ಚೆನ್ನೈ: 17ನೇ ಸೀಸನ್ ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದೆ. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ ತಂಡವು ಗೆಲುವು ಸಾಧಿಸಿದೆ.
ಇದೇ ಮೊದಲ ಬಾರಿಗೆ ಐಪಿಎಲ್ ಆಡಲಿಳಿದ ನ್ಯೂಜಿಲ್ಯಾಂಡ್ ನ ಬ್ಯಾಟಿಂಗ್ ಸೆನ್ಸೇಶನ್ ರಚಿನ್ ರವೀಂದ್ರ ಅವರು ಸಿಎಸ್ ಕೆ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಕೇವಲ 15 ಎಸೆತಗಳಲ್ಲಿ ರಚಿನ್ 37 ರನ್ ಬಾರಿಸಿದರು. ಇದರಲ್ಲಿ ಅವರು ಮೂರು ಬೌಂಡರಿ ಮತ್ತು ಮೂರು ಸಿಕ್ಸರ್ ಹೊಡೆದರು.
ತನ್ನ ಸ್ಪರ್ಧಾತ್ಮಕ ಮನೋಭಾವಕ್ಕೆ ಹೆಸರುವಾಸಿಯಾಗಿರುವ ವಿರಾಟ್ ಕೊಹ್ಲಿ ಅವರು ರಚಿನ್ ಔಟಾಗುವ ವೇಳೆ ತನ್ನದೇ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದರು. ಕರ್ಣ್ ಶರ್ಮಾ ಎಸೆತದಲ್ಲಿ ರಜತ್ ಪಾಟಿದಾರ್ ಗೆ ಕ್ಯಾಚಿತ್ತು ರಚಿನ್ ಔಟಾದರು. ಈ ವೇಳೆ ಕೊಹ್ಲಿ ಕೈ ಸನ್ನೆ ಮಾಡಿ ರಚಿನ್ ಗೆ ಸೆಂಡ್ ಆಫ್ ಮಾಡಿದರು. ಇದು ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿದೆ. ಯುವ ಆಟಗಾರನ ವಿರುದ್ಧ ವಿರಾಟ್ ದರ್ಪ ತೋರಿದ್ದಾರೆ ಎಂದು ಕೆಲವರು ಬರೆದುಕೊಂಡರೆ, ಇನ್ನು ಕೆಲವರು ವಿರಾಟ್ ಬೆಂಬಲಕ್ಕೆ ನಿಂತಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡವು ಆರು ವಿಕೆಟ್ ಕಳೆದುಕೊಂಡು 173 ರನ್ ಪೇರಿಸಿತು. ಚೆನ್ನೈ ತಂಡವು 18.4 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.