ಕನ್ನಡದಲ್ಲಿ ಹಾರರ್ ಚಿತ್ರಗಳ ಮುಂದುವರೆದ ಭಾಗ ಮೂಡುವುದು ತೀರಾ ವಿರಳ. ಹಾಗೆ ನೋಡಿದರೆ, ಕೆಲವು ಹಾರರ್ ಚಿತ್ರಗಳು ಭಾಗ 2ರಲ್ಲಿ ಕಾಣಿಸಿಕೊಳ್ಳುವ ಕುರಿತು ಈಗಾಗಲೇ ಸುದ್ದಿಯಾಗಿವೆ. ಈಗ ಆ ಸಾಲಿಗೆ “ಮಂತ್ರಂ’ ಚಿತ್ರವೂ ಸೇರಿದೆ. ಕಳೆದ ವಾರವಷ್ಟೇ “ಮಂತ್ರಂ’ ಬಿಡುಗಡೆಯಾಗಿದೆ. ಇದು ಪಕ್ಕಾ ಹಾರರ್ ಚಿತ್ರ. ಒಂದು ಸಿನಿಮಾದ ಮುಂದುವರೆದ ಭಾಗ ಬರುತ್ತೆ ಅಂದರೆ, ಮೊದಲ ಚಿತ್ರ ಯಶಸ್ಸು ಆಗಿರಲೇಬೇಕು.
ಇಲ್ಲವೇ, ಒಂದಷ್ಟು ಪ್ರಶ್ನೆಗಳನ್ನು ಉಳಿಸಿಕೊಂಡಿರಬೇಕು, ಆ ಪ್ರಶ್ನೆಗಳಿಗೆ ಮುಂದುವರೆದ ಭಾಗದಲ್ಲಿ ಉತ್ತರ ಕೊಡುವ ಕೆಲಸ ಚಿತ್ರತಂಡದಲ್ಲಾಗುತ್ತದೆ. ಇಲ್ಲೀಗ “ಮಂತ್ರಂ’ ಚಿತ್ರತಂಡ ಅಂತಹ ಹಲವು ಪ್ರಶ್ನೆಗಳಿಗೆ “ಮಂತ್ರಂ 2′ ನಲ್ಲಿ ಉತ್ತರ ಕೊಡಲು ಹೊರಟಿದೆ. “ಮಂತ್ರಂ’ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಒಂದಷ್ಟು ಪ್ರಶ್ನೆಗಳನ್ನು ಬಿಡಲಾಗಿದೆ. ಸಮಾಜದ ವ್ಯವಸ್ಥೆ ಬದಲಾಗುವುದೇ ಇಲ್ಲವೇ ಎಂಬ ಪ್ರಶ್ನೆಯೂ ಇದೆ.
ಅದಷ್ಟೇ ಅಲ್ಲ, ಇನ್ನೂ ಅನೇಕ ವಿಷಯಗಳನ್ನು ಗೊಂದಲದಲ್ಲಿರಿಸಲಾಗಿದೆ. ಅವೆಲ್ಲದ್ದಕ್ಕೂ “ಮಂತ್ರಂ 2’ನಲ್ಲಿ ಉತ್ತರ ನೀಡಲು ಸಜ್ಜಾಗಿದ್ದಾರೆ ನಿರ್ದೇಶಕ ಸಜ್ಜನ್ ಮತ್ತು ನಿರ್ಮಾಪಕ ಅಮರ್ ಚೌದರಿ. ಅಂದಹಾಗೆ, ಇವರಿಬ್ಬರಿಗೂ “ಮಂತ್ರಂ’ ಮೊದಲ ಪ್ರಯತ್ನ. ಸಿನಿಮಾ ಬಿಡುಗಡೆ ಕಂಡಿದ್ದು ಕಡಿಮೆ ಚಿತ್ರಮಂದಿರಗಳಲ್ಲಾದರೂ, ಎಲ್ಲೆಡೆಯಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವ ಖುಷಿ ಅವರದು.
ಹಾಗಾಗಿ, ಅದೇ ಖುಷಿಯಲ್ಲಿ ಮುಂದುವರೆದ ಭಾಗ ಮಾಡಲು ಸಜ್ಜಾಗಿರುವುದಾಗಿ ಹೇಳುತ್ತಾರೆ ಅಮರ್. “ಮಂತ್ರಂ’ ನಲ್ಲಿ ಆತ್ಮಕ್ಕೆ ನ್ಯಾಯ ಸಿಕ್ಕಿಲ್ಲ. ಹಾಗಾದರೆ, ವ್ಯವಸ್ಥೆ ಸರಿಯಿಲ್ಲವೇ? ಆ ವ್ಯವಸ್ಥೆಯನ್ನು ಸರಿಪಡಿಸಲು ಯಾರು ಬರುತ್ತಾರೆ. ಮುಂದುವರೆದ ಭಾಗದಲ್ಲೇನಾದರೂ ಆತ್ಮ ಪುನಃ ಎಂಟ್ರಿಕೊಡುತ್ತಾ? ಇಂತಹ ಹತ್ತಾರು ಪ್ರಶ್ನೆಗಳು ಬರುವುದು ಸಹಜ. ಇಲ್ಲಿ ಎಲ್ಲವೂ ಹೌದು.
ಆದರೆ, “ಮಂತ್ರಂ 2′ ಮಾತ್ರ ಹಾರರ್‌ಗೆ ಅಂಟಿಕೊಂಡಿಲ್ಲ ಎಂಬ ಉತ್ತರ ಅವರಿಂದ ಬರುತ್ತೆ. ಅಲ್ಲಿ ಪುಟ್ಟ ಜೀವವನ್ನು ಕಳೆದುಕೊಂಡ ಅಪ್ಪ ಏನು ಮಾಡುತ್ತಾನೆ. ಬರೀ ನಾಲ್ಕು ದಿನಗಳ ಹೋರಾಟಗಳಿಂದ ನ್ಯಾಯ ಪಡೆಯಲು ಸಾಧ್ಯವೇ? ಹಾಗಾದರೆ, ನ್ಯಾಯಕ್ಕಾಗಿ ಏನೆಲ್ಲಾ ನಡೆಯುತ್ತೆ ಎಂಬ ಅಪರೂಪದ ಅಂಶಗಳು “ಮಂತ್ರಂ 2’ನಲ್ಲಿರಲಿವೆಯಂತೆ. ಎಲ್ಲರೂ ಅಂದುಕೊಂಡಂತೆ “ಮಂತ್ರಂ 2′ ಹಾರರ್ ಚಿತ್ರವಲ್ಲ.
ಅದೊಂದು ಕ್ಲಾಸ್ ಸಿನಿಮಾ ಆಗಲಿದೆ. ಸಮಾಜದಲ್ಲಿರುವ ಕೆಟ್ಟ ವ್ಯವಸ್ಥೆಗೊಂದು ಪರಿಹಾರ ಕೊಡುವ ನಿಟ್ಟಿನಲ್ಲಿ ಚಿತ್ರ ಮೂಡಿಬರಲಿದೆ ಎನ್ನುತ್ತಾರೆ ಅಮರ್ ಚೌದರಿ. ಹಾಗಾದರೆ, “ಮಂತ್ರಂ 2′ ಚಿತ್ರದಲ್ಲಿ ಇದೇ ತಂಡ ಮುಂದುವರೆಲಿದೆಯಾ? ಖಂಡಿತ ಇಲ್ಲ, ಮುಂದುವರೆದ ಭಾಗದಲ್ಲಿ ನುರಿತ ಕಲಾವಿದರು ಇರಲಿದ್ದಾರೆ. ಇನ್ನೊಬ್ಬ ಹೀರೋ ಕೂಡ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಇಲ್ಲಿ ಕಮರ್ಷಿಯಲ್ ಅಂಶಕ್ಕಿಂತ ಸಮಾಜಕ್ಕೊಂದು ಸಂದೇಶ ಕೊಡುವ ಉದ್ದೇಶದಿಂದ ಈ ಚಿತ್ರ ಮಾಡಲಾಗುತ್ತಿದೆ. ಚಿತ್ರಕ್ಕೆ ರವಿಬಸ್ರೂರ್ ಸಂಗೀತದ ಜೊತೆ ಹಿನ್ನೆಲೆ ಸಂಗೀತ ಕೊಡಲಿದ್ದಾರೆ. ಈ ಬಾರಿ ಕೆ.ಎಂ.ಪ್ರಕಾಶ್ ಅವರು ಕತ್ತರಿ ಹಿಡಿಯಲಿದ್ದಾರೆ. ಉಳಿದಂತೆ “ಬಾಹುಬಲಿ’ ಸಿನಿಮಾದಲ್ಲಿ ಗ್ರಾಫಿಕ್ಸ್ ಕೆಲಸ ಮಾಡಿದ್ದ ತಂತ್ರಜ್ಞರೇ “ಮಂತ್ರಂ 2′ ಚಿತ್ರಕ್ಕೂ ಕೆಲಸ ಮಾಡಲಿದ್ದಾರೆ. ಬಿಗ್‌ಬಜೆಟ್‌ನಲ್ಲೇ ಚಿತ್ರ ತಯಾರಾಗಲಿದೆ ಎಂಬುದು ಅಮರ್ ಮಾತು.