಾಗಿರುವ 98 ಕುಟುಂಬಗಳ 405 ಸದಸ್ಯರಿಗೆ ಸರ್ಕಾರ ವಿವಿಧ ಸವಲತ್ತುಗಳನ್ನು ಕಲ್ಪಿಸಲಿದ್ದು ಯಾರೂ ಧೃತಿಗೆಡಬಾರದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಧೈರ್ಯ ತುಂಬಿದರು. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ  ಬಿದರಹಳ್ಳಿಯಲ್ಲಿ ಮಂಗಳವಾರ ನಡೆದ, ವಿಷಪೂರಿತ ಪ್ರಸಾದ ಸೇವನೆಯಿಂದಾಗಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಭೆ ಮತ್ತು ಸಂತ್ರಸ್ತರಿಗೆ ಸಾಂತ್ವನ ಸಭೆಯಲ್ಲಿ ಅವರು ಮಾತನಾಡಿದರು.

Advertisement

ದೇವರ ಪ್ರಸಾದದಲ್ಲಿ ವಿಷ ಮಿಶ್ರಣ ಮಾಡಿರುವುದು ಅತ್ಯಂತ ಅಮಾನವೀಯ ಕೃತ್ಯ. ಘಟನೆಯ ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಖಂಡಿತವಾಗಿಯೂ ಆಗುತ್ತದೆ. ಬಾಧಿತರಾಗಿ ಭೂಮಿ ಇಲ್ಲದವರಿಗೆ ಸರ್ಕಾರದ ವತಿಯಿಂದಲೇ ಜಮೀನು ಖರೀದಿಸಿ, ಗಂಗಾಕಲ್ಯಾಣ ಯೋಜನೆಯಡಿ ಬೋರ್‌ವೆಲ್‌ ಕೊರೆಸಿ ಕೊಡಲು ಕ್ರಮ ಕೈಗೊಳ್ಳಲಾಗಿದೆ. ರಾಜೀವ್‌ ಗಾಂಧಿ ವಸತಿ ನಿಗಮದ ವತಿಯಿಂದ 30 ಮಂದಿ ನಿವೇಶನರಹಿತ ಕುಟುಂಬಗಳಿಗೆ ಸರ್ಕಾರದ ವತಿಯಿಂದಲೇ ನಿವೇಶನ ನೀಡಿ, 88 ಜನರಿಗೆ ಮನೆ ನಿರ್ಮಾಣ ಮಾಡಿಕೊಡಲು ಕ್ರಮ ವಹಿಸಲಾಗಿದೆ. ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ನಿಗಮ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಾಧಿತರಿಗೆ 2 ಲಕ್ಷ ರೂ. ಮತ್ತು ಹಿಂದುಳಿದ ವರ್ಗಗಳ ಬಾಧಿತರಿಗೆ 1 ಲಕ್ಷ ರೂ. ಗಳ ಸಾಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿ, ಸ್ಥಳದಲ್ಲಿಯೇ ಮಂಜೂರಾತಿ ಪತ್ರ ನೀಡಿದರು.

ಗುಡಿ ಕೈಗಾರಿಕೆಗೆ ಸರ್ಕಾರದಿಂದಲೇ ವಿಶೇಷ ತರಬೇತಿ: ಭೀಕರ ಬರ ಹಾಗೂ ಇತರ ಕಾರಣಗಳಿಗೆ ಗುಳೆ ಹೋಗುವ ದುಃಸ್ಥಿತಿಗೆ ಕಡಿವಾಣ ಹಾಕಲು ತಮ್ಮ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಗ್ರಾಮೀಣ ಜನರು ಸ್ವಗ್ರಾಮದಲ್ಲೇ ಗುಡಿ ಕೈಗಾರಿಕೆ ಮೂಲಕ
ಬದುಕು ಕಟ್ಟಿಕೊಳ್ಳಲು ವಿಜಯಪುರ ತಾಲೂಕಿನ ಮದಭಾವಿ ತಾಂಡಾದಲ್ಲಿ ರಾಜ್ಯಕ್ಕೆ ಮಾದರಿ ಆಗುವ ಪೈಲಟ್‌ ಯೋಜನೆ ರೂಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಮಂಗಳವಾರ ವಿಜಯಪುರ ತಾಲೂಕಿನ ಮದಭಾವಿ ತಾಂಡಾ-1ಕ್ಕೆ ಭೇಟಿ ನೀಡಿ, ಗುಳೆ ಹೋಗಿ ಅಪಘಾತದಲ್ಲಿ ಮೃತಪಟ್ಟಿದ್ದ 17 ಜನರ ಕುಟುಂಬಗಳಿಗೆ ಸಾಂತ್ವನ ಹೇಳಿದ ಬಳಿಕ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.

ಗುಳೆ ದುಃಸ್ಥಿತಿಗೆ ಶಾಶ್ವತ ಪರಿಹಾರ ನೀಡಲು ಮದಭಾವಿ ಗ್ರಾಮದಲ್ಲಿ ಮಹಿಳೆಯರು, ಯುವಕರಿಗೆ ಸ್ಥಳೀಯವಾಗಿಯೇ ಗುಡಿ ಕೈಗಾರಿಕೆ, ಸ್ವಯಂ ಉದ್ಯೋಗಕ್ಕೆ ಅಗತ್ಯ ಕೌಶಲ್ಯ ತರಬೇತಿ ನೀಡಿ, ಉದ್ಯೋಗಿಗಳ ಸಂಘಗಳನ್ನು ಸ್ಥಾಪಿಸಿ ಸರ್ಕಾರವೇ ಬಡ್ಡಿ ರಹಿತ ಹಾಗೂ ರಿಯಾಯ್ತಿ ಸಾಲ ಸೌಲಭ್ಯ ಕಲ್ಪಿಸುತ್ತದೆ. ಇಂತಹ ಸಂಸ್ಥೆಗಳು ಉತ್ಪಾದಿಸುವ ಉತ್ಪನ್ನಗಳಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ
ಕಲ್ಪಿಸುವ ಯೋಜನೆಯನ್ನು ಕೂಡ ಸರ್ಕಾರವೇ ಮಾಡಲಿದೆ ಎಂದರು. ತಾಂಡಾ ಮಾತ್ರವಲ್ಲದೆ ಈ ಭಾಗದ ಹಳ್ಳಿಗಳ ಜನರಿಗೆ ಅವರ ಉದ್ಯೋಗದ ಆಸಕ್ತಿಗೆ ಅನುಗುಣವಾಗಿ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಕಲ್ಪಿಸುವ ಈ ಯೋಜನೆಯನ್ನು ಯಶಸ್ವಿಗೊಳಿಸಲು ನೀವೆಲ್ಲ ಶ್ರಮಿಸಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next