Advertisement

ಹಲವು ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ: ಸಿ.ಟಿ.ರವಿ

12:58 PM Aug 19, 2022 | Team Udayavani |

ಪಣಜಿ:  ಗೋವಾ, ಮಹಾರಾಷ್ಟ್ರ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶದ ಹಲವು ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ, ಈ ಕುರಿತು ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು  ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಗೋವಾ ಉಸ್ತುವಾರಿ ಸಿ.ಟಿ.ರವಿ ಹೇಳಿದ್ದಾರೆ.

Advertisement

ಗೋವಾದಲ್ಲಿ ಬಿಜೆಪಿ ಪ್ರಮುಖ ನಾಯಕರ ಮೂರು ದಿನಗಳ ವಸತಿ ತರಬೇತಿ ಗುರುವಾರದಿಂದ ಆರಂಭವಾಗಿದ್ದು, ಶಿಬಿರದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಸೇರಿದಂತೆ ಸಚಿವರು, ಶಾಸಕರು, ಸಮಿತಿ ಮುಖಂಡರು ಭಾಗವಹಿಸಿದ್ದಾರೆ. ಶಿಬಿರದ ಉದ್ಘಾಟನಾ ಸಮಾರಂಭದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ,ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯಗಳಿಂದಾಗಿ ವಿವಿಧ ರಾಜ್ಯಗಳ ಅನೇಕ ಶಾಸಕರು ನಮ್ಮ ಪಕ್ಷದತ್ತ ಆಕರ್ಷಿತರಾಗುತ್ತಿದ್ದಾರೆ. ಪ್ರಮುಖವಾಗಿ ಗೋವಾ, ಮಹಾರಾಷ್ಟ್ರ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶದ ಹಲವು ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಈ ಬಗ್ಗೆ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಕೆಲ ದಿನಗಳ ಹಿಂದೆ ಕಾಂಗ್ರೆಸ್‍ನ ಕೆಲ ಶಾಸಕರು ಬಿಜೆಪಿ ಸೇರುವ ಬಗ್ಗೆ ಮಾತನಾಡುತ್ತಿದ್ದರು, ಇದು ಮಿಷನ್ ಕಮಲಕ್ಕೆ ಪುಷ್ಠಿ ನೀಡುತ್ತದೆ.  ಇದಲ್ಲದೇ ಶಾಸಕರ ಪಕ್ಷಾಂತರದಿಂದ ಮತ್ತಷ್ಟು  ಬಲ ಬರಬಹುದು ಎಂದು ಅಭಿಪ್ರಾಯಪಟ್ಟರು.

ಭಾರತ ವಿಶ್ವಗುರುವಾಗಲು 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಅಗತ್ಯವಿದೆ.  ಬಿಜೆಪಿಯ ಉತ್ತಮ ನೀತಿ, ನಾಯಕತ್ವ, ಧ್ಯೇಯೋದ್ದೇಶಗಳಿಂದಾಗಿ ದೇಶಾದ್ಯಂತ ಬಿಜೆಪಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಇದುವರೆಗೆ ಜಾತಿವಾದ ಮತ್ತು ಭ್ರಷ್ಟಾಚಾರವನ್ನು ಬೆಂಬಲಿಸುತ್ತಿದೆ.  ಇದೀಗ ಗೋವಾದಲ್ಲಿ ಎರಡೂ ಲೋಕಸಭಾ ಸ್ಥಾನಗಳನ್ನು ಮತ್ತು ದೇಶಾದ್ಯಂತ ಎನ್‍ಡಿಎಗೆ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿಯಾಗಿದೆ. ಅದರಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂದು ಸಿ.ಟಿ ರವಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next