ರವಿ ಶರ್ಮಾ
ಮಾನ್ವಿ: ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಬಹುತೇಕ ಶಿಕ್ಷಕರ ಹುದ್ದೆ ಖಾಲಿ ಇವೆ. ಪ್ರೌಢಶಾಲೆಗಳಲ್ಲಿ ಗಣಿತ, ವಿಜ್ಞಾನ ಶಿಕ್ಷಕರ ಕೊರತೆ ಇದ್ದು ಎಸ್ಸೆಸ್ಸೆಲ್ಸಿ ಸೇರಿದಂತೆ ವಿವಿಧ ತರಗತಿ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆ ಆಗುತ್ತಿದೆ.
ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸಮಸ್ಯೆಗಳ ಗೂಡಾಗಿವೆ. ಶಿಕ್ಷಕರ ಕೊರತೆ, ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿವೆ. ಕಳೆದ ಮೂರು ವರ್ಷಗಳ ಹಿಂದೆ ನೂತನವಾಗಿ ಪ್ರಾರಂಭವಾದ ತಡಕಲ್, ಚೀಕಲಪರ್ವಿ, ಮಲ್ಲಟ, ಅರೋಲಿ, ಕವಿತಾಳ(ಉರ್ದು) ಪ್ರೌಢಶಾಲೆಗಳಿಗೆ ಇದುವರೆಗೆ ಶಿಕ್ಷಕರನ್ನೇ ನೇಮಿಸಿಲ್ಲ. ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಚಿಂತೆ
ಆಗಿದೆ. ಈ ಪ್ರೌಢಶಾಲೆಗಳಿಗೆ ಕಟ್ಟಡವೂ ಇಲ್ಲದಿರುವುದರಿಂದ ಪ್ರಾಥಮಿಕ ಶಾಲೆಗಳ ಕೊಠಡಿಗಳಲ್ಲೇ ಪ್ರೌಢಶಾಲೆ ನಡೆಸಲಾಗುತ್ತಿದೆ.
ಹುದ್ದೆ ಖಾಲಿ: ತಾಲೂಕಿನಲ್ಲಿ 370 ಪ್ರಾಥಮಿಕ ಶಾಲೆಗಳ ಪೈಕಿ 1,564 ಶಿಕ್ಷಕರ ಹುದ್ದೆಗಳಿವೆ. ಇದರಲ್ಲಿ 1,031 ಶಿಕ್ಷಕರಿದ್ದು, 533 ಹುದ್ದೆಗಳು ಖಾಲಿ ಇವೆ. ಇನ್ನು 56 ಪ್ರೌಢಶಾಲೆಗಳಲ್ಲಿ 466 ಹುದ್ದೆ ಮಂಜೂರಾಗಿವೆ. ಈ ಪೈಕಿ 307 ಶಿಕ್ಷಕರಿದ್ದು, 159 ಹುದ್ದೆಗಳು ಖಾಲಿ ಇವೆ. ಗಣಿತ ಮತ್ತು ವಿಜ್ಞಾನ ವಿಷಯ ಶಿಕ್ಷಕರ ಕೊರತೆಯೇ ಹೆಚ್ಚಿದೆ. ಕೆಲ ಶಾಲೆಗಳಲ್ಲಿ ಮುಖ್ಯ ಗುರುಗಳ ಹುದ್ದೆ ಖಾಲಿ ಇವೆ. ಪ್ರಭಾರಿ ಮುಖ್ಯಗುರುಗಳನ್ನು ನೇಮಕ ಮಾಡಲಾಗಿದೆ. ಶಿಕ್ಷಕರ ಕೊರತೆಯಿಂದಾಗಿ ತಾಲೂಕಿನಲ್ಲಿ ವರ್ಷದಿಂದ ವರ್ಷಕ್ಕೆ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ.
ಸೌಕರ್ಯಗಳಿಲ್ಲ: ತಾಲೂಕಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮೂಲ ಸೌಲಭ್ಯಗಳಿಲ್ಲ. ಮಕ್ಕಳಿಗೆ ಶುದ್ಧ ಕುಡಿಯುವ ನೀರಿಲ್ಲ. ಬೇರೆ ಪ್ರದೇಶದಿಂದ ಬರುವ ಮಕ್ಕಳು ಕುಡಿಯುವ ನೀರಿಗಾಗಿ ಬಾಟಲಿ ಹಿಡಿದುಕೊಂಡು ಶಾಲೆಯ ಸುತ್ತಲಿನ ಮನೆ, ಹೊಟೇಲ್ ಗಳಿಗೆ ಅಲೆಯುವಂತಾಗಿದೆ. ರಾಜೊಳ್ಳಿ ಪ್ರೌಢಶಾಲೆ ಸೇರಿ ಬಹುತೇಕ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೌಲಭ್ಯವಿಲ್ಲ. ವಿದ್ಯಾರ್ಥಿನಿಯರು ಪರದಾಡುವಂತಾಗಿದೆ. ಇನ್ನು ಶಾಲೆಗಳಲ್ಲಿ ಕ್ರೀಡಾ ಮೈದಾನ, ಕ್ರೀಡಾ ಸಾಮಗ್ರಿ ಇಲ್ಲ. ಇದುವರೆಗೆ ಸಮರ್ಪಕವಾಗಿ ಪಠ್ಯಪುಸ್ತಕ ವಿತರಿಸಿಲ್ಲ. ಶಿಕ್ಷಕರ ಕೊರತೆಗೆ ಬೇಸತ್ತ ಮಲ್ಲಟ ಶಾಲಾ ವಿದ್ಯಾರ್ಥಿಗಳು ಇತ್ತೀಚೆಗೆ ಶಾಸಕರಿಗೆ ಫೋನ್ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾರೆ.
ಸೌಲಭ್ಯ ಕಲ್ಪಿಸಲು ನಿರ್ಲಕ್ಷ್ಯ: ಗ್ರಾಮ ಪಂಚಾಯಿತಿಗೆ ಮಂಜೂರಾಗುವ ಅನುದಾನದಲ್ಲಿ ಶೇ.25ರಿಂದ 30ರಷ್ಟು ಶೈಕ್ಷಣಿಕ ಕ್ಷೇತ್ರಕ್ಕೆ ಬಳಸಿಕೊಳ್ಳಲು ಅವಕಾಶವಿದ್ದರೂ ಗ್ರಾಮ ಪಂಚಾಯಿತಿಗಳು ಮಾತ್ರ ನಿರ್ಲಕ್ಷ್ಯ ವಹಿಸುತ್ತಿವೆ. ಗ್ರಾಪಂ ವ್ಯಾಪ್ತಿಯಲ್ಲಿನ ಶಾಲೆಗಳಿಗೆ ಕುಡಿಯುವ ನೀರು ಸರಬರಾಜು, ಪೈಪ್‌ಲೈನ್, ಕಾಂಪೌಂಡ್, ಕೊಠಡಿ ನಿರ್ಮಾಣ, ಕ್ರೀಡಾ ಮೈದಾನ ಅಭಿವೃದ್ಧಿ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಗ್ರಾಪಂ ಅನುದಾನ ಮೀಸಲಿಡಬೇಕು. ಆದರೆ ಗ್ರಾಪಂ ಅಧಿಕಾರಿಗಳು ಮತ್ತು ಸದಸ್ಯರು ಇದಕ್ಕೆ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಶಾಲೆಗಳು ಸೌಲಭ್ಯ ವಂಚಿತ ಆಗುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ತಾಲೂಕಿನ ಪ್ರೌಢಶಾಲೆಗಳಲ್ಲಿ ವಿಷಯವಾರು ಶಿಕ್ಷಕರನ್ನು ನೇಮಿಸದಿದ್ದಲ್ಲಿ ಮುಂಬರುವ ಎಸ್ಸೆಸ್ಸೆಲ್ಸಿ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಶಿಕ್ಷಣ ಇಲಾಖೆ ಅಧಿಕಾರಿಗಳು, ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಬೇಕು. ಶಿಕ್ಷಕರನ್ನು ನೇಮಕ ಮಾಡಬೇಕು. ಶಾಲೆಗಳಿಗೆ ಸೌಲಭ್ಯ ಕಲ್ಪಿಸಬೇಕೆಂದು ಪಾಲಕರು ಆಗ್ರಹಿಸಿದ್ದಾರೆ.