Advertisement

ಹಲವರ Twitter ಖಾತೆಗೆ ಸದ್ದಿಲ್ಲದೆ ಮರಳಿದ‌ ಬ್ಲೂಟಿಕ್‌!

07:47 PM Apr 23, 2023 | Team Udayavani |

ನವದೆಹಲಿ: ಚಂದಾದಾರಿಕೆ ಪಡೆದಿಲ್ಲ ಎಂಬ ಕಾರಣಕ್ಕೆ ಭಾರತವೂ ಸೇರಿದಂತೆ ಜಗತ್ತಿನ ಹಲವು ಖ್ಯಾತನಾಮರ ಟ್ವಿಟರ್‌ ಖಾತೆಯಲ್ಲಿದ್ದ ಬ್ಲೂಟಿಕ್‌ ತೆಗೆದುಹಾಕಿದ ಎರಡೇ ದಿನಗಳಲ್ಲಿ ಎಲಾನ್‌ ಮಸ್ಕ್ ಯೂಟರ್ನ್ ಹೊಡೆದಿದ್ದಾರೆ. ಭಾನುವಾರ ಸದ್ದಿಲ್ಲದೇ ಹಲವು ಪ್ರಮುಖರ ಖಾತೆಯ ದೃಢೀಕೃತ ಬ್ಲೂಟಿಕ್‌ ವ್ಯವಸ್ಥೆಯನ್ನು ಪುನರ್‌ಸ್ಥಾಪಿಸಿದ್ದಾರೆ.
10 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಖಾತೆಗಳ ಬ್ಲೂಟಿಕ್‌ ಅನ್ನು ಟ್ವಿಟರ್‌ ಪುನಸ್ಥಾಪಿಸಿದೆ. ಇದರಿಂದಾಗಿ ಯಾವುದೇ ಹಣ ಪಾವತಿಸದೇ ಬಾಲಿವುಡ್‌ ತಾರೆಯರಾದ ಅಲಿಯಾ ಭಟ್‌, ಶಾರುಖ್‌ ಖಾನ್‌, ಕ್ರಿಕೆಟಿಗ ವಿರಾಟ್‌ ಕೋಹ್ಲಿ, ಎಂ.ಎಸ್‌.ಧೋನಿ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್‌ಗೇಟ್ಸ್‌ ಸೇರಿದಂತೆ ಪ್ರಮುಖರಿಗೆ ಬ್ಲೂಟಿಕ್‌ ವ್ಯವಸ್ಥೆ ಮತ್ತೆ ಸಿಕ್ಕಿದೆ.

Advertisement

ಇನ್ನು, ಭಾನುವಾರ ಟ್ವೀಟ್‌ ಮಾಡಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಒಮರ್‌ ಅಬ್ದುಲ್ಲಾ “ಟ್ವಿಟರ್‌ನ ಪಾವತಿ ವ್ಯವಸ್ಥೆಗೆ ಚಂದಾದಾರನಾಗಿದ್ದೇನೆ. ಜತೆಗೆ ಫೋನ್‌ ನಂಬರ್‌ ಕೂಡ ನೀಡಿದ್ದೇನೆ. ಆದರೂ, ನನಗೆ ಬ್ಲೂಟಿಕ್‌ ವ್ಯವಸ್ಥೆ ಇಲ್ಲ” ಎಂದು ಬರೆದುಕೊಂಡಿದ್ದಾರೆ.

ತಮಾಷೆಯ ಸಂಗತಿಯೆಂದರೆ, ಹಲವು ಮಂದಿ ಕೊನೆಯುಸಿರೆಳೆದ ಪ್ರಮುಖರ ಟ್ವಿಟರ್‌ ಖಾತೆಗಳಿಗೆ ಕೂಡ ಬ್ಲೂಟಿಕ್‌ ವ್ಯವಸ್ಥೆ ಪುನಸ್ಥಾಪಿಸಲಾಗಿದೆ. ಟ್ವಿಟರ್‌ನ ಸಹ ಸಂಸ್ಥಾಪಕ ಜ್ಯಾಕ್‌ ಡೋರ್ಸೆ ಅವರಿಗೆ ಇನ್ನೂ ಬ್ಲೂಟಿಕ್‌ ವ್ಯವಸ್ಥೆಯನ್ನು ನೀಡಿಲ್ಲ.

ತೂ ಚೀಸ್‌ ಬಡೀ ಹೆ ಮಸ್ಕ್ ಮಸ್ಕ್…
ಬ್ಲೂಟಿಕ್‌ ಕಳೆದುಕೊಂಡ ಕೂಡಲೇ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಅವರು, ದೃಢೀಕೃತ ಖಾತೆಗೆ ಚಂದಾದಾರಿಕೆ ಪಡೆದುಕೊಂಡಿದ್ದರು. ಆದರೆ, ಅವರಿಗೆ ಬ್ಲೂಟಿಕ್‌ ಸಿಕ್ಕಿರಲಿಲ್ಲ. ಹೀಗಾಗಿ, “ಟ್ವಿಟರ್‌ ಭಯ್ನಾ, ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ನನ್ನ ಖಾತೆಗೆ ಬ್ಲೂಟಿಕ್‌ ನೀಡಿ” ಎಂದು ಕೋರಿದ್ದರು. ನಂತರ ಅವರ ಬ್ಲೂಟಿಕ್‌ ಅನ್ನೂ ಮರಳಿಸಲಾಯಿತು. ಇದಕ್ಕೆ ಧನ್ಯವಾದ ಹೇಳಿ ಟ್ವೀಟ್‌ ಮಾಡಿದ ಬಿಗ್‌ಬಿ, ಬಾಲಿವುಡ್‌ನ‌ ಎವರ್‌ಗ್ರೀನ್‌ ಹಾಡು “ತೂ ಚೀಸ್‌ ಬಡೀ ಹೆ ಮಸ್ತ್ ಮಸ್ತ್…” ಅನ್ನು ಸ್ವಲ್ಪ ಬದಲಾಯಿಸಿ, “ತೂ ಚೀಸ್‌ ಬಡೀ ಹೆ ಮಸ್ಕ್ ಮಸ್ಕ್…” ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next