Advertisement

ಬೆಳಕು, ಕತ್ತಲೆಗಳ ಘರ್ಷಣೆಯಿಂದ ಹೊರಬಂದ ಹಾಡು ‘ಮರಳಿ ಬಾ ಮನ್ವಂತರವೇ ಕಂಬನಿಗಳ ಬಳಿಗೆ..

06:07 PM Jun 13, 2021 | ಶ್ರೀರಾಜ್ ವಕ್ವಾಡಿ |

ಆ ಸಂದರ್ಭದಲ್ಲಿ ಟಿವಿ ಮಾಧ್ಯಮಗಳು ಪರಿಚಯವಾದದಷ್ಟೇ. ಮನರಂಜನೆಯ ಒಂದು ಸೇತುವಾಗಿ ಧಾರಾವಾಹಿಯನ್ನು ಮನೆ ಮನೆಗಳಲ್ಲಿ ಮನೆ ಮಂದಿಯೆಲ್ಲಾ ಕೂತು ಆನಂದಿಸುತ್ತಿದ್ದ ಕಾಲವದು. ತಂತ್ರಜ್ಞಾನದ ಆರಂಭದ ಕಾಲಘಟ್ಟದಲ್ಲಿ ಟಿವಿಯ ಮೂಲಕ ಪ್ರಸಾರವಾಗಿ ಬಹಳ ದೊಡ್ಡ ಪ್ರೇಕ್ಷಕರ ಹೃದಯವನ್ನು ಕದ್ದಿಟ್ಟುಕೊಂಡ “ಮನ್ವಂತರ” ಧಾರಾವಾಹಿಯ ಬಗ್ಗೆ ಪ್ರತ್ಯೇಕಿಸಿ ಹೇಳಬೇಕಿಂದಿಲ್ಲ. ‘ಮರಳಿ ಬಾ ಮನ್ವಂತರವೇ ಕಂಬನಿಗಳ ಬಳಿಗೆ..’ ಎಂಬ ಆ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನಂತೂ ಇಂದಿಗೂ ಕೆಲವರು ಗುನುಗುವುದುಂಟು.

Advertisement

ಕನ್ನಡಿಗರ ಮನಸ್ಸನ್ನು ಗೆದ್ದ ಟಿ. ಎನ್ ಸೀತಾರಾಮ್ ನಿರ್ದೇಶನದ ಹೆಸರಾಂತ ಧಾರಾವಾಹಿ ‘ಮನ್ವಂತರ’ ಯಾರಿಗೆ ಮರೆಯುವುದಕ್ಕೆ ಸಾಧ್ಯ ಹೇಳಿ..? ಧಾರಾವಾಹಿಯನ್ನು ಎಷ್ಟು ಇಷ್ಟ ಪಟ್ಟಿರುತ್ತಾರೋ ಅಷ್ಟೇ ಅದರ ಶೀರ್ಷಿಕೆ ಗೀತೆಯನ್ನು ಕೂಡ ಇಷ್ಟ ಪಟ್ಟಿರುತ್ತಾರೆ ಎನ್ನುವುದಕ್ಕೆ ಅನುಮಾನ ಬೇಡ.

ಧಾರಾವಾಹಿಯ ಬಗ್ಗೆ ನಾನು ಮಾತಾಡುತ್ತಿಲ್ಲ. ಧಾರಾವಾಹಿಯೊಳಗೆ ಕರೆದೊಯ್ಯುವ ಶೀರ್ಷಿಕೆ ಗೀತೆಯ ಬಗ್ಗೆ, ಅದರೊಳಗಿನ ಭಾವ ತೀವ್ರತೆಯ ಬಗ್ಗೆ, ಭಾವದೊಳಗಿನ ಭಾವದ ಬಗ್ಗೆ, ಅದರ ಅಂತರ್ಮುಖದ ಧ್ವನಿಯ ಬಗ್ಗೆ ಹೇಳಿಕೊಳ್ಳಲೇ ಬೇಕು ಅನ್ನಿಸಿದ್ದು, ಕೇಳಿದಷ್ಟು ..ಮತ್ತೆ ಮತ್ತೆ ಕೇಳುವ ಹಾಗೆ ಮಾಡಿದ ಅದರ ಸಾಹಿತ್ಯ, ಸಂಗೀತ ಮತ್ತು ಭಾವ.

ರಾಧಾ ಕಿನ್ಹಾಳ ಅವರ ಸಾಹಿತ್ಯ, ಸಿ. ಅಶ್ವಥ್ ಅವರ ಸಂಗೀತ ನಿರ್ದೇಶನ, ಸಂಗೀತಾ ಕಟ್ಟಿ ಹಾಗೂ ಸಿ. ಅಶ್ವಥ್ ಅವರ ಧ್ವನಿಯಲ್ಲಿ, ಬೆಳಕು ಮತ್ತು ಕತ್ತಲೆಗಳ ಘರ್ಷಣೆಯಿಂದ ಉದಯಿಸಿದ ಶಾಂತ ಭಾವದ  ಹಾಡು, ಮನ್ವಂತರ ಧಾರಾವಾಹಿಯ ಶಿರ್ಷಿಕೆ ಗೀತೆ ‘ಮರಳಿ ಬಾ ಮನ್ವಂತರವೇ ಕಂಬನಿಗಳ ಬಳಿಗೆ’.

ನೋವಿನ ಸ್ವಾಭಿಮಾನದ ಹಾಡು ಕಟ್ಟಿಕೊಳ್ಳುವ ಆರಂಭವೇ ಒಂದು ರೀತಿಯಲ್ಲಿ ಚೆಂದ. ಚಿಮ್ಮುವ ಜ್ವಾಲಾಮುಖಿಯಂತಹ ಒಳ ಬೇಗುದಿಯ ವೇದನೆ ಹೊರಹೊಮ್ಮುವಾಗ ಧ್ವನಿಸುವ ಆಕ್ರೋಶ, ದುಃಖ, ದುಮ್ಮಾನ, ಒಡೆದ ಎದೆಯ ಕಣ್ಣೀರಿಗೆ ಭಾವ ಕೊಟ್ಟ ಕಾವ್ಯವಿದು.

Advertisement

ಆರ್ತ ಭಾವದ ಉತ್ತುಂಗಕ್ಕೆ ಏರಿ ಸಡಿಲಗೊಳ್ಳುವ ಸಮಾಧಾನದ ಧ್ವನಿ, ಸಾತ್ವಿಕ ಕೋಪದ ಅಸಹನೀಯ ಸ್ಥಿತಿಗಳನ್ನು ಹಾಡುಗಳಲ್ಲಿ ನಿವೇದಿಸಿಕೊಳ್ಳುವ ಮನಸ್ಸಿಗೆ ನಾಳೆ ಎನ್ನುವುದು ತುಂಬು ಗರ್ಭದ ಭರವಸೆ ಎಂದು ಹೇಳಿದ ಹಾಡಿದು.

ಒಂದೊಂದು ಮಜಲುಗಳನ್ನು ದಾಟಿ ಸಾಗುವ ಬದುಕು… ಪ್ರೇರಣೆ, ಸ್ಪೂರ್ತಿಗಳೊಂದಿಗೆ ಹಬ್ಬಿ ಹೊಸ ಚೇತನಗಳನ್ನು ಕಾಣುವುದಕ್ಕೆ ಬಯಸುವ ಒಡೆದ ಮನಸ್ಸೊಂದು ಮತ್ತೆ ತನ್ನನ್ನು ತಾನು ಹೊಲಿದುಕೊಳ್ಳುವ ಪ್ರಯತ್ನದಲ್ಲಿ ಹೊಸ ಚೈತನ್ಯವನ್ನು ಅತ್ಯಂತ ಆಪ್ತವಾಗಿ ಕರೆಯುವ ರೀತಿ ಮತ್ತದರ ಭಾವ ಮೈ ಜುಮ್ಮೆನ್ನಿಸದೇ ಇರದು.

ಹಾಡು ಆರಂಭವಾಗುವುದು ಹೀಗೆ…

“ಮರಳಿ ಬಾ ಮನ್ವಂತರವೇ ಕಂಬನಿಗಳ ಬಳಿಗೆ

ಮರಳಿಸು ಹೊಸ ಚೇತನವ ಬಳಲಿದ ಮನಗಳಿಗೆ”

ಈ ಹಾಡು ಎರಡು ಧ್ವನಿಗಳಲ್ಲಿ ಮತ್ತು ಎರಡು ಭಾವಗಳಲ್ಲಿ ಕೇಳುತ್ತೇವೆ. ಒಂದು ವೇದನೆಯ ನಡುಗು ಧ್ವನಿ, ಇನ್ನೊಂದು ಆ ವೇದನೆಯೊಳಗಿನ ಸಮಾಧಾನ ಹೊಂದುವ ಧೈರ್ಯದ ಧ್ವನಿ.

ಆಂತರ್ಯದ ನೋವಿಗೆ ‘ನೀನು ಸ್ವಲ್ಪ ವಿರಮಿಸು’ ಎಂದು ಹೇಳುವ ಸಾಹಿತ್ಯದ ಗಟ್ಟಿತನ ಎಂತಹವನಿಗೂ ಹೊಸದೊಂದು ಚೈತನ್ಯವನ್ನು ಕೊಡದೇ ಇರಲಾರದು.

“ಬೆಳಕನು ನುಂಗಿವೆ ಇಲ್ಲಿ ಕತ್ತಲ ಕಣ್ಣುಗಳು

ಮರೆವಿಗೆ ಸಂದಿವೆ ಇಲ್ಲಿ ಹರುಷದ ಬಣ್ಣಗಳು”

ಲಕ್ಷಣಗಳನ್ನು ಅಲುಗಿಸಿ ಮೆರೆವ ಅವಲಕ್ಷಣಗಳಿಗೆ ಮೃದು ಭಾಷೆಯಿಂದ ಬೈಯ್ಯುವ ಭಾವವಿದು‌. ಈ ದಾರಿ ಹಾಡಾಗಬೇಕು, ಬಣ್ಣಗಳನ್ನು ತುಂಬಿಕೊಳ್ಳಬೇಕು ಎಂದು ಕಾಯುವ ನೋವಿನ ಬಿಂಬದಲ್ಲಿ ಅಸ್ಪಷ್ಟವಾಗಿ ಕಾಣುವ ಬದುಕಿನ ಸಂಕುಚಿತಗೊಂಡ, ಎದೆಯನ್ನು ಹಿಂಡಿ ಹಿಪ್ಪೆಗೊಳಿಸಿದ ಹೃದಯದ ಅಳುವ ಸ್ವರವಿದು. ಅಷ್ಟೇ ಅಲ್ಲ. ಮರೆಯಾದ ಬೆಳಕಿದೆ, ಕಪ್ಪಾದ ಬಣ್ಣಗಳಿವೆ. ಮತ್ತೆ ಹೊಸತನದೊಂದಿಗೆ ಬನ್ನಿ ಎಂದು ಕರೆಯುವ ಅಂಟು ಕಣ್ಗಳ ಭಾವ ಹೃದಯ ಮುಟ್ಟದೇ ಇರುವುದುಂಟೇ.‌.?

“ತೋರು ಬಾ ಮನ್ವಂತರವೇ ಕನಸಿನೂರ ದಾರಿ

ಸಾರು ಬಾ ಶುಭ ಸಂದೇಶ ಕಾಲ ರಥವನೇರಿ”

ಕಲ್ಮಶಗಳನ್ನು ದೂರ ತಳ್ಳಿ ಕಾಲಾಂತರದ ಹೊಸ ಬದಲಾವಣೆಗೆ ಹೊಸತಾಗಿ ಬಾ ಎನ್ನುವ ಭಾವ ಖುಷಿ ಕೊಡದೆ ಇರಲು ಸಾಧ್ಯವೇ ಇಲ್ಲ.

ಈ ಸಾಹಿತ್ಯ ಬಹಳ ಇಷ್ಟವಾಗುವುದು ಯಾಕೆ ಕೇಳಿದರೆ, ಇಲ್ಲಿ ಬದುಕನ್ನು ದೂಷಿಸುವ ಒಂದೇ ಒಂದು ಸಾಲಿಲ್ಲ. ಬದುಕಿನಲ್ಲಿ ಏನೇ ಆದರೂ ಅದು ಹೇಗಾದರೂ ನಡೆಸಿಕೊಳ್ಳುತ್ತದೆ. ಇದು ಬದುಕಿನ ಆಟ, ನೀ ಅದರಲ್ಲಿ ಪಾಲ್ಪಡೆಯಲು ಅಳುವ ಅಗತ್ಯವಿಲ್ಲ. ಹೊಸತನಕ್ಕಾಗಿ ಕಾಯ್ದಿರು ಎಂಬ ಭಾವಾಂಶ ಬದುಕು ಏನಾದರೂ ಪರಮೈಶ್ವರ್ಯ ಎಂದು ಸಾರುವ ಹಾಡು ಎಷ್ಟೋ ಎದೆಯ ಭಾರಗಳನ್ನು ಇಳಿಸಿ, ಹಿತ ಭಾವನೆ ಮೂಡಿಸಿ, ಧನಾತ್ಮಕತೆಯ ಕಂಪನ ಹೆಚ್ಚಿಸುತ್ತದೆ.

“ಮನಸಿನ ಪುಟಗಳ ನಡುವೆ ನೆನಪಿನ ನವಿಲುಗರಿ

ಕಾರ್ಮುಗಿಲ ಅಂಚಿನಲ್ಲಿ ಭರವಸೆ ಹೊನ್ನಝರಿ

ಹಾಡು ಬಾ ಮನ್ವಂತರವೇ ಮರೆತ ಗಾನದೆಳೆಯ

ಬೆಳಗು ಬಾ ಬದುಕನ್ನು ತೊಳೆದು ತಮದ ಕೊಳೆಯ”

ಕತ್ತಲೆಯ ಆಚೆಗೊಂದು ಬೆಳಕಿದೆ. ಏಕೋ ಎಲ್ಲಾ ಸ್ವಲ್ಪ ವಿಷಾದ ಗೀತೆ ಹೆಣೆದುಕೊಳ್ಳುತ್ತಿದೆ. ಬಾ ನನ್ನಲ್ಲಿ ಮತ್ತೆ… ಬಾ ಅವಿತ ಅನುರಾಗಗಳನ್ನೆಲ್ಲಾ ಮತ್ತೆ ಮರಳಿಸು. ಜಡತ್ವಕ್ಕೆ ಚೇತನ ತುಂಬಿಸು ಎಂದು ನಮ್ಮೊಳಗಿನ ಧೈರ್ಯಕ್ಕೆ ಮತ್ತಷ್ಟು ಬಲ ತುಂಬಿಸುವ ಪ್ರಯತ್ನದ ಸಾಲುಗಳಿವು ಅಂತ ನನಗನ್ನಿಸುತ್ತದೆ. ರಾಧಾ ಕಿನ್ಹಾಳರ ಛಂಧಸ್ಸಿನ ಚೆಂದದ ಇಂಪು ಪ್ರತಿ ಸಾಲುಗಳಲ್ಲಿ ಧ್ವನಿಸುತ್ತದೆ.

ಈ ಹಾಡಿನ ವಿಶೇಷಕ್ಕೆ ನಮಸ್ಕರಿಸಲೇ ಬೇಕು‌. ಈ ಹಾಡು ಬೇಡುವುದಿಷ್ಟೇ… ನೀ ಗಟ್ಟಿಯಾಗಿರು. ನೀ ಕುಗ್ಗದಿರು.

ಜೀವನದ ಅರ್ಥವೇನು…? ಬದುಕಿನ ತಾತ್ಪರ್ಯ ಏನು…? ಬೆಳಕು, ಕತ್ತಲೆ, ಸಂತಸ, ದುಃಖಗಳು ಎಲ್ಲವನ್ನೂ ಕೂಡಿ ಹೆಸರಿಟ್ಟ ಬದುಕು ಅರ್ಥ ಕಂಡುಕೊಳ್ಳವುದು ಮತ್ತೆ ಮತ್ತೆ ನಾವು ಕಾಣುವ ಹೊಸತನದಲ್ಲಿ.

ಇಲ್ಲಿ ಬರೆದಿದ್ದು ಈ ಹಾಡಿಗೆ ಕಮ್ಮಿಯೇ… ಇನ್ನು ಉಳಿದದ್ದನ್ನು ಹಾಡಿನಲ್ಲಿ ಕೇಳಿ.

—————————————–

ಸಿ. ಅಶ್ವಥ್ ಅವರು ಹಾರ್ಮೋನಿಯಂ ಹಿಂಡ್ಕೊಂಡು ಕಲಿಸಿ, ಹಾಡಿಸಿದ ಹಾಡಿದು : ಸಂಗೀತಾ ಕಟ್ಟಿ

ರಾಧಾ ಕಿನ್ಹಾಳ ಅವರ ಸಾಹಿತ್ಯ, ಸಿ. ಅಶ್ವಥ್ ಅವರ ರಾಗ ಸಂಯೋಜನೆಯ ಗಟ್ಟಿತನಕ್ಕೆ ಎರಡನೇ ಮಾತಿಲ್ಲ. ದರ್ಬಾರಿ ಕಾನಡಿ ರಾಗದ ಸ್ಪರ್ಶ ಇರುವ ಈ ಹಾಡು, ನಾನು ಹಾಡಿರುವ ಹಾಡುಗಳಲ್ಲಿ, ನನಗಿಷ್ಟವಾದ ಹಾಡುಗಳಲ್ಲಿ ಇದೂ ಕೂಡ ಒಂದು. ಹೊಸತನ ಯಾರಿಗೆ ಇಷ್ಟವಾಗಲ್ಲ ಹೇಳಿ..? ಬದಲಾವಣೆ, ಹೊಸತನ ಯಾವಾಗಲೂ ನಿತ್ಯ ನಿತಂತರ. ಧನಾತ್ಮಕತೆಯ ಕಂಪನಕ್ಕೆ ಮತ್ತಷ್ಟು ಬಲವನ್ನು ನೀಡುವ ಶಕ್ತಿ ಈ ಹಾಡಿನಲ್ಲಿದೆ. ಸಿ. ಅಶ್ವಥ್ ಅವರು ಹಾರ್ಮೋನಿಯಂ ಹಿಡ್ಕೊಂಡು ಕಲಿಸಿ, ಹಾಡಿಸಿದ ಹಾಡು ಇದಾಗಿರುವುದರಿಂದ ಈ ಹಾಡಿನ ಜೊತೆಗೆ ಚೆಂದದ ನೆನಪುಗಳೂ ಕೂಡ ಇವೆ.

ಸಂಗೀತಾ ಕಟ್ಟಿ

ಖ್ಯಾತ ಗಾಯಕಿ  

—————————————

-ಶ್ರೀರಾಜ್ ವಕ್ವಾಡಿ

ಇದನ್ನೂ ಓದಿ : ಕೋವಿಡ್ ಲಾಕಡೌನ್ ಸರ್ಕಾರದ ಪರಿಷ್ಕೃತ ಮಾರ್ಗಸೂಚಿ ಪಾಲಿಸಿ: ವಿಜಯಪುರ ಡಿಸಿ ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next