ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಹಲವು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ನಗರದ ಸರ್ಕಾರಿ ಜಿಲ್ಲಾಸ್ಪತ್ರೆಗೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜನತಾ ಕರ್ಫ್ಯೂ ಸರಿಯಾಗಿ ಪಾಲನೆಯಾಗದಿದ್ದರೆ ಜಿಲ್ಲಾಧಿಕಾರಿ ಗಮನಕ್ಕೆ ತರುವೆ. ಜಿಲ್ಲಾಧಿಕಾರಿ ಎಲ್ಲೆಡೆ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲು ಸೂಚಿಸುವೆ ಎಂದರು.
ಜಿಲ್ಲೆಯಲ್ಲಿ ಸರ್ಕಾರಿಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಬೆಡ್ ಹಾಗೂ ಆಕ್ಸಿಜನ್ ಕೊರತೆಯಾಗಿಲ್ಲ. ರೆಮ್‌ಡಿಸಿವಿಯರ್ ಬೇಡಿಕೆಯಿದ್ದು, ಸದ್ಯಕ್ಕೆ ಪೂರೈಕೆಯಾಗಿದೆ. ಅಗತ್ಯ ಬಿದ್ದರೆ ರಾಜ್ಯದಿಂದ ಕೇಳಲಿದ್ದೇವೆ ಎಂದರು. ಜಿಲ್ಲೆಯಲ್ಲಿ ಯಾರಿಗಾದರೂ ಸೋಂಕು ದೃಢಪಟ್ಟರೆ ಮನೆಯಲ್ಲಿಯೇ ಐಸೋಲೇಷನ್ ಆಗಿ. ಸೋಂಕಿತರು ಹೊರ ನಡೆದರೆ ಉಳಿದವರಿಗೂ ಸೋಂಕು ತಗುಲಲಿದೆ. ಅಂತಹವರು ಕೂಡಲೇ ಕೋವಿಡ್ ಸೆಂಟರ್‌ಗೆ ಆಗಮಿಸಿ ಚಿಕಿತ್ಸೆ ಪಡೆಯಬೇಕು ಎಂದರು.
ಗುಳೆ ಹೋಗಿ, ಅನ್ಯ ಜಿಲ್ಲೆಗಳಿಂದ ಗ್ರಾಮಗಳಿಗೆ ಆಗಮಿಸಿದ ಜನರ ಮನೆಗೆ ಗ್ರಾಪಂ ಪಿಡಿಒ, ಆಶಾ ಕಾರ್ಯಕರ್ತೆಯರು ತೆರಳಿ ಕೋವಿಡ್ ಪರೀಕ್ಷೆ ಮಾಡಿಸಲು ಸೂಚಿಸಬೇಕು. ಸೋಂಕಿನ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಬೇಕು. ಬಹುಪಾಲು ಜನರು ಹೋಂ ಐಸೋಲೇಷನ್ ಗೆ ಒಳಗಾಗಿದ್ದಾರೆ. ಚಿಕ್ಕ ಚಿಕ್ಕ ಮನೆಯಲ್ಲಿದ್ದ ಬಡ ಕುಟುಂಬಗಳು ಹೋಂ ಐಸೋಲೇಷನ್ ಮಾಡಿದರೆ ಮನೆಯ ಇತರೆ ಸದಸ್ಯರಿಗೂ ಸೋಂಕು ತಗುಲುವ ಸಾಧ್ಯತೆಯಿದೆ. ಸ್ಥಿತಿವಂತರು ಮನೆಯಲ್ಲಿದ್ದರೆ ಉತ್ತಮ, ಬಡ ಕುಟುಂಬಗಳು ಕೋವಿಡ್ ಕೇರ್ ಸೆಂಟರ್‌ಗೆ ಆಗಮಿಸಿ ಚಿಕಿತ್ಸೆ ಪಡೆದು ಐಸೋಲೇಷನ್ ಆಗಬೇಕು ಎಂದರು.
ಜಿಲ್ಲೆಯಲ್ಲಿ ಮುಂಬರುವ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಿದ್ಧವಿದೆ. ಇಲ್ಲಿ ಯಾವ ಕೊರತೆ ಇಲ್ಲ. ಸೋಂಕಿತರು ಹೆಚ್ಚಾದ ಸಂದರ್ಭದಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂದು ಅಧಿ ಕಾರಿಗಳ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದರು.