ರವಿ ಶರ್ಮಾ
ಮಾನ್ವಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ನಾಮಕಾವಾಸ್ತೆ ಎಂಬಂತಾಗಿದ್ದು, ಇಲ್ಲಿ ಯಾವುದೇ ಕೃಷಿ ಉತ್ಪನ್ನಗಳ ಮಾರಾಟ-ಖರೀದಿ ಪ್ರಕ್ರಿಯೆ ನಡೆಯುತ್ತಿಲ್ಲ. ಇರುವ ಮಳಿಗೆಗಳ ಮೇಲೆ ಕೆಲವರು ಮನೆ ನಿರ್ಮಿಸಿಕೊಂಡಿದ್ದಾರೆ. ಮತ್ತೆ ಕೆಲವರು ಮಳಿಗೆಗಳನ್ನು ಗೋದಾಮಾಗಿ ಮತ್ತೆ ಕೆಲವರು ಕೃಷಿ ಉತ್ಪನ್ನ ಬಿಟ್ಟು ಇತರೆ ವ್ಯಾಪಾರ ವಹಿವಾಟಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ನಿಯಮ ಉಲ್ಲಂಘನೆ: ಮಾನ್ವಿ ಎಪಿಎಂಸಿಯಲ್ಲಿ ಮಳಿಗೆಗಳನ್ನು ಪಡೆದ ವರ್ತಕರು ಎಪಿಎಂಸಿ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಕೃಷಿ ಉತ್ಪನ್ನ ಮಾರಾಟ ಮತ್ತು ಖರೀದಿ ಪ್ರಕ್ರಿಯೆ ನಡೆಸಬೇಕೆಂಬ ನಿಯಮವಿದ್ದರೂ ವರ್ತಕರು ಮಳಿಗೆಗಳಲ್ಲಿ ಕೃಷಿಯೇತರ ಸರಕು ಮಾರಾಟ, ಸಂಗ್ರಹ ಮಾಡುತ್ತಿದ್ದಾರೆ. ಕೆಲವರಂತೂ ತಮಗೆ ಇಷ್ಟ ಬಂದಂತೆ ಮಳಿಗೆ ನಿರ್ಮಾಣ ಮಾಡಿಕೊಂಡು ಬಾಡಿಗೆಗೆ ನೀಡಿದ್ದಾರೆ. ವಿಶ್ರಾಂತಿ ಕೊಠಡಿಗಳ ನಿರ್ಮಾಣಕ್ಕೆ ಅವಕಾಶವಿದ್ದು, ಇದನ್ನೇ ನೆಪ ಮಾಡಿಕೊಂಡ ಕೆಲವರು ಗೋದಾಮುಗಳ ಮೇಲೆ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಮನೆಗಳಲ್ಲಿ ಸಿಲಿಂಡರ್ ಗಳನ್ನು ಬಳಸಲಾಗುತ್ತಿದೆ. ಇದೆಲ್ಲಾ ಗೊತ್ತಿದ್ದರೂ ಎಪಿಎಂಸಿ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಅನುಮಾನಕ್ಕೆಡೆ ಮಾಡಿದೆ.
ಆದಾಯಕ್ಕೆ ಕೊಕ್ಕೆ: ಮಾನ್ವಿ ಎಪಿಎಂಸಿಯಲ್ಲಿ ಇ-ಟೆಂಡರ್ ವ್ಯವಸ್ಥೆ ಇಲ್ಲ. ಎಪಿಎಂಸಿಯಲ್ಲಿನ ವರ್ತಕರು ಎಪಿಎಂಸಿ ಪ್ರಾಂಗಣದಲ್ಲಿ ಕೃಷಿ ಉತ್ಪನ್ನ ವಹಿವಾಟು ನಡೆಸುವುದಕ್ಕಿಂತ ಪಟ್ಟಣದ ವಿವಿಧೆಡೆ ಮತ್ತು ಹಳ್ಳಿಗಳಲ್ಲಿ ಅಂಗಡಿ ತೆರೆದು ಸಣ್ಣಪುಟ್ಟ ರೈತರಿಂದ ಹತ್ತಿ ಇತರೆ ಕೃಷಿ ಉತ್ಪನ್ನ ಖರೀದಿ-ಮಾರಾಟ ನಡೆಸುತ್ತಿದ್ದಾರೆ. ದೊಡ್ಡ ಪ್ರಮಾಣದ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ರಾಯಚೂರು ಎಪಿಎಂಸಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇನ್ನು ಅಲ್ಪ ಪ್ರಮಾಣದಲ್ಲಿ ಬೆಳೆದ ರೈತರು ತಮಗೆ ಪರಿಚಿತರಿರುವ, ಹತ್ತಿರದಲ್ಲೇ ಇರುವವರಿಗೆ ಕೃಷಿ ಉತ್ಪನ್ನ ಮಾರುತ್ತಾರೆ. ಹೀಗಾಗಿ ಎಪಿಎಂಸಿಯಲ್ಲಿ ವಹಿವಾಟು ಕ್ಷೀಣಿಸುತ್ತಿರುವುದರಿಂದ ಎಪಿಎಂಸಿ ಆದಾಯಕ್ಕೆ ಕೊಕ್ಕೆ ಬಿದ್ದಿದೆ.
ಅಲ್ಲದೆ ಕೆಲ ವ್ಯಾಪಾರಸ್ಥರು ಎಪಿಎಂಸಿಯ ಅಧಿಕೃತ ಸಂಖ್ಯೆಯ ರಸೀದಿ ಬಳಸದೆ ಬಿಳಿ ಚೀಟಿ ಮೇಲೆ ವ್ಯಾಪಾರ ಮಾಡುತ್ತಿರುವುದರಿಂದಲೂ ಎಪಿಎಂಸಿ ಆದಾಯಕ್ಕೆ ಹೊಡೆತ ಬೀಳುತ್ತಿದೆ. ಸರ್ಕಾರದ ಕಣ್ಣಿಗೆ ಮಣ್ಣೆರೆಚುವ ಕೆಲಸ ವರ್ತಕರಿಂದ ಆಗುತ್ತಿದೆ. ವರ್ತಕರು ಮಾತ್ರ ಮಳಿಗೆಗಳನ್ನು ಬಾಡಿಗೆ ನೀಡಿ ಹಣ ಗಳಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಕಾರ್ಯದರ್ಶಿ ನಿರ್ಲಕ್ಷ್ಯ : ಇದಕ್ಕೆಲ್ಲಾ ಮುಖ್ಯ ಕಾರಣ ಎಪಿಎಂಸಿ ಕಾರ್ಯದರ್ಶಿಗಳ ನಿರ್ಲಕ್ಷ್ಯವೇ ಕಾರಣ ಎನ್ನುತ್ತಾರೆ ರೈತ ಮುಖಂಡ ಪ್ರಹ್ಲಾದ. ಮಳಿಗೆ ಬಾಡಿಗೆ ಪಡೆದ ವರ್ತಕರ ಮೇಲೆ ನಿಗಾ ವಹಿಸಬೇಕು. ಮಳಿಗೆ ನೀಡುವಾಗ ಮಾಡಿಕೊಂಡ ಒಪ್ಪಂದಗಳ ಬಗ್ಗೆ ಆಗಾಗ ಪರಿಶೀಲನೆ ಮಾಡಬೇಕು. ನಿಯಮ ಉಲ್ಲಂಘಿಸಿದವರ ಪರವಾನಗಿ ರದ್ದು ಮಾಡುವ ಅಧಿಕಾರ ಕಾರ್ಯದರ್ಶಿಗೆ ಇದ್ದರೂ ಜಾಣಕುರುಡುತನ ಪ್ರದರ್ಶಿಸುತ್ತಾರೆ. ಕಾಟಾಚಾರಕ್ಕೆ ಎಂಬಂತೆ ಅಲ್ಪ ಪ್ರಮಾಣದ ದಂಡ ವಿ ಧಿಸಿ ಇಲ್ಲವೇ ನೋಟಿಸ್ ಜಾರಿ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಅವರು. ಇನ್ನಾದರೂ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ಎಪಿಎಂಸಿ ಉಪನಿರ್ದೇಶಕರು ಮಾನ್ವಿ ಎಪಿಎಂಸಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕಿದೆ. ಮಾನ್ವಿ ಎಪಿಎಂಸಿಯಲ್ಲಿ ಕೃಷಿ ಉತ್ಪನ್ನಗಳ ವ್ಯಾಪಾರ ವಹಿವಾಟು ನಡೆಸುವ ಮೂಲಕ ಎಪಿಎಂಸಿ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ ಎನ್ನುತ್ತಾರೆ ಸಾರ್ವಜನಿಕರು.